ಕಠಿಣ ಪರಿಶ್ರಮವೇ ಯಶಸ್ಸಿಗೆ ಸುಲಭ ದಾರಿ

ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಕಿವಿಮಾತು
ರಾನಡೆ ಮಂದಿರದಲ್ಲಿ ರೋಟರಿ ಸ್ಟಡಿ ಸರ್ಕಲ್ ಗ್ರಂಥಾಲಯ ಉದ್ಘಾಟನೆ

ಬೆಳಗಾವಿ: ಯಾವುದೇ ಉದ್ಯಮ ನಡೆಸುತ್ತಿರಲಿ, ಯಾವುದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರಲಿ, ಕಠಿಣ ಪರಿಶ್ರಮ ಇರದಿದ್ದರೆ ಯಾರೂ ಸುರಕ್ಷಿತರಲ್ಲ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ವಿಜಯ ಸಂಕೇಶ್ವರ ಹೇಳಿದ್ದಾರೆ.

ನಗರದ ಹಿಂದವಾಡಿಯ ಧರ್ಮದರ್ಶನಗಳ ತೌಲನಿಕ ಅಧ್ಯಯನ ಕೇಂದ್ರ(ಗುರುದೇವ ರಾನಡೆ ಮಂದಿರ)ದಲ್ಲಿ ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ನಿರ್ಮಿಸಲಾದ ರೋಟರಿ ಸ್ಟಡಿ ಸರ್ಕಲ್ ಗ್ರಂಥಾಲಯವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಸದ್ಯ ಯಾವುದೇ ಉದ್ಯಮದಲ್ಲಿ ರಹಸ್ಯ ಹಾಗೂ ಏಕಸ್ವಾಮ್ಯತೆ ಇಲ್ಲ. ಸ್ಪರ್ಧೆ ಸಹಜ.ಯಶಸ್ಸಿಗೆ ಯೋಧರಂತೆ ಕೆಲಸ ಮಾಡಬೇಕಾದ್ದು ಅನಿವಾರ್ಯ.ಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪ್ಡೇಟ್ ಇರಲೇಬೇಕು. ಕೆಲಸದ ಮೇಲೆ ಶ್ರದ್ಧೆ ಇದ್ದರೆ ಕಂಪನಿಯೇ ನಿಮ್ಮನ್ನು ಮೇಲಕ್ಕೆ ಎತ್ತುತ್ತದೆ ಎಂದು ಕಿವಿಮಾತು ಹೇಳಿದರು.

ವಿಆರ್‌ಎಲ್ ಕಂಪನಿ ಒಂದು ಟ್ರಕ್‌ನಿಂದ ಆರಂಭವಾಗಿ ಇಂದು ಬಸ್ ಮತ್ತು ಟ್ರಕ್ ಸೇರಿ 4800 ವಾಹನಗಳನ್ನು ಹೊಂದಿದೆ. ಶ್ರೀನಗರ ಹೊರತುಪಡಿಸಿ ದೇಶದ ಎಲ್ಲೆಡೆ ವಿಆರ್‌ಎಲ್ ಶಾಖೆಗಳಿವೆ. ವಾರ್ಷಿಕ 2 ಲಕ್ಷ ರೂ. ವಹಿವಾಟಿನೊಂದಿಗೆ ಆರಂಭವಾದ ಕಂಪನಿ ಇಂದು 2 ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದೆ.

ಇದು ಕಠಿಣ ಪರಿಶ್ರಮ, ಅಚಲ ನಿರ್ಣಯ, ಬಾಲ್ಯದಲ್ಲೇ ಕಲಿತ ಕೆಲಸ, ದುಡಿಮೆಯಲ್ಲಿ ವಿಶ್ವಾಸ, ಗಳಿಸಿದ ಅನುಭವ ಫಲ ಎಂದು ತಮ್ಮ ಯಶಸ್ಸಿನ ಕಥೆಯನ್ನು ವಿಜಯ ಸಂಕೇಶ್ವರ ಅವರು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಮಕ್ಕಳಿಗೆ ಕೆಲಸ ಕೊಡಿ

ಮಕ್ಕಳಿಗೆ ಕೆಲಸ ಮಾಡಲು ಕೊಡಿ. ಆಟ ಆಡಲು, ನಗಲು ಸ್ವಾತಂತ್ರೃ ನೀಡಿ ಎಂದು ವಿಜಯ ಸಂಕೇಶ್ವರ ಪಾಲಕರಿಗೆ ಕಿವಿ ಮಾತು ಹೇಳಿದರು. ಅಬ್ದುಲ್ ಕಲಾಂ, ಧೀರೂಭಾಯಿ ಅಂಬಾನಿ, ಮುಖೇಶ ಅಂಬಾನಿ ಮುಂತಾದ ಸಾಧಕರ ಸಾಧನೆಯ ಹಿಂದಿನ ಶ್ರಮದ ಗುಟ್ಟನ್ನು ತೆರೆದಿಟ್ಟ ಅವರು, ದೊಡ್ಡ ಕನಸು ಕಾಣಲು, ದೊಡ್ಡ ದೊಡ್ಡ ಕೆಲಸ ಮಾಡಲು ನಾವು ಚಿಕ್ಕವರಿದ್ದಾಗಲೇ ಸಣ್ಣ ಸಣ್ಣ ಕೆಲಸಗಳನ್ನು ಮಾಡಲು ಕಲಿಯಬೇಕು ಎಂದರು.

ಶಾಸಕ ಅನಿಲ ಬೆನಕೆ ಮಾತನಾಡಿ, ಕಠಿಣ ಪರಿಶ್ರಮಕ್ಕೆ ಡಾ. ವಿಜಯ ಸಂಕೇಶ್ವರ ಅವರು ದೊಡ್ಡ ರೋಲ್ ಮಾಡೆಲ್. ಅವರು ಕ್ರಿಯಾಶೀಲರೂ, ಚಲನಶೀಲರೂ ಆಗಿ ಹಗಲು ರಾತ್ರಿ ದುಡಿಯುತ್ತಿರುತ್ತಾರೆ ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಮುಕುಂದ ಉಡಚಣಕರ ಮಾತನಾಡಿ, ಗ್ರಂಥಾಲಯ ಬೆಳವಣಿಗೆಗೆ ಸಾಧ್ಯವಾದ ಎಲ್ಲ ನೆರವು ನೀಡುವ ಭರವಸೆ ನೀಡಿದರು.

ಡಾ. ವಿಜಯ ಸಂಕೇಶ್ವರ ಅವರನ್ನು ಅಧ್ಯಯನ ಕೇಂದ್ರದ ವತಿಯಿಂದ ಸನ್ಮಾನಪತ್ರ ನೀಡಿ, ಸನ್ಮಾನಿಸಲಾಯಿತು. ಶಾಸಕ ಅನಿಲ ಬೆನಕೆ, ಗ್ರಂಥಾಲಯ ಸ್ಥಾಪನೆಗೆ ನೆರವಾದ ರೋಟರಿ ಕ್ಲಬ್ ಅಧ್ಯಕ್ಷ ಮುಕುಂದ ಉಡಚಣಕರ ಹಾಗೂ ಮಾಜಿ ಅಧ್ಯಕ್ಷ ಸಚಿನ್ ಬಿಚ್ಚು ಅವರನ್ನೂ ಸನ್ಮಾನಿಸಲಾಯಿತು.
ಅಧ್ಯಯನ ಕೇಂದ್ರದ ಕಾರ್ಯದರ್ಶಿ ಎಂ.ಬಿ.ಝಿರಲಿ ಪ್ರಾಸ್ತಾವಿಕ ಮಾತನಾಡಿದರು. ಉದ್ಯಮಿ ಶಿವಕಾಂತ ಸಿದ್ನಾಳ, ಸುಬ್ರಹ್ಮಣ್ಯ ಭಟ್, ಇತರರು ಇದ್ದರು. ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮೋದಿ ವಿಶ್ವ ನಾಯಕ

ನರೇಂದ್ರ ಮೋದಿ ಅವರು ಮುಖ್ಯ ಮಂತ್ರಿಯಾಗುವ ಮುನ್ನವೇ, ಭವಿಷ್ಯದಲ್ಲಿ ಮುಖ್ಯಮಂತ್ರಿ ಆದರೆ ಏನೇನು ಮಾಡಬೇಕು ಎಂದು ಯೋಚಿಸುತ್ತಿದ್ದರು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅವರು ಕೇವಲ ದೇಶದ ಪ್ರಧಾನಿ ಆಗಿ ಉಳಿದಿಲ್ಲ. ಜಗತ್ತಿನ ಪ್ರಧಾನಿ ಆಗಿ ಬೆಳೆದಿದ್ದಾರೆ. ಅವರ ಬೆಳವಣಿಗೆಗೆ ಬಡತನವೇ ಕಾರಣ. ತಳಮಟ್ಟದಿಂದ ಬಂದ ಕಾರಣದಿಂದ ಅವರು ಒಳ್ಳೆಯ ಆಡಳಿತ ನೀಡುತ್ತಿದ್ದಾರೆ ಎಂದರು.