ಹೂವಿನಹಡಗಲಿ: ತಾಲೂಕಿನ ರೈತರು ಕೃಷಿ ಜತೆಗೆ ಹೈನುಗಾರಿಕೆ ಮಾಡುತ್ತಿದ್ದಾರೆ. ಹೀಗಾಗಿ ಜಾನುವಾರುಗಳಿಗೆ ಮೇವಿನ ಕೊರತೆ ಆಗಬಾರದೆಂದು ಮೇವು ಸಂಗ್ರಹಿಸುವಲ್ಲಿ ತೊಡಗಿದ್ದಾರೆ. ಅಲ್ಲದೆ ಹೊರ ಜಿಲ್ಲೆಗಳಿಗೂ ಸಾಗಿಸುತ್ತಿದ್ದು, ಬೇಡಿಕೆ ಹೆಚ್ಚಿದೆ.
ಇದನ್ನೂ ಓದಿ: ರೈತರ ಕೆಲಸ ವಿಳಂಬ ಮಾಡದಿರಿ
ತಾಲೂಕಿನ ಮಳೆಯಾಶ್ರಿತ ಗ್ರಾಮಗಳಾದ ಇಟ್ಟಿಗಿ, ತಳಕಲ್ಲು, ಉತ್ತಂಗಿ, ಹೊಳಗುಂದಿ, ಭಾವಿಹಳ್ಳಿಗಳಿಂದ ಹೊರಜಿಲ್ಲೆಗಳ ಗಡಿ ಗ್ರಾಮಗಳ ರೈತರು ನಿತ್ಯ ಹತ್ತಾರು ಟ್ರಾೃಕ್ಟರ್‌ಗಳಲ್ಲಿ ಮೇವನ್ನು ಒಯ್ಯುತ್ತಿದ್ದಾರೆ. ತುಂಗಭದ್ರಾ ನದಿ ನೀರು ಅವಲಂಬಿಸಿ ಸಾಕಷ್ಟು ಜನರು ಭತ್ತ ಬೆಳೆದಿದ್ದಾರೆ. ಈಗಾಗಲೇ ಕಟಾವು ಮಾಡಿದ ಭತ್ತದ ಉಳಿದ ಹುಲ್ಲನ್ನು ಮಧ್ಯವರ್ತಿಗಳು ರೈತರಿಂದ ಖರೀದಿಸಿ ಹೆಚ್ಚಿನ ಬೆಲೆಗೆ ಬೇರೆ ಜಿಲ್ಲೆಯ ರೈತರಿಗೆ ಮಾರಾಟ ಮಾಡುತ್ತಿದ್ದಾರೆ.
ಗದಗ, ಹಾವೇರಿ, ದಾವಣಗೆರೆ ಜಿಲ್ಲೆಗಳ ಗಡಿ ತಾಲೂಕಿನ ಗ್ರಾಮಗಳಿಗೆ ನಿತ್ಯ ನೂರಾರು ಟ್ರಾೃಕ್ಟರ್‌ಗಳಲ್ಲಿ ಮೇವು ಸಾಗಣೆಯಾಗುತ್ತಿದೆ.
ತಾಲೂಕಿನಲ್ಲಿ ಸುಮಾರು ನಾಲ್ಕು ಸಾವಿರ ಜನ ಹೈನುಗಾರಿಕೆ ಮಾಡುತ್ತಿದ್ದು, ನಿತ್ಯ 32.5 ಸಾವಿರ ಲೀ. ಹಾಲು ಉತ್ಪಾದಿಸುತ್ತಿದ್ದಾರೆ.
ಕೃಷಿಯೊಂದಿಗೆ ಹೈನುಗಾರಿಕೆ ಅವಲಂಬಿಸಿದ್ದು, ಅನಿವಾರ್ಯವಾಗಿ ಹೆಚ್ಚಿನ ಬೆಲೆಗೆ ಭತ್ತದ ಹುಲ್ಲನ್ನು ಖರೀದಿ ಮಾಡುತ್ತಿದ್ದಾರೆ. ಮಧ್ಯವರ್ತಿಗಳು ಒಂದು ಟ್ರಾೃಕ್ಟರ್ ಭತ್ತದ ಹುಲ್ಲಿಗೆ ಸುಮಾರು 10 ರಿಂದ 12 ಸಾವಿರ ರೂ. ವರೆಗೆ ಪಡೆಯುತ್ತಿದ್ದು, ರೈತನಿಗಿಂತ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ.
ಕಳೆದ ವರ್ಷವೇ ಜಿಲ್ಲಾಧಿಕಾರಿ ಗ್ರಾಮದ ಹೊರ ವಲಯದಲ್ಲಿ ಜಾನುವಾರುಗಳಿಗೆ ಕುಡಿವ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಆದರೆ ಈವರೆಗೆ ಕೆಲ ಗ್ರಾಮಗಳನ್ನು ಹೊರತುಪಡಿಸಿದರೆ ಉಳಿದೆಡೆ ಕುಡಿವ ನೀರಿನ ಸೌಲಭ್ಯವಿಲ್ಲ. ತಾಲೂಕಿನಲ್ಲಿ 1.30 ಲಕ್ಷ ಕುರಿಗಳು, 53 ಸಾವಿರ ದನಗಳು, 13 ಸಾವಿರ ಎಮ್ಮೆ, 20 ಸಾವಿರ ಆಡುಗಳು ಸೇರಿದಂತೆ ಒಟ್ಟು 1.80 ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾಕುಪ್ರಾಣಿಗಳಿವೆ.
ಈ ಬಾರಿ ಹೆಚ್ಚು ಮಳೆ ಆಗಿದ್ದರಿಂದ ಜಾನುವಾರುಗಳಿಗೆ ಮೇವಿನ ಬರವಿಲ್ಲ. ತಾಲೂಕಿನಲ್ಲಿ 180 ವಾರಗಳಿಗೆ ಸಾಕಾಗುವಷ್ಟು ಮೇವಿದ್ದು, ಕೊರತೆ ಉಂಟಾಗುವುದಿಲ್ಲ. ಪ್ರತಿವರ್ಷ ರೈತರು ಭತ್ತದ ಮೇವನ್ನು ಮಾರಾಟ ಮಾಡುತ್ತಾರೆ. ಹೊರ ಜಿಲ್ಲೆಗಳ ಗಡಿ ಭಾಗದ ಗ್ರಾಮಗಳ ರೈತರೂ ತಾಲೂಕಿಗೆ ಬಂದು ಭತ್ತದ ಹುಲ್ಲನ್ನು ಖರೀದಿಸುತ್ತಿದ್ದಾರೆ.
ಡಾ.ನಾರಾಯಣ ಬಣಕಾರ
ಪಶುಸಂಗೋಪನಾಧಿಕಾರಿ, ಹೂವಿನಹಡಗಲಿ
ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೂ ಮೇವಿನ ಬೆಲೆಯಲ್ಲಿ ಇಳಿಕೆ ಕಂಡು ಬಂದಿಲ್ಲ. ನಾವೇ ರೈತರ ಬಳಿಗೆ ಹೋಗಿ ಮೇವು ಖರೀದಿಸಿ ನಮ್ಮೂರಿಗೆ ತರುವುದಕ್ಕೆ ಅಲ್ಪಪ್ರಮಾಣದ ಕಷ್ಟವಾಗುತ್ತದೆ. ಆದರೆ ಈಗ ಮಧ್ಯವರ್ತಿಗಳೇ ರೈತರು ಭತ್ತ ಕಟಾವು ಮಾಡುವ ಸಂದರ್ಭದಲ್ಲಿಯೇ ಎಕರೆಗಳಷ್ಟು ಮೇವನ್ನು ಖರೀದಿಸುತ್ತಿದ್ದಾರೆ. ನಾವು ರೈತರ ಬಳಿ ತೆರಳಿದರೆ ಮೇವು ಖರೀದಿಯಾಗಿದೆ ಎನ್ನುತ್ತಾರೆ. ಮಧ್ಯವರ್ತಿಗಳ ಬಳಿ ಹೋದಾಗ ಹೆಚ್ಚಿನ ಬೆಲೆ ಹೇಳುತ್ತಾರೆ. ಅನಿವಾರ್ಯವಾಗಿ ಖರೀದಿಸಬೇಕಾಗಿದೆ.
ನಾಗನಗೌಡ
ಜಾನುವಾರು ಸಾಕಣೆದಾರ, ಹೂವಿನಹಡಗಲಿ