ಫಾರಂ-57 ಸಲ್ಲಿಕೆಗೆ ಪರದಾಟ

ಚಿಕ್ಕಮಗಳೂರು: ಅಕ್ರಮ ಸಕ್ರಮ ಯೋಜನೆಯಡಿ ಹೊಸದಾಗಿ ಫಾರಂ ನಂ-57ರಲ್ಲಿ ಅರ್ಜಿ ಸಲ್ಲಿಸಲು ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಬೆಳಗಿನ ಜಾವ ನಾಲ್ಕು ಗಂಟೆಯಿಂದ ರೈತರು ಕಾದು ನಿಂತು ಹೈರಣಾಗಿದ್ದಾರೆ.

ನಾಲ್ಕು ದಿನದಿಂದ ತಹಸೀಲ್ದಾರ್ ಕಚೇರಿಯಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿ ಸ್ವೀಕರಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ಪ್ರತಿದಿನ ನೂರಾರು ಜನ ಸರದಿಯಲ್ಲಿ ನಿಂತು ಕಾಯುತ್ತಿದ್ದಾರೆ. ಅರ್ಜಿ ಸಲ್ಲಿಸಲು ಸಾಕಷ್ಟು ಕಾಲಾವಕಾಶ ಇದ್ದರೂ ದಟ್ಟಣೆ ಮಾತ್ರ ಕಡಿಮೆಯಾಗಿಲ್ಲ.

ಬೆಳಗಿನ ಜಾವ 3.30ಕ್ಕೆ ಕೇಂದ್ರ ಸಚಿವ ಅನಂತಕುಮಾರ್ ನಿಧನ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಸೋಮವಾರ ಬೆಳಗ್ಗೆ 8ಕ್ಕೆ ರಜೆ ಘೊಷಿಸಲಾಗಿತ್ತು. ಆದರೆ ಮಾಹಿತಿ ತಿಳಿಯದೆ ಅನೇಕರು ದಾಖಲೆ ಹಿಡಿದು ಅರ್ಜಿ ಸಲ್ಲಿಸಲು ನಿಂತಿದ್ದರು.

ಬಹುತೇಕ ರೈತರಿಗೆ ಮಾಹಿತಿ ತಿಳಿಯದೆ 9.30ರವರೆಗೆ ಕಾಯುತ್ತಿದ್ದರು. ಕೆಲವು ರೈತರು ವಾಟ್ಸ್​ಪ್​ನಲ್ಲಿ ಮಾಹಿತಿ ನೋಡಿ ಬೆಳಗ್ಗೆ 8ಕ್ಕೆ ಮನೆ ಕಡೆ ಹೆಜ್ಜೆ ಹಾಕಿದರು. ಆದರೆ ಬಹುತೇಕರಿಗೆ ರಜೆ ಮಾಹಿತಿ ಇರಲಿಲ್ಲ. ರಾಜ್ಯ ಸರ್ಕಾರ ಶಾಲಾಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೊಷಿಸಿದೆ ಎಂದು ಮನವರಿಕೆಯಾದಾಗ ವಾಪಸು ಹೋದರು.