ಕಂದಾಯ, ಅರಣ್ಯ ಮತ್ತು ಭೂಮಾಪನ ಇಲಾಖೆ ಜಂಟಿ ಸರ್ವೆ ಕಾರ್ಯ ಆರಂಭ

ಬಣಕಲ್: ಕಂದಾಯ, ಅರಣ್ಯ ಮತ್ತು ಭೂಮಾಪನ ಇಲಾಖೆ ಅಧಿಕಾರಿಗಳು ಕೊಟ್ಟಿಗೆಹಾರ ಸುತ್ತಮುತ್ತ ಜಂಟಿ ಸರ್ವೆ ಕಾರ್ಯ ಆರಂಭಿಸಿದರು.

ಈ ಹಿಂದೆ ಗೋಮಾಳ ಜಾಗವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿತ್ತು. ಆ ಗೋಮಾಳ ಜಾಗದಲ್ಲಿ ಹಿಂದೆ ಕೃಷಿ ಮಾಡಿದ ಭೂಮಿ ಅರಣ್ಯ ವ್ಯಾಪ್ತಿಗೆ ಬಂದು ರೈತರಿಗೆ ತುಂಬಾ ತೊಂದರೆಯಾಗಿತ್ತು. ಇದನ್ನು ಮನಗಂಡ ಸರ್ಕಾರ ಅರಣ್ಯಭೂಮಿ ಹಾಗೂ ದಟ್ಟಾರಣ್ಯ ಹಾಗೂ ಗೋಮಾಳವನ್ನು ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿದೆ. ಇದರಿಂದಾಗಿ ತಾಲೂಕಿನಾದ್ಯಂತ ಜಂಟಿ ಸರ್ವ ನಡೆಸಲಾಗುತ್ತಿದ್ದು ಮೂರು ಇಲಾಖೆ ಅಧಿಕಾರಿಗಳು ಮಂಗಳವಾರ ಕೊಟ್ಟಿಗೆಹಾರ ಸುತ್ತಮುತ್ತ ಸರ್ವೆ ಮಾಡಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಉಪವಲಯ ಅರಣ್ಯಾಧಿಕಾರಿ ಶಿವರಾಜ್, ಮೇಲಧಿಕಾರಿಗಳ ಸೂಚನೆಯಂತೆ ದಟ್ಟಾರಣ್ಯ ಹಾಗೂ ಕಂದಾಯ ಭೂಮಿ ಸರ್ವೆ ಕಾರ್ಯವನ್ನು ತರುವೆ, ಬಿನ್ನಡಿ, ಕೊಡೆಬೈಲ್, ಕೊಟ್ಟಿಗೆಹಾರದಲ್ಲಿ ನಡೆಸಲಾಗುತ್ತಿದೆ ಎಂದರು.

ರಾಜಸ್ವ ನಿರೀಕ್ಷಕ ಮಂಜುನಾಥ್, ಸರ್ವೆ ಅಧಿಕಾರಿ ಶಂಕರ್, ಅರಣ್ಯ ರಕ್ಷಕರಾದ ಚೇತನ್, ಪೂರ್ಣೆಶ್, ವಿಜಯಕುಮಾರ್ ಇದ್ದರು.