
ಕಡೂರು: ಜನಸಾಮಾನ್ಯರಿಗೆ ಇ-ಆಡಳಿತ ವ್ಯವಸ್ಥೆಯ ಮೂಲಕ ಕಂದಾಯ ಇಲಾಖೆ ತ್ವರಿತ ಸೇವೆ ಒದಗಿಸಬೇಕು ಎಂದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನ 30 ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿ, ಇ-ಆಡಳಿತ ವ್ಯವಸ್ಥೆ ಮೂಲಕ ಎಲ್ಲ ದಾಖಲೆಗಳು ಶೀಘ್ರ ಮತ್ತು ಸರಳವಾಗಿ ತಲುಪಬೇಕು ಎನ್ನುವುದು ಕಂದಾಯ ಸಚಿವ ಕೃಷ್ಣ ಬೈರೇಗೌಡರ ಆಶಯ. ಕಂದಾಯ ಇಲಾಖೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಚಿವರ ದೂರದೃಷ್ಠಿಯಿಂದ ಹೊಸ ಬದಲಾವಣೆಯತ್ತ ಹೆಜ್ಜೆ ಹಾಕುತ್ತಿದೆ. ಇದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲಿನ ಒತ್ತಡ ಕಡಿಮೆಯಾಗಲಿದೆ. ಗ್ರಾಮ ಆಡಳಿತಾಧಿಕಾರಿಗಳಿಗೆ ಪಂಚಾಯಿತಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡಲು ವ್ಯವಸ್ಥೆ ಕಲ್ಪಿಸುವ ಪ್ರಸ್ತಾವನೆಯೂ ಇದೆ ಎಂದು ಮಾಹಿತಿ ನೀಡಿದರು.
ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಭಾವನೆಯಿಂದ ಜನಸಾಮಾನ್ಯರನ್ನು ಅಲೆದಾಡಿಸದೇ ಸೌಜನ್ಯದಿಂದ ಕಂಡು ಅವರ ಕೆಲಸ ಮಾಡಿಕೊಡಬೇಕು. ಇಲಾಖೆ ನೋಡಿ ಜನ ವ್ಯಕ್ತಿತ್ವ ಗುರುತಿಸುವಂತಾಗಿದ್ದು , ತಾಲೂಕು ಕಚೇರಿ ಮತ್ತು ಪೊಲೀಸ್ ಠಾಣೆ ಬದಲಾದರೆ ಜನರು ಸೌಖ್ಯದಿಂದ ಇರುತ್ತಾರೆ. ಕಡೂರು ತಾಲೂಕು ಕಚೇರಿ ಕಟ್ಟಡ ಈಗಾಗಲೇ ಸಾಕಷ್ಟು ಹಳೆಯದಾಗಿದ್ದು, ಸಿ-ಕೆಟಗರಿಯ 16 ಕೋಟಿ ರೂ. ವೆಚ್ಚದ ಹೊಸ ಪ್ರಜಾಸೌಧ ಇನ್ನು ಕೆಲವು ದಿನಗಳಲ್ಲಿ ಮಂಜೂರಾಗಲಿದೆ ಎನ್ನುವ ಭರವಸೆ ನೀಡಿದರು.
ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ,ಕಂದಾಯ ನಿರೀಕ್ಷಕರಾದ ಪಿ.ಆರ್.ರವಿಕುಮಾರ್, ಬಿ.ರವಿ, ಆರ್. ರವಿಕುಮಾರ್, ಗಿರೀಶ್, ನಾಗರಾಜ್, ಗ್ರಾಮ ಆಡಳಿತ ಅಧಿಕಾರಿಗಳಾದ ಹನುಮಂತಪ್ಪ, ಲಿಂಗರಾಜು, ವೀರೇಶ್, ನಿರ್ಮಾಲ, ತೇಜಸ್ವಿನಿ, ಶಿವಕುಮಾರ್ ಮತ್ತಿತರಿದ್ದರು.