ಮುಂಬೈ: ವೇಶ್ಯಾವಾಟಿಕೆ ಪ್ರದೇಶಕ್ಕೆ ಕರೆದೊಯ್ಯಲು ನಿರಾಕರಿಸಿದ ಟ್ಯಾಕ್ಸಿ ಚಾಲಕನ ಮೇಲೆ ಆರ್ಪಿಎಫ್ ಪೇದೆಯೊಬ್ಬ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮುಂಬೈನಲ್ಲಿ ನಡೆದಿದೆ.
ಟ್ಯಾಕ್ಸಿ ಚಾಲಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಆರ್ಪಿಎಫ್ ಪೆದೇಯನ್ನು ಅಮಿತ್ ಧಂಡಕ್ ಎಂದು ಪೊಲೀಸರು ಪತ್ತೆ ಮಾಡಿ ಆತನನ್ನು ಬಂಧಿಸಿದ್ದಾರೆ.
ಛತ್ರಪತಿ ಶಿವಾಜಿ ಟರ್ಮಿನಸ್ ನ ಪಿ.ಡಿ.ಮೆಲ್ಲೊ ರಸ್ತೆ ಬದಿಯ ಕಲ್ಲು ಬೆಂಚಿನ ಮೇಲೆ ಟ್ಯಾಕ್ಸಿ ಚಾಲಕ ಮಲಗಿದ್ದರು. ಈ ವೇಳೆ ಆಗಮಿಸಿದ ಅಮಿತ್ ದಕ್ಷಿಣ ಮುಂಬೈನಲ್ಲಿರುವ ಗ್ರ್ಯಾಂಟ್ ರಸ್ತೆಯಲ್ಲಿರುವ ವೇಶ್ಯಾವಾಟಿಕೆ ಕೇಂದ್ರಕ್ಕೆ ಕರೆದೊಯ್ಯುವಂತೆ ಸೂಚಿಸಿದರು. ಆದರೆ ಚಾಲಕ ಅಲ್ಲಿಗೆ ಕರೆದುಕೊಂಡು ಹೋಗಲು ನಿರಾಕರಿಸಿದರು.
ಇದರಿಂದ ಕುಪಿತಗೊಂಡ ಪೇದೆ ಅಮಿತ್ ಚಾಲಕನ ಮೇಲೆ ಹಲ್ಲೆ ನಡೆಸಿ ಬಲವಂತವಾಗಿ ರೈಲು ನಿಲ್ದಾಣದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಸಹಜ ಲೈಂಗಿಕ ಕ್ರಿಯೆ ನಡೆಸಿದರು. ಅಲ್ಲದೆ ಚಾಲಕನ ಬಳಿ ಇದ್ದ ಹಣ, ಟ್ಯಾಕ್ಸಿ ಕೀ ಸೇರಿದಂತೆ ಇತರೆ ವಸ್ತುಗಳನ್ನು ತೆಗೆದುಕೊಂಡು ತೆರಳಿದರು.
ಟ್ಯಾಕ್ಸಿ ಚಾಲಕ ಕೂಡಲೇ ಎಂಆರ್ಎ ಮಾರ್ಗ ಪೊಲೀಸರಿಗೆ ದೂರು ನೀಡಿದರು. ಕೇಸು ದಾಖಲಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದರು.
ಪೇದೆ ಅಮಿತ್ ಧಂಡಕ್ನನ್ನು ಸೇವೆಯಿಂದ ವಜಾಗೊಳಿಸಿ ಇಲಾಖಾ ತನಿಖೆಗೆ ಸೂಚಿಸಲಾಗಿದೆ. (ಏಜೆನ್ಸೀಸ್)