ಗ್ರಾಮ ಠಾಣಾ ಜಾಗದ ವರದಿ ಕೊಡಿ

ಚಿಕ್ಕಮಗಳೂರು: ತಾಲೂಕಿನಲ್ಲಿ ಗ್ರಾಮ ಠಾಣಾ ಜಾಗವನ್ನು ಸರಿಯಾಗಿ ಗುರುತಿಸಿ ಶೀಘ್ರವೇ ವರದಿ ನೀಡಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಾಪಂ ಅಧ್ಯಕ್ಷ ನೆಟ್ಟೆಕೆರೆಹಳ್ಳಿ ಜಯಣ್ಣ ಸೂಚಿಸಿದರು.

ಸೋಮವಾರ ತಾಪಂ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಠಾಣಾ ಜಾಗ ಗುರುತಿಸುವಂತೆ ಕಳೆದ ತ್ರೖೆಮಾಸಿಕ ಸಭೆಯಲ್ಲೇ ಶಾಸಕ ಸಿ.ಟಿ.ರವಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಕೆಲಸ ಕಾಟಾಚಾರಕ್ಕೆ ನಡೆಯಬಾರದು ಎಂದು ತಿಳಿಸಿದರು.

ಸಭೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾತನಾಡಿ, ಸರ್ಕಾರದಿಂದ ಬರುವ ಯೋಜನೆಗಳನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಮಾಡುತ್ತಿದೆ ಎಂದರು.

ಇಲಾಖಾ ಯೋಜನೆಗಳ ಬಗ್ಗೆ ಕಾರ್ವಿುಕರಿಗೆ ಮಾಹಿತಿಯೇ ಇಲ್ಲದಂತಾಗಿದೆ. ಹಾಗಾಗಿ ಫಲಾನುಭವಿಗಳಿಗೆ ಇಲಾಖೆ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. ಸರ್ಕಾರಿ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡುವಂತೆ ಜಯಣ್ಣ ಸೂಚಿಸಿದರು.

ಅಕ್ಟೋಬರ್​ನಲ್ಲಿ ಶಾಸಕ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ತ್ರೖೆಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಸಮಗ್ರ ವರದಿ ಸಿದ್ಧ್ದಡಿಸುವಂತೆ ತಾಕೀತು ಮಾಡಿದರು. ಸಭೆಗೆ ಎಲ್ಲ ಅಧಿಕಾರಿಗಳು ಸಬೂಬು ಹೇಳದೆ ಹಾಜರಾಗಬೇಕು ತಿಳಿಸಿದರು.

ಪಶುಪಾಲನಾ ಇಲಾಖೆ ಅಧಿಕಾರಿ ಡಾ. ಸಿ.ರಮೇಶ್ ಮಾತನಾಡಿ, ಕಾಲುಬಾಯಿ ರೋಗಕ್ಕೆ ಲಸಿಕೆ ಕಾರ್ಯಕ್ರಮ ಅಕ್ಟೋಬರ್​ನಿಂದ ಆರಂಭವಾಗಲಿದ್ದು, ಪೂರ್ವ ಸಿದ್ಧ್ದೆ ನಡೆಸಲಾಗುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ಜಾನುವಾರು ಮೇವಿಗೆ ಕೊರತೆ ಇಲ್ಲ. ಲಖ್ಯಾ ಹೋಬಳಿ ಕಳಸಾಪುರ ಪಶುವೈದ್ಯಕೀಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದೆ ಎಂದು ಸಭೆ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಮೇವಿನ ಕೊರತೆಯಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನಪ್ರತಿನಿಧಿಗಳು ಮೇವಿನ ಕೊರತೆ ಇದೆ ಎನ್ನುತ್ತಾರೆ. ಅಧಿಕಾರಿಗಳು ಕೊರತೆ ಇಲ್ಲ ಎನ್ನುತ್ತಾರೆ. ಹಾಗಾಗಿ ಮತ್ತೊಮ್ಮೆ ಸರಿಯಾಗಿ ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು.

58 ಕಾಮಗಾರಿ ಮಾತ್ರ ಪೂರ್ಣ: ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆಯ 122 ಕಾಮಗಾರಿಗಳ ಪೈಕಿ 58 ಪೂರ್ಣಗೊಂಡಿವೆ. ಇಲಾಖೆ ಆಯುಕ್ತರು ಎರಡು ತಿಂಗಳಲ್ಲಿ ಎಲ್ಲ ಕಾಮಗಾರಿ ಮುಗಿಸುವಂತೆ ನಿರ್ದೇಶನ ನೀಡಿದ್ದಾರೆ. ತಾಲೂಕಿನ 8 ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಹೊಸ ಯೂನಿಟ್ ಅಳವಡಿಸಲಾಗಿದೆ ಎಂದು ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ತಾಲೂಕಿನಲ್ಲಿ ಟ್ಯಾಂಕರ್ ನೀರು ಪೂರೈಸಿದ ಮಾಲೀಕರಿಗೆ 40 ಲಕ್ಷ ರೂ. ಮಾತ್ರ ಕೊಡಬೇಕಿದೆ. ಗ್ರಾಮೀಣ ಪ್ರದೇಶದ ಕೊಳವೆಬಾವಿಗಳಿಗೆ ಅಳವಡಿಸಿರುವ ವಿದ್ಯುತ್ ತಂತಿಗೆ ಹಾನಿ ಮಾಡಿ ಕಿಡಿಗೇಡಿಗಳು ತೊಂದರೆ ನೀಡುತ್ತಿದ್ದಾರೆ. ಗಾಣದಾಳಿನಲ್ಲಿ ಕೊರೆದ ಕೊಳವೆಬಾವಿ ಸಮೀಪವೇ ವ್ಯಕ್ತಿಯೊಬ್ಬರು ಆಳವಾದ ಕೊಳವೆಬಾವಿ ಕೊರೆಸಿದ್ದರಿಂದ ನೀರಿನ ಸಮಸ್ಯೆ ಆಗುತ್ತಿದೆ ಎಂದು ಗಮನಕ್ಕೆ ತಂದರು. ಸಾರ್ವಜನಿಕ ಕುಡಿಯುವ ನೀರಿಗೆ ತೊಂದರೆ ನೀಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಿಡಿಒಗಳಿಗೆ ಸೂಚನೆ ನೀಡುವಂತೆ ತಾಪಂ ಇಒಗೆ ಅಧ್ಯಕ್ಷ ಜಯಣ್ಣ ಸೂಚಿಸಿದರು.