ಯಳಂದೂರು: ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಈಗಾಗಲೇ ಕಬಿನಿ ಜಲಾಶಯ ತುಂಬಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ವತಿಯಿಂದ ನೀಡಲಾಗುವ ಭತ್ತ ಬಿತ್ತನೆ ಬೀಜ ಖರೀದಿಗೆ ರೈತರು ಮುಗಿಬಿದ್ದಿದ್ದಾರೆ.
ತಾಲೂಕಿನಲ್ಲಿ ಅರೆ ನೀರಾವರಿ ಪ್ರದೇಶವಿದ್ದು, ಕಬಿನಿಯಿಂದ ಕಾಲುವೆ ಮೂಲಕ ನೀರು ಹರಿಸಲಾಗುತ್ತದೆ ಎಂಬ ಭರವಸೆಯಿಂದ ರೈತರು ಭತ್ತವನ್ನು ಇಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ತಾಲೂಕಿನ ಕಸಬಾ ಹಾಗೂ ಅಗರ ಹೋಬಳಿಗಳಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಭತ್ತವನ್ನು ಈಗಾಗಲೇ ದಾಸ್ತಾನು ಮಾಡಿಕೊಳ್ಳಲಾಗಿದೆ. ಇಲ್ಲಿ ಹೆಚ್ಚಾಗಿ ಬೇಡಿಕೆ ಇರುವ ಆರ್‌ಎನ್‌ಆರ್ ಹಾಗೂ ಐಆರ್64 ಭತ್ತದ ತಳಿ ದಾಸ್ತಾನು ಮಾಡಲಾಗಿದೆ. ಇದರೊಂದಿಗೆ ಜ್ಯೋತಿ ಭತ್ತದ ದಾಸ್ತಾನು ಸಹ ಇದೆ. ತಾಲೂಕಿನಲ್ಲಿ ಅಂದಾಜು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಪ್ರತಿ ಎಕರೆಗೆ 25 ಕಿಲೋದಂತೆ ಗರಿಷ್ಠ 5 ಎಕರೆವರೆಗೂ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ನೀಡಲಾಗುತ್ತಿದೆ.
ಈಗಾಗಲೇ ಚಂಬೆ ಹಾಗೂ ಸೆಣಬು ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದ್ದು, ಭತ್ತ ಬೆಳೆಯುವುದಕ್ಕೂ ಮುಂಚೆ ರೈತರು ಇದನ್ನು ಬಿತ್ತಿ ಹಸಿರೆಲೆ ಗೊಬ್ಬರವನ್ನಾಗಿ ಮಾಡುತ್ತಾರೆ. ಭತ್ತ ಬಿತ್ತನೆ ಮುಂಚೆ ಭೂಮಿಯನ್ನು ಹಸನುಗೊಳಿಸುವುದು ಅಂದಿನಿಂದಲೂ ಇದೆ.
ರೈತರಿಗೆ ಭತ್ತವನ್ನು 25 ಕೆಜಿ ಬ್ಯಾಗ್‌ನಲ್ಲಿ ವಿತರಣೆ ಮಾಡಲಾಗುತ್ತಿದೆ. ಆರ್‌ಎನ್‌ಆರ್ ಭತ್ತದ ಬ್ಯಾಗೊಂದರ ಮೂಲ ಬೆಲೆ 1537.50 ರೂ. ಆಗಿದ್ದು, ಪರಿಶಿಷ್ಟ ಜಾತಿ ಹಾಗೂ ವರ್ಗದವರಿಗೆ 300 ರೂ. ರಿಯಾಯಿತಿ ಇರುತ್ತದೆ. ಇತರ ರೈತರಿಗೆ 200 ರೂ. ರಿಯಾಯಿತಿ ಇದೆ. ಐಆರ್64 ಭತ್ತ 1162.50 ರೂ., ಜ್ಯೋತಿ 1350 ರೂ. ಮೂಲ ಬೆಲೆ ಇದ್ದು ಇದಕ್ಕೂ ಇದೇ ಸಬ್ಸಿಡಿ ಅನ್ವಯವಾಗಲಿದೆ. ಈಗಾಗಲೇ 132 ಕ್ವಿಂಟಾಲ್ ಆರ್‌ಎನ್‌ಆರ್, 170 ಕ್ವಿಂಟಾಲ್ ಐಆರ್64 ಹಾಗೂ 50 ಕ್ವಿಂಟಾಲ್ ಜ್ಯೋತಿ ಭತ್ತವನ್ನು ತಾಲೂಕಿನ 2 ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಮಾಡಲಾಗಿದೆ.
ಒಂದೆಡೆ ವಿಶ್ವಾಸ, ಮತ್ತೊಂದೆಡೆ ಆತಂಕ: ಈಗಾಗಲೇ ಮಳೆಯಾಗಿರುವುದರಿಂದ ಈ ಬಾರಿ ಭತ್ತದ ಬೆಳೆಗೆ ಕಬಿನಿ ಕಾಲುವೆಯಿಂದ ನೀರು ಹರಿಸುವ ವಿಶ್ವಾಸ ರೈತರಲ್ಲಿ ಮನೆ ಮಾಡಿದೆ. ಆದರೆ ಈ ಭಾಗದ ಕಾಲುವೆಗಳಲ್ಲಿ ಒಂದು ವಾರದಿಂದ ಹರಿಯುತ್ತಿದ್ದ ನೀರು ಗುರುವಾರದಿಂದ ನಿಂತು ಹೋಗಿದೆ. ಹಾಗಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಆದರೂ ನೀರು ಬಿಡುವ ವಿಶ್ವಾಸದಿಂದ ಈಗಾಗಲೇ ಚಂಬೆ, ಸೆಣಬನ್ನು ಜಮೀನಿನಲ್ಲಿ ಬಿತ್ತಿ, ಈಗ ಭತ್ತದ ಖರೀದಿಗೂ ರೈತರು ಮುಂದಾಗಿದ್ದಾರೆ.
ತಾಲೂಕಿನಲ್ಲಿ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ಕಳೆದ ಬಾರಿ ಮಳೆ ಕೊರತೆಯಿಂದ ಭತ್ತವನ್ನು ಕೇವಲ 1,500 ಹೆಕ್ಟೇರ್ ಪ್ರದೇಶದಲ್ಲಿ ಹಾಕಲಾಗಿತ್ತು. ಅದು ಕೂಡ ನಿರೀಕ್ಷಿತ ಪ್ರಮಾಣದಲ್ಲಿ ರೈತರ ಕೈ ಸೇರಿರಲಿಲ್ಲ. ನಮ್ಮದು ಅರೆನೀರಾವರಿ ಪ್ರದೇಶವಾಗಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು, ಕಬಿನಿ ಜಲಾಶಯ ತುಂಬಿರುವುದರಿಂದ ನೀರು ಬಿಡುವ ವಿಶ್ವಾಸದಲ್ಲಿ ರೈತರಿದ್ದಾರೆ. ಈಗಾಗಲೇ ಇಲಾಖೆಯಿಂದ 600 ಕ್ವಿಂಟಾಲ್ ಭತ್ತ ಬಿತ್ತನೆ ಬೀಜವನ್ನು ದಾಸ್ತಾನು ಮಾಡಲಾಗಿದೆ. ಇದರೊಂದಿಗೆ ಜಿಂಕ್ ಸಲ್ಫೇಟ್, ಬೋರಾನ್ ಕೂಡ ದಾಸ್ತಾನಿದ್ದು ಇದನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರೊಂದಿಗೆ ನಮ್ಮ ತಾಲೂಕಿನಲ್ಲಿ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ.
ವೆಂಕಟರಂಗಶೆಟ್ಟಿ ಕೃಷಿ ಅಧಿಕಾರಿ, ಯಳಂದೂರು
ಕಳೆದ ಬಾರಿ ನಮಗೆ ಪೂರ್ಣ ಪ್ರಮಾಣದಲ್ಲಿ ಕಬಿನಿ ಕಾಲುವೆಯಲ್ಲಿ ನೀರು ಬಂದಿರಲಿಲ್ಲ. ಈ ಬಾರಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯ ತುಂಬಿದೆ. ನಿರಂತರವಾಗಿ ಈ ಬಾರಿ ಭತ್ತದ ಬೆಳೆಗೆ ನೀರು ಹರಿಸಬೇಕು. ಪೂರ್ಣ ಬೆಳೆ ಮಾಡುವವರೆಗೂ ನೀರು ಹರಿಸಿದರೆ ಉತ್ತಮ. ಒಂದು ವಾರ ಕಾಲುವೆಗೆ ನೀರು ಹರಿಸಿ ಈಗ ನಿಲ್ಲಿಸಲಾಗಿದೆ. ಹಾಗಾಗಿ ರೈತರಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ಸಂಬಂಧಪಟ್ಟವರು ನೀರು ಹರಿಸಲು ಸೂಕ್ತ ಕ್ರಮ ವಹಿಸಬೇಕು.
ರಾಜಣ್ಣ ರೈತ, ಯರಿಯೂರು ಗ್ರಾಮ