ಬಡವರ ಅಕ್ಕಿ ಗುಳುಂ

|ಬೇಲೂರು ಹರೀಶ

ಬೆಂಗಳೂರು: ಬಡವರ ಹಸಿವು ನೀಗಿಸಲು ಸರ್ಕಾರ ವಿತರಿಸುತ್ತಿರುವ ಅಪಾರ ಪ್ರಮಾಣದ ಅಕ್ಕಿ ಈಗ ಮಧ್ಯವರ್ತಿಗಳ ಪಾಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್​ದಾರರಿಗೆ ವಿತರಿಸುವ ಅಕ್ಕಿಯಲ್ಲಿ ಪ್ರತಿ ತಿಂಗಳು ಅಂದಾಜು 28-30 ಸಾವಿರ ಟನ್ ಉಳಿಕೆಯಾಗುತ್ತಿದೆ. ಆದರೆ, ಕೆಲವು ಅಧಿಕಾರಿಗಳು ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ಕಾರಕ್ಕೆ ತಪ್ಪು ಲೆಕ್ಕ ತೋರಿಸಿ ಈ ಅಕ್ಕಿಯನ್ನು ಕಬಳಿ ಸುತ್ತಿರುವ ಅಂಶ ಬೆಳಕಿಗೆ ಬಂದಿದೆ.

ಅಕ್ಕಿ ಲೆಕ್ಕಾಚಾರ: ಪ್ರತಿ ಕೆ.ಜಿಗೆ 30-35 ರೂ.ನಂತೆ ಖಾಸಗಿ ವಲಯದಿಂದ ಅಕ್ಕಿ ಖರೀದಿಸುವ ಕೇಂದ್ರ ಸರ್ಕಾರ, ರಾಜ್ಯಕ್ಕೆ 3 ರೂ.ನಂತೆ ಪ್ರತಿ ತಿಂಗಳು 2.17 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡುತ್ತದೆ. ಹಿಂದಿನ ಕಾಂಗ್ರೆಸ್ ಸರ್ಕಾರ 2017ರ ಜುಲೈನಿಂದ ಕಾರ್ಡ್​ದಾರರಿಗೆ ನೀಡುತ್ತಿದ್ದ 5 ಕೆ.ಜಿ ಅಕ್ಕಿಯನ್ನು 7 ಕೆ.ಜಿಗೆ ಹೆಚ್ಚಿಸಿದ್ದರಿಂದ ಪ್ರತಿ ತಿಂಗಳು ರಾಜ್ಯ ಸರ್ಕಾರ 65 ಸಾವಿರ ಮೆಟ್ರಿಕ್ ಟನ್ ಅಕ್ಕಿ ಹೆಚ್ಚುವರಿಯಾಗಿ ಖರೀದಿಸಿ ಫಲಾನುಭವಿಗಳಿಗೆ ವಿತರಿಸುತ್ತಿದೆ.

ರಾಜ್ಯದಲ್ಲಿ 1.40 ಕೋಟಿ ರೇಷನ್ ಕಾರ್ಡ್​ಗಳಿವೆ. 18.86 ಲಕ್ಷ ಎಪಿಎಲ್ ಕಾರ್ಡ್​ಗಳ ಪೈಕಿ ಕೇವಲ 3.80 ಲಕ್ಷ ಸಾವಿರ ಕಾರ್ಡ್​ದಾರರು ಪಡಿತರ ಪಡೆಯುತ್ತಿದ್ದಾರೆ. 1.13 ಕೋಟಿ ಬಿಪಿಎಲ್ ಕಾರ್ಡ್​ಗಳ ಪೈಕಿ ಲಕ್ಷಾಂತರ ಕುಟುಂಬಗಳು ಸರ್ಕಾರಿ ರೇಷನ್ ಪಡೆಯುತ್ತಿಲ್ಲ. ಆಹಾರ ಇಲಾಖೆ ಮೂಲಗಳ ಪ್ರಕಾರ ಸರ್ಕಾರದಿಂದ ಬರುವ 2.82 ಲಕ್ಷ ಮೆಟ್ರಿಕ್ ಟನ್ ಅಕ್ಕಿಯಲ್ಲಿ ಫಲಾನುಭವಿಗಳು ಸ್ವೀಕರಿಸದೆ 28-30 ಸಾವಿರ ಟನ್ ಅಕ್ಕಿ ಉಳಿಯುತ್ತಿದೆ. ಆದರೆ ಪ್ರತಿ ತಿಂಗಳು ಅಂದಾಜು 10 ಸಾವಿರ ಟನ್ ಅಕ್ಕಿ ಮಾತ್ರ ಉಳಿಕೆಯಾಗುತ್ತಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಲೆಕ್ಕ ತೋರಿಸುತ್ತಿದ್ದಾರೆ.

ಯಾರಿಗೆ ಎಷ್ಟು ಕೆ.ಜಿ?

ಬಿಪಿಎಲ್ ಕಾರ್ಡ್​ದಾರರ ಪ್ರತಿ ಕುಟುಂಬದ ಸದಸ್ಯರಿಗೆ 7 ಕೆ.ಜಿ, ಎಪಿಎಲ್ ಕುಟುಂಬದ ಪ್ರತಿ ಸದಸ್ಯನಿಗೆ 15 ರೂ.ನಂತೆ 5 ಕೆ.ಜಿ ಮತ್ತು ನಿರ್ಗತಿಕರಿಗೆ ಮಾತ್ರ ನೀಡುವ ಅಂತ್ಯೋದಯ ಕಾರ್ಡ್ ಕುಟುಂಬಗಳಿಗೆ 35 ಕೆ.ಜಿ ಅಕ್ಕಿ ಮತ್ತು 1 ಕೆಜಿ ತೊಗರಿ ಬೇಳೆ ನೀಡಲಾಗುತ್ತಿದೆ. ಸಕ್ಕರೆ, ಅಡುಗೆ ಎಣ್ಣೆ ಮತ್ತು ಅಯೋಡಿನ್ ಉಪು್ಪ ವಿತರಣೆಯನ್ನು ಈಗ ನಿಲ್ಲಿಸಲಾಗಿದೆ.

ಪಿಒಎಸ್ ಅಳವಡಿಕೆಗೆ ಹಿಂದೇಟು

ಕೇಂದ್ರದಿಂದ ಬರುವ ಪಡಿತರ ರಾಜ್ಯದ ಗೋದಾಮು ಮತ್ತು ಸಗಟು ಮಳಿಗೆಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಉಳಿಕೆ ಅಕ್ಕಿ ದುರ್ಬಳಕೆ ಜತೆಗೆ ಪಡಿತರ ಸೋರಿಕೆಯೂ ನಡೆಯುತ್ತದೆ. ಆಧಾರ್ ಆಧಾರಿತ ಪಿಒಎಸ್ ಅಳವಡಿಸುವಂತೆ ಸಾಕಷ್ಟು ಒತ್ತಡ ಬಂದರೂ ಈವರೆಗೆ ಜಾರಿಯಾಗಿಲ್ಲ.

ಆಹಾರ ಇಲಾಖೆ ಕಂಪ್ಯೂಟರೀಕರಣಗೊಂಡ ಬಳಿಕ ಬಂದ ಆಯುಕ್ತರು ಗೋದಾಮಿನಲ್ಲಿ ಅಳವಡಿಸಿದ್ದ ಎಲೆಕ್ಟ್ರಾನಿಕ್ ವೇಬ್ರಿಡ್ಜ್​ಗಳನ್ನು ತೆಗೆಸಿದರು. ಉಳಿಕೆ ಅಕ್ಕಿ ದುರ್ಬಳಕೆಯಲ್ಲಿ ಇಲಾಖೆಯ ಕೆಲವು ಉಪ ನಿರ್ದೇಶಕರು ಕೂಡ ಕೈ ಜೋಡಿಸಿದ್ದಾರೆ.

| ಆಹಾರ ಇಲಾಖೆ ಅಧಿಕಾರಿ

ನೆಟ್​ವರ್ಕ್ ಸಮಸ್ಯೆ ಮತ್ತು ಬೆರಳು ರೇಖೆಗಳು ಸವೆದಿದ್ದರಿಂದ ಬಯೋಮೆಟ್ರಿಕ್​ನಲ್ಲಿ ಥಂಬ್ ತೆಗೆದುಕೊಳ್ಳುವುದಿಲ್ಲ. ಈ ಸಮಸ್ಯೆ ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚಾಗಿದೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಕೆಲ ಆಹಾರ ನಿರೀಕ್ಷಕರು ಫಲಾನುಭವಿಗಳ ಅಕ್ಕಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

| ಟಿ.ಕೃಷ್ಣಪ್ಪ-ಕಾರ್ಯದರ್ಶಿ ಅಖಿಲ ಭಾರತ ಪಡಿತರ ವಿತರಕ ಒಕ್ಕೂಟ

ಬೆರಳಚ್ಚು ಗೋಲ್‍ಮಾಲ್

ಗ್ರಾಮೀಣ ಪ್ರದೇಶದಲ್ಲಿ ನೆಟ್​ವರ್ಕ್ ಸಮಸ್ಯೆ ಕಾಡುತ್ತದೆ. ಜತೆಗೆ ಕೆಲ ಫಲಾನುಭವಿಗಳ ಕೈ ರೇಖೆಗಳು ಅಳಿಸಿಹೋಗಿರುವ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ನಮೂದಾಗುವುದಿಲ್ಲ. ಈ ಪ್ರಕರಣಗಳಲ್ಲಿ ಪಡಿತರ ವಿತರಣೆಗೆ ಆಹಾರ ಅಧೀಕ್ಷಕರಿಗೆ ವಿಶೇಷ ಅಧಿಕಾರ ಕೊಡಲಾಗಿರುತ್ತದೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಆಹಾರ ಅಧೀಕಕ್ಷರು, ತಾವೇ ಬೆರಳಚ್ಚು ಕೊಟ್ಟು ಫಲಾನುಭವಿಗಳಿಗೆ ಅಕ್ಕಿ ವಿತರಿಸಲಾಗಿದೆ ಎಂದು ಸುಳ್ಳುಲೆಕ್ಕ ತೋರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಉಳಿಕೆಗೆ ಕಾರಣ

  • ಕಳಪೆ ಅಕ್ಕಿ ಎಂಬ ಕಾರಣಕ್ಕೆ ಬಹುತೇಕ ಎಪಿಎಲ್ ಕಾರ್ಡ್
  • ದಾರರು ಖರೀದಿಸುವುದಿಲ್ಲ.
  • ಕೆಲವರು ತಮ್ಮ ಹೆಸರಲ್ಲೆ ಬೇರೆಯವರಿಗೆ ಮಾರಾಟ ಮಾಡುವಂತೆ ಸೂಚಿಸುತ್ತಾರೆ.
  • ಅಕ್ಕಿ ಖರೀದಿಸದವರ ಮನವೊಲಿಸಿ ಅಂಗಡಿ ಮಾಲಿಕರೇ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ.

ಪಾಲಿಶ್ ಮಾಡಿ ಸೇಲ್!

ಉಳಿಕೆ ಅಕ್ಕಿಯನ್ನು ಕಾಳಸಂತೆಯಲ್ಲಿ ಡೀಲರ್​ಗಳಿಗೆ ಮಾರಾಟ ಮಾಡಲಾಗುತ್ತದೆ. ಡೀಲರ್​ಗಳು ಇದೇ ಅಕ್ಕಿಗೆ ಪಾಲಿಶ್ ಮಾಡಿಸಿ ಮಾರುಕಟ್ಟೆಗೆ ಪೂರೈಸುತ್ತಾರೆ. ನ್ಯಾಯಬೆಲೆ ಅಂಗಡಿಯಲ್ಲಿ 15 ರೂ.ಗೆ ಸಿಗುವ ಈ ಅಕ್ಕಿ ಮಳಿಗೆಗಳಿಗೆ ಬಂದ ನಂತರ 40 -50 ರೂ.ವರೆಗೆ ಮಾರಾಟ ಆಗುತ್ತದೆ.

ರಾಜ್ಯದಲ್ಲಿ ಒಟ್ಟು 20,032 ನ್ಯಾಯಬೆಲೆ ಅಂಗಡಿಗಳಿವೆ. ಪ್ರತಿ ತಿಂಗಳು ಕನಿಷ್ಠ 10 ಸಾವಿರ ಕ್ವಿಂಟಲ್ ಅಕ್ಕಿ ಉಳಿಕೆಯಾಗುತ್ತಿದೆ. ಅದನ್ನು ಮುಂದಿನ ತಿಂಗಳ ರೇಷನ್ ವಿತರಣೆ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ಆದರೆ, ದುರ್ಬಳಕೆಯಾಗುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಪರಿಶೀಲಿಸುತ್ತೇನೆ.

| ಎಂ.ಸಿ.ಗಂಗಾಧರ್ ಜಂಟಿ ನಿರ್ದೇಶಕ, ಆಹಾರ ಇಲಾಖೆ