ದೇವದುರ್ಗ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮಾಡಳಿತ ಅಧಿಕಾರಿಗಳು ಸೋಮವಾರ ಕೆಲಸ ಬಹಿಷ್ಕರಿಸಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ
ಕಂದಾಯ ಇಲಾಖೆಯ ಮೊಬೈಲ್ ವೆಬ್ ತಂತ್ರಾಂಶಗಳು ನೌಕರರ ಜೀವಹಿಂಡುತ್ತಿವೆ. ತಂತ್ರಾಂಶ ನಿಗದಿಗೆ ಮೊಬೈಲ್ ಸಾಧನ, ಲ್ಯಾಪ್‌ಟಾಪ್, ಇಂಟರ್‌ನೆಟ್, ಸ್ಕ್ಯಾನರ್‌ಗಳನ್ನು ನೀಡದ ಕಾರಣ ಕೆಲಸ ಮಾಡಲು ಸಮಸ್ಯೆಯಾಗುತ್ತಿದೆ.
ಆಧಾರ್ ಸೀಡ್, ಲ್ಯಾಂಡ್‌ಬೀಟ್, ಬಗರ್‌ಹುಕುಂ, ಹಕ್ಕುಪತ್ರ, ನಮೂನೆ 1-5ರ ವೆಬ್ ಅಪ್ಲಿಕೇಷನ್, ಪೌತಿ ಆಂದೋಲನಾ ಆ್ಯಪ್ ನಿರ್ವಹಣೆಗೆ ತೊಂದರೆಯಾಗಿದೆ. ಕಂದಾಯ ನೌಕರರ ಮೇಲೆ ದಾಳಿ ನಡೆಸಿದರೂ ಭದ್ರತೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂದಾಯ ನೌಕರರಿಗೆ ಬೆಳೆ ಸಮೀಕ್ಷೆ, ಬೆಳೆ ಪರಿಹಾರ ಸಮೀಕ್ಷೆಯಿಂದ ಬಿಡುಗಡೆಗೊಳಿಸಿ ಆ ಕೆಲಸವನ್ನು ತೋಟಗಾರಿಕೆ, ಕೃಷಿ ಇಲಾಖೆಗೆ ನೀಡಬೇಕು. ಕರ್ತವ್ಯವೇಳೆ ಅನಾಹುತವಾದರೆ 25 ಲಕ್ಷ ರೂ. ಪರಿಹಾರ ನೀಡಬೇಕು. ಎಲ್ಲ ನೌಕರರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಬೇಕು. ಪೊಲೀಸ್ ಇಲಾಖೆಯಂತೆ 13 ತಿಂಗಳ ವೇತನ ನೀಡುವುದು ಸೇರಿ ಇತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಸಂಘದ ತಾಲೂಕು ಅಧ್ಯಕ್ಷ ಭೀಮನಗೌಡ ಪಾಟೀಲ್, ಕಾರ್ಯದರ್ಶಿ ಬಾವಾಸಾಬ್, ಖಜಾಂಚಿ ದೇವರಾಜ್, ಸದಸ್ಯರಾದ ಪರಶುರಾಮ್, ರುದ್ರಪ್ಪ, ಮಹಾದೇವಪ್ಪ, ರೇವಣಸಿದ್ದಪ್ಪ, ಹನುಮಂತ ಇತರರಿದ್ದರು.