ಚಿಕ್ಕಮಗಳೂರು ಅಭಿವೃದ್ಧಿ ನಿಂತ ನೀರು

ಚಿಕ್ಕಮಗಳೂರು: ನಗರಸಭೆಗೆ ಕರ, ಮಳಿಗೆಗಳ ಬಾಡಿಗೆ ಸೇರಿ 15 ಕೋಟಿ ರೂ. ವಾರ್ಷಿಕ ಆದಾಯವಿದ್ದರೂ ಚಿಕ್ಕಮಗಳೂರು ಸಮಸ್ಯೆಗಳ ಆಗರವಾಗಿದೆ. ನಗರದಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ.

ಕೇಂದ್ರ ಸರ್ಕಾರದ 14ನೇ ಹಣಕಾಸು ನಿಧಿಯಿಂದ ನೇರವಾಗಿ 23.09 ಕೋಟಿ ರೂ. ನಗರಸಭೆಗೆ ಬಂದಿದೆ. ಇದರಲ್ಲಿ ಪ್ರಮುಖವಾಗಿ ಚರಂಡಿ, ರಸ್ತೆ ಮತ್ತು ಸೇತುವೆ ನಿರ್ವಣ, ಉದ್ಯಾನಗಳ ಅಭಿವೃದ್ಧಿ, ಬೀದಿದೀಪಗಳ ಅಳವಡಿಕೆ, ನಗರಸಭೆ ಕಟ್ಟಡಗಳ ದುರಸ್ತಿ ಹಾಗೂ ಒಳಚರಂಡಿ ವ್ಯವಸ್ಥೆ ಲೋಪ ಸರಿಪಡಿಸುವುದಕ್ಕೆ ಅವಕಾಶವಿದೆ. ಇಷ್ಟಾಗಿಯೂ ನಗರಸಭೆಯ ಚುನಾಯಿತ ಪ್ರತಿನಿಧಿಗಳು ಸಮಸ್ಯೆ ಬಗೆಹರಿಯದಿರುವುದಕ್ಕೆ ಕಾರಣ ಹುಡುಕುವ ಪ್ರಯತ್ನ ನಡೆಸುತ್ತಿಲ್ಲ.

ಚರಂಡಿಗಳು ವೈಜ್ಞಾನಿಕವಾಗಿ ನಿರ್ವಣವಾಗದ ಕಾರಣ ನೀರು ಸರಾಗವಾಗಿ ಹರಿದುಹೋಗುತ್ತಿಲ್ಲ. ಒಳಚರಂಡಿ ವ್ಯವಸ್ಥೆಯನ್ನು ಹೊಸದಾಗಿ ಮತ್ತೆ ಅಳವಡಿಸುತ್ತಿದ್ದು, ಅದನ್ನು ಪೂರ್ಣಗೊಳಿಸಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಗರಸಭೆಗೆ ಹಸ್ತಾಂತರಿಸಲು ಮುಂದಾಗಿಲ್ಲ.

ಅಮೃತ್ ಯೋಜನೆ ವ್ಯಾಪ್ತಿಗೆ ಸೇರಿರುವ ಈ ನಗರದಲ್ಲಿ ದಿನದ 24 ಗಂಟೆ ನೀರುಣಿಸಲು ಪೈಪ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕೆ 101 ಕೋಟಿ ರೂ. ಒದಗಿಸಲಾಗಿದೆ. ಈ ಯೋಜನೆಯಲ್ಲಿ ಒಳಚರಂಡಿ ದುರಸ್ತಿಗೂ 3 ಕೋಟಿ ರೂ. ನೀಡಲಾಗಿದೆ. ಇದರಲ್ಲೇ ಮಳೆ ನೀರು ಸರಾಗ ಹರಿಯಲು ಬೃಹತ್ ಚರಂಡಿಗಳನ್ನು ನಿರ್ವಿುಸಲು 10.75 ಕೋಟಿ ರೂ. ಮೀಸಲಿಡಲಾಗಿದೆ.

ಕೆರೆದಡದಲ್ಲಿ ಕಸದ ರಾಶಿ: ನಗರದಲ್ಲಿರುವ ಉಪ್ಪಳ್ಳಿ ಸೇತುವೆ, ಬಸವನಹಳ್ಳಿ ಕೆರೆ ದಂಡೆ ಒಂದು ರೀತಿ ಪರೋಕ್ಷ ಕಸ ಸಂಗ್ರಹಣೆ ಸ್ಥಳಗಳಾಗಿವೆ. ರಾತ್ರಿ ನೇರವಾಗಿ ವಾಹನಗಳಲ್ಲಿ ತ್ಯಾಜ್ಯವನ್ನು ಕೆರೆ ಹಾಗೂ ಉಪ್ಪಳ್ಳಿ ಹಳ್ಳಕ್ಕೆ ಎಸೆಯಲಾಗುತ್ತಿದೆ. ಇದನ್ನು ನಿಯಂತ್ರಿಸಲು ನಗರಸಭೆಗೆ ಸಾಧ್ಯವಾಗಿಲ್ಲ.

ಬಸವನಹಳ್ಳಿ ಕೆರೆ ದಂಡೆಗೆ ಎತ್ತರದ ಜಾಲರಿ ಅಳವಡಿಸಿ ಕಸ ಹಾಕುವುದನ್ನು ತಡೆಗಟ್ಟಬಹುದು. ಹಾಗೆಯೇ ಉಪ್ಪಳ್ಳಿಯಲ್ಲಿ ಹಿಂದೆ ಇದ್ದ ಹಳೆಯ ಸೇತುವೆಯನ್ನು ಕೆಡವಿ ಅಲ್ಲೂ ಜಾಲರಿ ಅಳವಡಿಸಲು ಅವಕಾಶವಿದೆ. ಆದರೆ ನಗರಸಭೆ ಈ ಬಗ್ಗೆ ಯಾವುದೆ ಪ್ರಯತ್ನ ಮಾಡುತ್ತಿಲ್ಲ.

ನೀರಿನ ಸಮಸ್ಯೆ ಬಗೆಹರಿಸಲು ನಗರಸಭೆಗೆ ವಾರ್ಷಿಕ 30 ಲಕ್ಷ ರೂ. ಬರುತ್ತದೆ. ಇದನ್ನು ಬಳಸಿಕೊಂಡು ಅನಿವಾರ್ಯ ಪರಿಸ್ಥಿತಿಯಲ್ಲಿ ಬೋರ್​ವೆಲ್ ಕೊರೆಯಲು ಹಾಗೂ ಆಳಗೊಳಿಸಲು, ಪೈಪ್​ಲೈನ್ ಅಳವಡಿಸಲು ಅವಕಾಶವಿದೆ. ಆದರೆ ನಗರಸಭೆ ಈ ಹಣವನ್ನು ಯಾವ ರೀತಿ ಬಳಸಿಕೊಳ್ಳುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ.

ರ್ಪಾಂಗ್ ಸೌಲಭ್ಯವಿಲ್ಲದ ಬಹುಮಹಡಿ ಕಟ್ಟಡಗಳು: ನಗರದ ಸಂಚಾರ ದಟ್ಟಣೆಗೆ ಕಾರಣವಾಗಿರುವುದು ವಾಹನ ನಿಲುಗಡೆ ವ್ಯವಸ್ಥೆ ಹೊಂದಿರದ ಬಹುಮಹಡಿ ಕಟ್ಟಡಗಳು. ಕಟ್ಟಡಗಳ ನಿರ್ವಣಕ್ಕೆ ಅನುಮತಿ ನೀಡುವಾಗ ವಾಹನ ನಿಲುಗಡೆಗೆ ಮೀಸಲಿಟ್ಟಿರುವ ಸ್ಥಳವನ್ನು ಮತ್ತೆ ವಾಣಿಜ್ಯ ವ್ಯವಹಾರಕ್ಕೆ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕಾದ ನಗರಸಭೆ ಕಂಡೂ ಕಾಣದ ಧೋರಣೆ ಅನುಸರಿಸುತ್ತಿದೆ. ಹಿಂದಿನ ಜಿಲ್ಲಾಧಿಕಾರಿ ನೋಟಿಸ್ ನೀಡಿ ನಿಲ್ಲಿಸಿದ್ದ ಈ ರೀತಿಯ ಬಹುಮಹಡಿ ಕಟ್ಟಡಗಳ ಬಗ್ಗೆ ಈವರೆಗೂ ಯಾವ ಕ್ರಮ ಸಹ ಕೈಗೊಂಡಿಲ್ಲ. ಇಷ್ಟಾಗಿಯೂ ವಾಹನ ನಿಲುಗಡೆಗೆ ಅವಕಾಶವಿಲ್ಲದ ಮೂರ್ನಾಲ್ಕು ಅಂತಸ್ತಿನ ಕಟ್ಟಡಗಳು ನಿರ್ವಣವಾಗುತ್ತಿರುವುದು ಆಶ್ಚರ್ಯ ತರುತ್ತಿದೆ.

ಅಭಿವೃದ್ಧಿ ಕಾಣದ ಉದ್ಯಾನಗಳು: ನಗರದ ಯಾವುದೇ ಉದ್ಯಾನಗಳ ಪ್ರಗತಿ ಆಗಿಲ್ಲ. ನಗರಸಭೆ ಈ ವಿಚಾರದಲ್ಲಿ ಸಂಪೂರ್ಣವಾಗಿ ತನ್ನ ಜವಾಬ್ದಾರಿ ಮರೆತಿದೆ ಎಂಬ ದೂರು ಕೇಳಿ ಬರುತ್ತಿದೆ. ನಗರದಲ್ಲಿ ಸುಮಾರು 143 ಉದ್ಯಾನಗಳಿದ್ದು, ಅವುಗಳಲ್ಲಿ ಎಂಟರಿಂದ ಹತ್ತು ಪಾರ್ಕ್​ಗಳು ಮಾತ್ರ ಉದ್ಯಾನಗಳಂತೆ ಗೋಚರವಾಗುತ್ತಿವೆ. ಅದರಲ್ಲೂ ಕೆಲವು ಪಾರ್ಕ್​ಗಳನ್ನು ಖಾಸಗಿಯವರು ನಿರ್ವಹಣೆ ಮಾಡುತ್ತಿರುವುದರಿಂದ ಸ್ವರೂಪ ಪಡೆದುಕೊಂಡಿವೆ.

ಕೆಲ ಪಾರ್ಕ್​ಗಳು ಬೀದಿನಾಯಿ, ಹಂದಿಗಳ ಆವಾಸ ಸ್ಥಾನವಾಗಿದ್ದು ಕಸದ ರಾಶಿಯಿಂದ ಕೊಳೆತು ನಾರುತ್ತಿವೆ. ಇದರಿಂದ ಅಲ್ಲಿನ ಸುತ್ತಮುತ್ತಲ ವಾತಾವರಣ ಕಲುಷಿತಗೊಂಡಿದೆ. ಸಂತೆ ಮೈದಾನ ಪಕ್ಕದಲ್ಲಿರುವ ಬಿ.ಕೆ.ಸುಂದರೇಶ್ ಪಾರ್ಕ್​ನಲ್ಲಿ ಹೆಸರಿಗೂ ಒಂದು ಸಸಿ ಇಲ್ಲ. ಆದರೆ ನಾಮಫಲಕ ಮಾತ್ರ ಅಂದವಾಗಿದೆ. ಸುತ್ತ ಇದ್ದ ಕಬ್ಬಿಣದ ಸರಳುಗಳ ಬೇಲಿ ಮಾಯವಾಗಿದೆ. ಕಾಂಪೌಂಡ್ ನಿರ್ವಿುಸಿಕೊಟ್ಟಿದ್ದರೆ ಗಿಡನೆಟ್ಟು ನಾವೇ ಪಾರ್ಕ್ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತಿದ್ದೆವು ಎನ್ನುತ್ತಾರೆ ಸ್ಥಳೀಯರು. ಅಮೃತ್ ಯೋಜನೆಯಡಿ ಲಭ್ಯವಾದ 101 ಕೋಟಿ ರೂ.ನಲ್ಲಿ 3 ಕೋಟಿ ರೂ. ಬಳಸಿ ಉದ್ಯಾನಗಳ ಅಭಿವೃದ್ಧಿಗೆ ಅವಕಾಶವಿದ್ದರೂ ಯಾರೂ ಗಮನ ಹರಿಸುವಂತೆ ಕಾಣುತ್ತಿಲ್ಲ.