More

    ಮರುನಿರ್ಮಾಣ ಬದಲು ದುರಸ್ತಿಗೆ ಅವಕಾಶ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ನೆರೆ ಸಂತ್ರಸ್ತರ ಮನವಿಯಂತೆ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಬಿ ವರ್ಗದ ಮನೆಗಳ ದುರಸ್ತಿಗೆ ಪರಿಹಾರ ನೀಡುವ ಮಾನದಂಡವನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಎ ಮತ್ತು ಬಿ ವರ್ಗದ ಮನೆಗಳನ್ನು ಪೂರ್ಣ ಕೆಡವಿ ಪುನರ್ ನಿರ್ಮಾಣ ಮಾಡುವುದಾದರೆ 5 ಲಕ್ಷ ರೂ. ಪರಿಹಾರ ಹಾಗೂ ಬಿ ವರ್ಗದ ಮನೆಗಳನ್ನು ಪೂರ್ಣ ಕೆಡವದೇ ದುರಸ್ತಿ ಮಾಡಿಕೊಳ್ಳುವುದಾದರೆ 3 ಲಕ್ಷ ರೂ. ಪರಿಹಾರ ಪಾವತಿಸಲಾಗುವುದು.

    ಕಳೆದ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ್ಲ ಅತಿವೃಷ್ಟಿ ಹಾಗೂ ಪ್ರವಾಹದ ಕಾರಣದಿಂದ ಹಾನಿಗೀಗಾಡ ಮನೆಗಳ ಪುನರ್ ನಿರ್ಮಾಣ ಕಾರ್ಯಕ್ಕಾಗಿ ಸರ್ಕಾರ ಅಗತ್ಯ ಅನುದಾನ ಒದಗಿಸಲು ಎ, ಬಿ ಹಾಗೂ ಸಿ ಎಂದು ಮೂರು ವರ್ಗಗಳಾಗಿ ವಿಂಗಡಿಸಿದೆ. ಇದರಲ್ಲಿ ಸಿ ವರ್ಗದ ಮನೆಗಳ ದುರಸ್ತಿಗಾಗಿ ತಹಸೀಲ್ದಾರ್ ಹಂತದಲ್ಲಿ ಒಂದು ಬಾರಿಗೆ 50 ಸಾವಿರ ರೂ. ಪರಿಹಾರ ಬಿಡುಗಡೆ ಮಾಡಲಾಗಿತ್ತು. ಎ ಮತ್ತು ಬಿ ವರ್ಗದ ಮನೆಗಳಿಗೆ ತಲಾ 5 ಲಕ್ಷ ರೂ. ಅನುದಾನ ಒದಗಿಸುವುದಾಗಿ ಆದೇಶ ಮಾಡಿ ಮೊದಲ ಕಂತಿನ ಪರಿಹಾರವಾಗಿ 1 ಲಕ್ಷ ರೂ. ಈಗಾಗಲೇ ಸಂತ್ರಸ್ತರ ಖಾತೆಗೆ ಬಿಡುಗಡೆ ಮಾಡಲಾಗಿದೆ. ಆದರೆ, 2ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಮೊದಲು ಎ ಮತ್ತು ಬಿ ವರ್ಗದ ಸಂತ್ರಸ್ತರು ಹಾನಿಗೊಳಗಾದ ಮನೆಗಳ ತಳಪಾಯ ಹಂತದಿಂದ ಪುನರ್ ನಿರ್ಮಾಣ ಆರಂಭಿಸಿ ಈ ಕುರಿತ ಭಾವಚಿತ್ರವನ್ನು ಅಪ್​ಲೋಡ್ ಮಾಡಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಈ ಷರತ್ತಿನ ಕುರಿತಂತೆ ಗ್ರಾಮಗಳಲ್ಲಿ ಕೆಲವು ಫಲಾನುಭವಿಗಳು ಭಾಗಶಃ ಹಾನಿಗೊಳಗಾದ ಮನೆಗಳನ್ನು ಪೂರ್ಣ ನೆಲಸಮ ಮಾಡಿ ತಳಪಾಯ ಹಂತದಿಂದಲೇ ನಿರ್ವಿುಸಬೇಕಾದಲ್ಲಿ 5 ಲಕ್ಷ ರೂ. ಅನುದಾನ ಸಾಕಾಗುವುದಿಲ್ಲ. ಇದಕ್ಕೆ 10ರಿಂದ 20 ಲಕ್ಷ ರೂ. ಅನುದಾನ ಬೇಕಾಗುತ್ತದೆ. ಹಾನಿಗೊಳಗಾದ ಭಾಗವನ್ನು ಮಾತ್ರ ಪುನರ್ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಸರ್ಕಾರ ಸ್ಪಂದಿಸಿ ಪರಿಷ್ಕೃತ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

    ಹೊಸ ಮಾರ್ಗಸೂಚಿಯಂತೆ ಎ ಮತ್ತು ಬಿ ವರ್ಗದ ಮನೆಗಳನ್ನು ಪೂರ್ಣವಾಗಿ ಕೆಡವಿ ಹಾಗೂ ಪುನರ್ ನಿರ್ಮಾಣ ಮಾಡುವಂತಹ ಮನೆಗಳಿಗೆ 5 ಲಕ್ಷ ರೂ. ಪರಿಹಾರವನ್ನು ನಾಲ್ಕು ಹಂತದಲ್ಲಿ (ತಳಪಾಯ, ಕಿಟಕಿ, ಛಾವಣಿ ಮತ್ತು ಪೂರ್ಣ) ಹಾಗೂ ಭಾಗಶಃ ಹಾನಿಗೀಡಾದ ಮನೆಗಳಿಗೆ ದುರಸ್ತಿ ಕಾರ್ಯಗಳು, ಇತ್ಯಾದಿಗಳನ್ನು ಕೈಗೊಳ್ಳುವ ಸಲುವಾಗಿ 3 ಲಕ್ಷ ರೂ.ಗೆ ಸೀಮಿತಕ್ಕೊಳಪಟ್ಟು ಪರಿಹಾರವನ್ನು 2 ಹಂತದಲ್ಲಿ ಫೋಟೋಗಳನ್ನು(ಮನೆ ಭಾಗಶಃ ಹಾನಿಗೊಳಗಾದ ಫೋಟೋ ಮತ್ತು ಮನೆ ದುರಸ್ತಿ ಮಾಡಿಕೊಂಡ ನಂತರದ ಫೋಟೋ) ಕಡ್ಡಾಯವಾಗಿ ಜಿಪಿಎಸ್ ಮುಖಾಂತರ ಅಳವಡಿಸಿದ ನಂತರ ಪಾವತಿಸಲಾಗುವುದು. ಸಿ ವರ್ಗದ ಮನೆಗಳ ಪರಿಹಾರದ ಮೊತ್ತ 50 ಸಾವಿರ ರೂ. ನಿಗದಿಯಾಗಿದ್ದು, ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts