ಆರ್​ಟಿಇ ವಿವರ ಸೇಲ್!

|ದೇವರಾಜ್ ಎಲ್.

ಬೆಂಗಳೂರು: ಶಾಲಾ ವಿದ್ಯಾರ್ಥಿಗಳು ಹಾಗೂ ಪಾಲಕರ ಸಂಪೂರ್ಣ ಮಾಹಿತಿ ಇರುವ ಆಪ್ ರೂಪಿಸುವ ನೆಪದಲ್ಲಿ ಲಕ್ಷಾಂತರ ಜನರ ಖಾಸಗಿ ಮಾಹಿತಿಯನ್ನು ಸಂಸ್ಥೆಯೊಂದಕ್ಕೆ ನೀಡುವ ಅನುಮಾನಾಸ್ಪದ ಯೋಜನೆಗೆ ಶಿಕ್ಷಣ ಇಲಾಖೆ ತಿಲಾಂಜಲಿ ನೀಡಿದ ಬೆನ್ನಲ್ಲೇ, ವಿದ್ಯಾರ್ಥಿಗಳ ಮಾಹಿತಿ ದೆಹಲಿಯ ಎನ್​ಜಿಒ ಒಂದಕ್ಕೆ ಮಾರಾಟವಾಗುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

ಶಿಕ್ಷಣ ಹಕ್ಕು ಕಾಯ್ದೆ (ಆರ್​ಟಿಇ) ಅನ್ವಯ ಸಲ್ಲಿಕೆಯಾಗುವ ಅರ್ಜಿಗಳಲ್ಲಿ ನಮೂದಾಗಿರುವ ಪಾಲಕರು ಹಾಗೂ ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಒಪ್ಪಂದ ನಡೆದಿರುವುದು ವಿಜಯವಾಣಿ ನಡೆಸಿದ ತನಿಖೆಯಲ್ಲಿ ಬಯಲಾಗಿದೆ. ಪ್ರತಿ ವಿದ್ಯಾರ್ಥಿಯ ಮಾಹಿತಿಯನ್ನು 64 ರೂ.ನಂತೆ ಮಾರಾಟ ಮಾಡಲು ಸಿದ್ಧತೆ ನಡೆದಿದೆ.

ಈ ಡೀಲ್​ನಲ್ಲಿ ಸರ್ಕಾರದ ಪಾತ್ರವಿಲ್ಲ. ದೆಹಲಿ ಮೂಲದ ‘ಇಂಡಸ್ ಆಕ್ಷನ್’ ಕಂಪನಿಯು ಬೆಂಗಳೂರಿನ ಆರ್​ಟಿಇ ವಿದ್ಯಾರ್ಥಿಗಳು ಮತ್ತು ಪಾಲಕರ ಸಂಘ (ಎಸ್​ಟಿಯುಪಿಎ) ಎಂಬ ಸರ್ಕಾರೇತರ ಸಂಸ್ಥೆಯೊಂದಿಗೆ ಕಳೆದ 2 ವಾರದ ಹಿಂದೆ ಮಾರಾಟದ ಒಪ್ಪಂದ ಮಾಡಿಕೊಂಡಿದೆ.

ಆರ್​ಟಿಇ ಜಾಗೃತಿ ಮೂಡಿಸಲು ಈ ಒಪ್ಪಂದ ನಡೆದಿದೆ ಎಂದು ಎನ್​ಜಿಒ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈ ಒಪ್ಪಂದದ ಉದ್ದೇಶವೇನು ಎಂಬುದು ಸ್ಪಷ್ಟವಾಗಿಲ್ಲ. ಈ ಶಂಕಾಸ್ಪದ ಒಪ್ಪಂದದಲ್ಲಿ ಸರ್ಕಾರಿ ಅಧಿಕಾರಿಗಳೂ ಶಾಮೀಲಾಗಿರುವ ಅನುಮಾನವಿದೆ.

ಒಪ್ಪಂದದಲ್ಲಿ ಏನಿದೆ?: ಎನ್​ಜಿಒ ಮತ್ತು ಖಾಸಗಿ ಕಂಪನಿ ಮಾಡಿಕೊಂಡಿರುವ ಒಪ್ಪಂದದ ಪ್ರತಿ ವಿಜಯವಾಣಿಗೆ ಲಭ್ಯವಾಗಿದೆ.

ಆರ್​ಟಿಇ ಮೂಲಕ ಅರ್ಜಿ ಸಲ್ಲಿಸಿದ ವಿವರ, ಸ್ವೀಕೃತಿ ಅರ್ಜಿಗಳ ಮಾಹಿತಿಯನ್ನು ಪಿಡಿಎಫ್ ಮೂಲಕ ಇ-ಮೇಲ್​ನಲ್ಲಿ ಕಳುಹಿಸಬೇಕು. ಕಳುಹಿಸಿದ 4 ದಿನದೊಳಗೆ ಪ್ರತಿ ಅರ್ಜಿಗೆ 64 ರೂ. ಹಣ ರವಾನೆ ಮಾಡಲಾಗುತ್ತದೆ. ಮಾಹಿತಿ ಕೇಂದ್ರ ಸ್ಥಾಪನೆಗಾಗಿ ಒಪ್ಪಂದದ ಬಳಿಕ ಎಸ್​ಟಿಯುಪಿಎಕ್ಕೆ ಮುಂಗಡವಾಗಿ 30 ಸಾವಿರ ರೂ. ನೀಡುವುದಾಗಿ ಒಪ್ಪಂದದಲ್ಲಿ ಸ್ಪಷ್ಟ ಪಡಿಸಿದೆ. ಎಸ್​ಟಿಯುಪಿಎ ರಾಜ್ಯದಲ್ಲಿ 35 ನೋಡಲ್ ಕೇಂದ್ರಗಳನ್ನು ತೆರೆದಿದ್ದು, ಈ ಪೈಕಿ 32 ಕೇಂದ್ರಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಪಾಲಕರಿಗೆ ಉಚಿತವಾಗಿ ಆರ್​ಟಿಇ ಅರ್ಜಿ ಸಲ್ಲಿಸಲು ಸಹಾಯ ಮಾಡಲಾಗುತ್ತಿದೆ ಎಂದು ಕೇಂದ್ರದ ಅಧಿಕಾರಿಗಳು ಪ್ರಕಟಣೆ ಮತ್ತು ರಸ್ತೆಗಳಲ್ಲಿ ಬ್ಯಾನರ್ ಹಾಕಿ ಪ್ರಚಾರ ಮಾಡುತ್ತಿದ್ದಾರೆ.

ವಿದೇಶಿ ದೇಣಿಗೆ ಸಂಗ್ರಹ ಗುರಿ?: ರಾಜ್ಯದಲ್ಲಿನ ಆರ್​ಟಿಇ ಮಾಹಿತಿ ಪಡೆದು ಉತ್ತಮ ಕೆಲಸ ಮಾಡುತ್ತಿರುವುದಾಗಿ ಬಿಂಬಿಸಿಕೊಳ್ಳುವ ಮೂಲಕ ವಿದೇಶಿ ಅನುದಾನ ಪಡೆಯುವ ಸಂಚು ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸರ್ಕಾರೇತರ ಸಂಘ ಸಂಸ್ಥೆಗಳಿಗೆ ವಿದೇಶಿ ಕಂಪನಿಗಳು ದೇಣಿಗೆ ನೀಡುತ್ತವೆ. ಒಳ್ಳೆಯ ಟ್ರಾಕ್ ರೆಕಾರ್ಡ್ ಇದ್ದಲ್ಲಿ ಕಂಪನಿಗಳು ದೊಡ್ಡ ಬಂಡವಾಳ ಹೂಡಿಕೆ ಮಾಡುತ್ತವೆ. ಎನ್​ಜಿಒಗಳಿಗೆ ಹಣ ನೀಡುವ ಕಂಪನಿಗಳಿಗೆ ಅಲ್ಪ ಮಟ್ಟದ ತೆರಿಗೆ ವಿನಾಯಿತಿ ಇರುತ್ತದೆ. ಈ ರೀತಿ ಬಂಡವಾಳ ಕ್ರೂಢೀಕರಿಸಲು ಎನ್​ಜಿಒಗಳು ಒಳ್ಳೆಯ ಕೆಲಸ ಮಾಡಿರುವುದಕ್ಕೆ ದಾಖಲೆ ತೋರಿಸುವುದು ಅವಶ್ಯಕ. ಇದಕ್ಕಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸುವುದೇ ಹೆಚ್ಚು. ಹೀಗಾಗಿ ಕೇಂದ್ರ ಸರ್ಕಾರ ಎನ್​ಜಿಒಗಳಿಗೂ ಆಡಿಟ್ ವರದಿ ಕಡ್ಡಾಯ ಮಾಡಿದೆ.

 ಪಾಲಕರು ಮತ್ತು ವಿದ್ಯಾರ್ಥಿಗಳ ಮಾಹಿತಿಯನ್ನು 64 ರೂ.ಗೆ ಮಾರಾಟ ಮಾಡುತ್ತಿರುವ ಹಿಂದೆ ಬಹುದೊಡ್ಡ ಗೌಪ್ಯ ವ್ಯಾಪಾರ ಮಾರುಕಟ್ಟೆ ಇದೆ. ಶೀಘ್ರವೇ ಸರ್ಕಾರ ಮಧ್ಯ ಪ್ರವೇಶ ಮಾಡಿ ಇಂತಹ ಒಪ್ಪಂದಗಳನ್ನು ರದ್ದು ಮಾಡಬೇಕು.

| ಡಿ.ಶಶಿಕುಮಾರ್ ಕ್ಯಾಮ್ಸ್​ ಸಂಘಟನೆ ಪ್ರಧಾನ ಕಾರ್ಯದರ್ಶಿ 

 

ವಿವರ ಸೋರಿಕೆ ಹೇಗೆ?

ಅವಿದ್ಯಾವಂತರು, ಸಮಯದ ಅಭಾವವಿರುವವರು, ಕಂಪ್ಯೂಟರ್ ಸಾಕ್ಷರತೆ ಇಲ್ಲದವರು ಅರ್ಜಿ ಸಲ್ಲಿಸಲು ಖಾಸಗಿ ನೋಡಲ್ ಕೇಂದ್ರಗಳ ಮೊರೆ ಹೋಗುತ್ತಾರೆ. ಅರ್ಜಿದಾರರಿಂದ ಶುಲ್ಕವಾಗಿ 50 ರಿಂದ 150 ರೂ. ಪಡೆಯಲಾಗುತ್ತದೆ. ಹೀಗೆ ಸಲ್ಲಿಕೆಯಾಗುವ ಆರ್​ಟಿಇ ಅರ್ಜಿಗಳ ಸ್ವೀಕೃತಿ ಪ್ರತಿಯನ್ನು ಸಂಗ್ರಹಿಸಿ ಅದನ್ನು ಸ್ಕಾ್ಯನ್ ಮಾಡಿ ಪಿಡಿಎಫ್ ಮಾದರಿಯಲ್ಲಿ ಇಂಡಸ್ ಆಕ್ಷನ್​ಗೆ ಕಳುಹಿಸಲು ನಿರ್ಧರಿಸಲಾಗಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಎಜಿಎಸ್​ಕೆ ಕೇಂದ್ರದಲ್ಲಿ ಆರ್​ಟಿಇ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. 15 ರೂ. ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು. ಆದರೆ, ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ತೀರಾ ಕಡಿಮೆ. ಖಾಸಗಿ ನೋಡಲ್ ಕೇಂದ್ರಗಳ ಮೂಲಕವೇ ಹೆಚ್ಚಿನ ಅರ್ಜಿ ಸಲ್ಲಿಕೆಯಾಗುತ್ತಿದೆ.

ಏನಿದು ಇಂಡಸ್ ಆಕ್ಷನ್

ಇಂಡಸ್ ಆಕ್ಷನ್ ಎನ್​ಜಿಒ ನವದೆಹಲಿಯಲ್ಲಿದೆ. ಸರ್ಕಾರ, ಕಂಪನಿಗಳು ರೂಪಿಸುವ ನೀತಿಗಳನ್ನು ಜನರಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

 

ವಿಜಯವಾಣಿ ವರದಿ ಬಳಿಕ ರದ್ದಾಗಿತ್ತು

ಪಾಲಕರು, ವಿದ್ಯಾರ್ಥಿಗಳು, ಶಿಕ್ಷಕರ ವೈಯಕ್ತಿಕ ಮಾಹಿತಿಗಳನ್ನು ‘ಸ್ಕೂಲ್ಜ ಲಿಂಕ್’ಗೆ ಉಚಿತವಾಗಿ ನೀಡಲು ಶಿಕ್ಷಣ ಇಲಾಖೆ ಒಪ್ಪಂದ ಮಾಡಿಕೊಂಡಿತ್ತು. ‘ವಿದ್ಯಾರ್ಥಿಗಳಿಗೆ ಆಪತ್ತು’ ಎಂಬ ಶೀರ್ಷಿಕೆ ಅಡಿ ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಶಿಕ್ಷಣ ಇಲಾಖೆಯ ಕ್ರಮಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮರು ದಿನವೇ ಒಪ್ಪಂದ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

 

ನಾವು ಈಗಾಗಲೇ ಹಲವಾರು ರಾಜ್ಯದೊಂದಿಗೆ ಒಪ್ಪಂದ ಮಾಡಿಕೊಂಡು ಆರ್​ಟಿಇ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಮಾಹಿತಿ ಪಡೆಯುತ್ತಿರುವುದರ ಹಿಂದೆ ಯಾವುದೇ ಕೆಟ್ಟ ಉದ್ದೇಶ ಇಲ್ಲ.

| ರಮೇಶ್ ಎಂಟರ್​ಪ್ರೖೆನರ್, ಇಂಡಸ್ ಆಕ್ಷನ್

 

ಆರ್​ಟಿಇ ಅರಿವು ಮೂಡಿಸುವುದಾಗಿ ಹೇಳಿದ ಕಾರಣಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ವೈಯಕ್ತಿಕ ಮಾಹಿತಿ ಕೇಳುತ್ತಿರುವುದರಿಂದ ಇದನ್ನು ನಾವು ನೀಡುವುದಿಲ್ಲ. ಹೀಗಾಗಿ ಒಪ್ಪಂದ ರದ್ದು ಮಾಡುತ್ತೇವೆ.

| ಬಿ.ಎನ್.ಯೋಗಾನಂದ ಪ್ರಧಾನ ಕಾರ್ಯದರ್ಶಿ, ಆರ್​ಟಿಇ ಎಸ್​ಟಿಯುಪಿಎ

 

 ಯಾವ ಮಾಹಿತಿ ಮಾರಾಟ?

  • ವಿದ್ಯಾರ್ಥಿಗಳ/ಪಾಲಕರ ದೂರವಾಣಿ ಸಂಖ್ಯೆ, ಹೆಸರು ವಿಳಾಸ, ಭಾವಚಿತ್ರ, ಆಧಾರ್ ಸಂಖ್ಯೆ
  • ಜನ್ಮ ದಿನಾಂಕ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ವಿವರಗಳು

Leave a Reply

Your email address will not be published. Required fields are marked *