ಜಗತ್ತಿನಲ್ಲಿ ಯೆಹೂದಿಗಳಿಗೆ ಏಕೈಕ ದೇಶವಾದ ಇಸ್ರೇಲ್ ಜನನವಾದಾಗಿನಿಂದಲೂ ಸುತ್ತಲ ಅರಬ್ ದೇಶಗಳಿಂದ ಅಪಾಯಗಳನ್ನು ಎದುರಿಸುತ್ತಲೇ ಇದೆ. ಹೀಗಾಗಿ ದೇಶ ರಕ್ಷಣೆಗೆ ಬಹುಬಗೆಯ ಕಾರ್ಯತಂತ್ರ ಹೆಣೆಯುವುದು ಅದಕ್ಕೆ ಅನಿವಾರ್ಯ. ಈ ಕಾರಣಕ್ಕೆ ಅಲ್ಲಿನ ಸೇನೆ ಹಾಗೂ ಹೋರಾಟದ ಕಿಚ್ಚು ಜಾಗತಿಕವಾಗಿ ಹೆಸರು ಗಳಿಸಿದೆ. ಹಾಗೇ ಕೃಷಿಗೂ ಆ ದೇಶ ಪ್ರಯೋಗಶೀಲ.
‘ನಮ್ಮ ಮನೆಯ ಆತ್ಮೀಯ ಅತಿಥಿಯನ್ನು ಕೊಲ್ಲುವ ಮೂಲಕ ಇಸ್ರೇಲ್ ದೊಡ್ಡ ತಪ್ಪು ಮಾಡಿದೆ. ಇದಕ್ಕಾಗಿ ಕಠಿಣ ಶಿಕ್ಷೆ ಕಾದಿದೆ. ಇಸ್ರೇಲ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದು ನಮ್ಮ ಕರ್ತವ್ಯ’- ಹೀಗೆಂದು ಇರಾನಿನ ಸವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರು ದೊಡ್ಡ ದನಿಯಲ್ಲಿ ಹೇಳಿರುವುದು ವಿಶ್ವದ ಅನೇಕ ದೇಶಗಳ ಧುರೀಣರನ್ನು ಚಿಂತೆಗೀಡು ಮಾಡಿದೆ. ಅವರು ಹೀಗೆ ಶಪಥ ಮಾಡಿದ್ದನ್ನು ನಿಜವಾಗಿಯೂ ನೆರವೇರಿಸಲು ಹೊರಟರೆ ಜಗತ್ತು ಮತ್ತೊಂದು ವಿನಾಶಕಾರಿ ಯುದ್ಧಕ್ಕೆ ಸಾಕ್ಷಿಯಾಗಬೇಕಾದೀತು ಎಂಬುದು ಜಾಗತಿಕ ನಾಯಕರ ಆತಂಕಕ್ಕೆ ಕಾರಣ. ಇರಾನ್ ನಾಯಕ ಹೀಗೆ ಗುಡುಗುವುದಕ್ಕೂ ಬಲವಾದ ಕಾರಣ ಇತ್ತು ಎನ್ನಿ. ಇಸ್ರೇಲನ್ನು ಶತಾಯಗತಾಯ ಹಣಿಯದೆ ಬಿಡಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಪ್ಯಾಲೆಸ್ತೀನ್ನ ಹಮಾಸ್ ಸಂಘಟನೆಯ ಮುಂಚೂಣಿ ನಾಯಕ ಇಸ್ಮಾಯಿಲ್ ಹನಿಯೆ ಎಂಬಾತನನ್ನು ಇರಾನ್ ರಾಜಧಾನಿ ಟೆಹ್ರಾನಿನಲ್ಲಿ ಮೊನ್ನೆ ಬುಧವಾರ ಹತ್ಯೆಗೈಯ್ಯಲಾಗಿದೆ. ಜುಲೈ 30ರಂದು ಇರಾನ್ ಸಂಸತ್ ‘ಮಜ್ಲಿಸ್’ನಲ್ಲಿ ನಡೆದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಆತ ಭಾಗವಹಿಸಿ ಮನೆಗೆ ವಾಪಸಾದ ಕೆಲ ಸಮಯದಲ್ಲಿ ಈ ಹತ್ಯೆ ನಡೆದಿದೆ. ತನ್ನ ರಾಜಧಾನಿಯಲ್ಲಿ ಆದ ಈ ಘಟನೆ ಇರಾನ್ ಮುಂದಾಳುಗಳಿಗೆ ಮುಜುಗರ ಕೂಡ ಹೌದು. ಇರಾನ್ ಸೇನೆ ಹಾಗೂ ಹಮಾಸ್ ಪ್ರಕಾರ ಇದು ಇಸ್ರೇಲಿನ ಕೃತ್ಯ. ಆದರೆ ಇಸ್ರೇಲ್ ಏನೂ ಪ್ರತಿಕ್ರಿಯೆ ನೀಡಿಲ್ಲ. ಈ ಪ್ರಕರಣ ಎಂದಲ್ಲ, ಇಂತಹ ಘಟನೆಗಳು ನಡೆದಾಗಲೆಲ್ಲ ತನ್ನ ಮೇಲೆ ಆರೋಪ ಬಂದರೂ ಇಸ್ರೇಲ್ ಅಷ್ಟಾಗಿ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗುವುದಿಲ್ಲ. ಯಾರು ಏನೇ ಹೇಳಿದರೂ ತನ್ನ ಗುರಿ ತನಗೆ ಎಂಬುದು ಅದರ ಲೆಕ್ಕಾಚಾರ ಇರಬೇಕು.
ಗಾಜಾದ ನಿರಾಶ್ರಿತರ ಶಿಬಿರವೊಂದರಲ್ಲಿ 1962ರಲ್ಲಿ ಜನಿಸಿದ ಇಸ್ಮಾಯಿಲ್ ಹನಿಯೆ 1988ರಲ್ಲಿ ಹಮಾಸ್ ಸ್ಥಾಪಕರಲ್ಲಿ ಒಬ್ಬ. 2003ರಲ್ಲಿ ಕೊಲೆಯತ್ನದಿಂದ ಪಾರಾಗಿದ್ದ. 2006ರಲ್ಲಿ ಗಾಜಾದಲ್ಲಿ ಹಮಾಸ್ ನಾಯಕನಾದ ಈತ ಅಲ್ಪಾವಧಿಗೆ ಪ್ಯಾಲೆಸ್ತೀನಿಯನ್ ಸಮ್ಮಿಶ್ರ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ. ಆಗ ಫತಾ ಗುಂಪಿನೊಂದಿಗೆ ಭಿನ್ನಾಭಿಪ್ರಾಯ ಬಂದಿದ್ದರಿಂದಾಗಿ ಆ ಸರ್ಕಾರ ಬಹಳ ದಿನ ಬಾಳಲಿಲ್ಲ. 2017ರಲ್ಲಿ ಹಮಾಸ್ನ ರಾಜಕೀಯ ಮುಖ್ಯಸ್ಥ ಹುದ್ದೆಗೇರಿದ. ಸದ್ಯ ಕತಾರ್ನಲ್ಲಿ ನೆಲೆಸಿದ್ದ ಆತ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಮಾತುಕತೆಯಲ್ಲಿ ಭಾಗವಹಿಸುತ್ತಿದ್ದ. ಈಜಿಪ್ಟ್, ಕತಾರ್ ಮತ್ತು ಅಮೆರಿಕ ಈ ಮಾತುಕತೆಯ ಮಧ್ಯಸ್ಥಿಕೆ ವಹಿಸಿವೆ. ಇದೇ ಏಪ್ರಿಲ್ನಲ್ಲಿ ಗಾಜಾ ಸಿಟಿ ಹತ್ತಿರ ಇಸ್ರೆಲ್ ನಡೆಸಿದ ದಾಳಿಯಲ್ಲಿ ಈತನ ಮೂವರು ಪುತ್ರರು ಹಾಗೂ ಅನೇಕ ಮೊಮ್ಮಕ್ಕಳು ಸಾವನ್ನಪ್ಪಿದ್ದರು. ಇದೀಗ ಹನಿಯೆ ಕೊಲೆ ಕಾರಣಕ್ಕೆ, ಕದನ ವಿರಾಮ ಮಾತುಕತೆಗೆ ಹಿನ್ನಡೆ ಆಗುವ ಸಾಧ್ಯತೆ ನಿಚ್ಚಳವಾಗಿದೆ.
ಟಾರ್ಗೆಟ್ ಹತ್ಯೆ ವಿಷಯದಲ್ಲಿ ಇಸ್ರೇಲ್ ದೀರ್ಘ ಇತಿಹಾಸವನ್ನೇ ಹೊಂದಿದೆ. ಇಸ್ರೇಲಿ ಪತ್ರಕರ್ತ ರೊನೆನ್ ಬ್ರೆಗ್ಮನ್ ಅವರು ‘ಜಿಠಛಿ ಚ್ಞಛ ಓಜ್ಝಿ್ಝ ಊಜ್ಟಿಠಠಿ’ ಎಂಬ ಕೃತಿಯಲ್ಲಿ ಇಂಥ ಸುಮಾರು 2,700 ಹತ್ಯೆಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ. ತನ್ನ ದೇಶದ ಎಲ್ಲೆಯೊಳಗೆ ಇಸ್ರೇಲ್ ಇಂಥ ಅನೇಕ ಕೊಲೆಗಳನ್ನು ನಡೆಸಿದೆ ಎಂದು ಇರಾನ್ ಆರೋಪಿಸುತ್ತಲೇ ಇದೆ. ಆದರೆ ಇಸ್ರೇಲ್ ಇದನ್ನು ನಿರಾಕರಿಸುತ್ತದೆ.
2020ರ ನವೆಂಬರಿನಲ್ಲಿ ಇರಾನಿನ ಅಣುವಿಜ್ಞಾನಿ ಮೊಹ್ಸೀನ್ ಫಕ್ರಿಜಾದೇ ಹತ್ಯೆ ನಡೆಯಿತು. ರಿಮೋಟ್ ಕಂಟ್ರೋಲ್ ಮಷಿನ್ ಗನ್ನಿಂದ ಈ ಕೊಲೆ ಮಾಡಲಾಯಿತು. ಈ ವಿಜ್ಞಾನಿ ಇಸ್ರೇಲ್ ಗುಪ್ತಚರ ದಳದ ಪ್ರಮುಖ ಟಾರ್ಗೆಟ್ಗಳಲ್ಲಿ ಒಬ್ಬರಾಗಿದ್ದರು. ಅದೇ ವರ್ಷ ಟೆಹ್ರಾನಿನ ಎರಡು ಕಡೆಗಳಲ್ಲಿ 20 ನಿಮಿಷಗಳ ಅಂತರದಲ್ಲಿ ಕಾರ್ ಬಾಂಬ್ ಮೂಲಕ ಇಬ್ಬರು ವಿಜ್ಞಾನಿಗಳನ್ನು ಗುರಿಯಾಗಿಸಿ ದಾಳಿಯಾಗಿತ್ತು. ಇದರಲ್ಲಿ ಓರ್ವ ವಿಜ್ಞಾನಿ ಸಾವನ್ನಪ್ಪಿದರು. 2022ರ ಮೇ ತಿಂಗಳಲ್ಲಿ ಮೋಟಾರ್ ಬೈಕ್ನಲ್ಲಿ ಬಂದ ಇಬ್ಬರು ಇರಾನ್ ಸೇನೆಯ ಕರ್ನಲ್ ಸೈಯದ್ ಖೋದಾಯಿ ಅವರನ್ನು ಸಾಯಿಸಿದ್ದರು. ಈ ಬಗ್ಗೆ ಇರಾನ್ ತನ್ನ ಮೇಲೆ ಆರೋಪ ಮಾಡಿದಾಗ ಇಸ್ರೇಲ್ ಪ್ರತಿಕ್ರಿಯೆ ನೀಡದೆ ಮೌನವಹಿಸಿತ್ತು. 2022ರಲ್ಲಿ ಇರಾನಿನ ಇಬ್ಬರು ವಿಜ್ಞಾನಿಗಳು ದಿಢೀರನೆ ಅಸ್ವಸ್ಥತೆಗೆ ಒಳಗಾಗಿ ಕೆಲ ದಿನಗಳಲ್ಲಿ ಸಾವಿಗೀಡಾದರು. ಇವರ ಆಹಾರದಲ್ಲಿ ಇಸ್ರೇಲ್ ವಿಷ ಬೆರೆಸಿತ್ತು ಎಂದು ಇರಾನ್ ಆಪಾದಿಸಿತ್ತು.
ಇಸ್ಮಾಯಿಲ್ ಹನಿಯೆ ಹತ್ಯೆ ಹೇಗಾಯಿತು ಎಂಬ ನಿಖರ ಮಾಹಿತಿ ಇಲ್ಲ. ಆದರೆ ಏಳು ಮಂದಿ ಪಶ್ಚಿಮ ಏಷ್ಯಾ ಅಧಿಕಾರಿಗಳನ್ನು ಉಲ್ಲೇಖಿಸಿ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಒಂದು ಚಿತ್ರಣವನ್ನು ನೀಡಿದೆ. ಆ ವರದಿ ಪ್ರಕಾರ- ಹನಿಯೆ ಉಳಿದುಕೊಂಡಿದ್ದ ಅತಿಥಿಗೃಹದಲ್ಲಿ ಎರಡು ತಿಂಗಳ ಹಿಂದೆಯೇ ಬಾಂಬ್ ಅಡಗಿಸಿ ಇಡಲಾಗಿತ್ತು. ಅಂದು ಆತ ತನ್ನ ರೂಮಿನಲ್ಲಿ ಇದ್ದಾನೆ ಎಂಬುದನ್ನು ಖಚಿತಪಡಿಸಿಕೊಂಡು ರಿಮೋಟ್ ಸಾಧನದ ಮೂಲಕ ಬಾಂಬ್ ಸ್ಪೋಟಿಸಲಾಯಿತು. ಈ ಗೆಸ್ಟ್ಹೌಸ್ನ್ನು ಇರಾನ್ ಸೇನೆಯೇ ನಿರ್ವಹಿಸುತ್ತದೆ. ಅಂಥ ಬಿಗಿ ಕಾವಲು ಇರುವಲ್ಲಿ ಬಾಂಬ್ ಒಳ ಸಾಗಿಸಿದ್ದು ಹೇಗೆ ಎಂಬುದು ಮಾತ್ರ ನಿಗೂಢ.
ಇಸ್ಮಾಯಿಲ್ ಹನಿಯೆ ಹತ್ಯೆಗೂ ಮುನ್ನ ಆದ ಎರಡು ಪ್ರಕರಣ ಕೂಡ ಗಮನಾರ್ಹ. ಇಸ್ರೇಲ್ ರಾಜಧಾನಿ ಟೆಲ್ ಅವಿವ್ ಮೇಲೆ ಹೌತಿ ಉಗ್ರರು ಕೆಲ ದಿನಗಳ ಹಿಂದೆ ಡ್ರೋನ್ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆ ಜುಲೈ 20ರಂದು ಯೆಮೆನ್ನ ನಗರವೊಂದರ ಮೇಲೆ ದಾಳಿ ನಡೆಸಿತ್ತು. ಈ ನಗರ ಹೌತಿ ಉಗ್ರರ ವಶದಲ್ಲಿ ಇರುವಂತಹದು. ಜುಲೈ 30ರಂದು ಇಸ್ರೇಲ್ ಸೇನೆ ಲೆಬನಾನ್ ರಾಜಧಾನಿ ಬೈರುತ್ ಮೇಲೆ ವಾಯು ದಾಳಿ ನಡೆಸಿ ಹಿಜ್ಬುಲ್ಲಾ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಫೌದ್ ಶುಕರ್ ಎಂಬಾತನನ್ನು ಹೊಡೆದುರುಳಿಸಿತ್ತು. ಅದೇ ದಿನ ಇಸ್ಮಾಯಿಲ್ ಹನಿಯೆ ಹತ್ಯೆ ನಡೆಯಿತು.
ಹೌತಿ, ಹಿಜ್ಬುಲ್ ಮತ್ತು ಹಮಾಸ್- ಈ ಮೂರೂ ಸಂಘಟನೆಗಳು ಇರಾನ್ ಜೊತೆಗೆ ಉತ್ತಮ ನಂಟು ಹೊಂದಿರುವವು ಎಂಬುದು ಗಮನಿಸಬೇಕಾದ ಅಂಶ. ಅಂದರೆ ಇವರೆಲ್ಲರಿಗೂ ಇಸ್ರೇಲ್ ಸಮಾನಶತ್ರು. ಇಸ್ರೇಲ್ ಜೊತೆಗಿನ ಜಟಾಪಟಿಯಲ್ಲಿ ಇರಾನ್ ದೇಶವು ಹಮಾಸ್ ಬೆಂಬಲಕ್ಕೆ ನಿಂತಿರುವುದು ಗೊತ್ತಿರುವುದೇ. 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಪ್ರದೇಶಗಳ ಮೇಲೆ ದಾಳಿ ನಡೆಸಿದ್ದರು. ಆ ವೇಳೆ ಸುಮಾರು 1200 ಮಂದಿ ಇಸ್ರೇಲಿ ನಾಗರಿಕರು ಮೃತಪಟ್ಟರು. ಇದಕ್ಕೆ ಪ್ರತಿದಾಳಿ ಆರಂಭಿಸಿದ ಇಸ್ರೇಲ್, ಹಮಾಸ್ ಸಂಘಟನೆಯನ್ನು ಪೂರ್ತಿ ನಾಶ ಮಾಡುವ ಶಪಥ ಮಾಡಿದೆ. ಅಂದಿನಿಂದಲೂ ಈ ಸಂಘರ್ಷ ನಡೆದೇ ಇದೆ. ಎರಡೂ ಕಡೆ ಅಪಾರ ಸಾವುನೋವು ಆಗುತ್ತಿವೆ. ಸಿರಿಯಾದಲ್ಲಿ ತನ್ನ ದೂತಾವಾಸದ ಸಂಕೀರ್ಣದ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಇರಾನ್ ಪ್ರತಿದಾಳಿ ನಡೆಸಿತ್ತು. ಆದರೆ ಈಗ ಇಸ್ರೇಲ್ ಯಾವ ಪರಿ ಏಟು ನೀಡಿದೆ ಎಂದರೆ ಇರಾನ್ ಪ್ರತಿಷ್ಠೆಗೆ ಭಂಗ ಉಂಟಾಗುವಂತೆ ಮಾಡಿದೆ. ಇಸ್ರೇಲಿನ ಗೂಢಚರ್ಯು ದಳವಾದ ಮೊಸಾದ್ ಅನ್ಯ ದೇಶಗಳಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿ ತನ್ನ ವೈರಿಗಳನ್ನು ಹುಡುಕಿ ಹುಡುಕಿ ಕೊಲ್ಲುವಲ್ಲಿ ಎತ್ತಿದ ಕೈ. ಬೇರೆ ದೇಶಗಳಿಗೆ ಹೋಗಿ ವೇಷ ಮರೆಸಿಕೊಂಡು, ನಾನಾ ವೇಷ ಧರಿಸಿಕೊಂಡು ರಹಸ್ಯ ಸಂಗತಿಗಳನ್ನು ಪತ್ತೆಹಚ್ಚುವಲ್ಲಿ ಮೊಸಾದ್ ಉಸ್ತಾದ್ ಎಂಬುದು ತಜ್ಞರ ಅಭಿಮತ. ಈಗ ಇರಾನ್ ಒಳಕ್ಕೆ ಅದು ತನ್ನ ಬೇರುಗಳನ್ನು ಚಾಚಿರುವ ಹಾಗೆ ಕಾಣುತ್ತಿದೆ. ಹಾಗಿಲ್ಲವಾದಲ್ಲಿ ಇರಾನ್ ರಾಜಧಾನಿಯಲ್ಲಿಯೇ ಇಂತಹ ಅಪಾಯಕಾರಿ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ ಎಂಬುದು ಅಂತಾರಾಷ್ಟ್ರೀಯ ವಿಶ್ಲೇಷಕರ ಅಭಿಪ್ರಾಯ. ಈಗಿನ ಘಟನೆಗೆ ಇರಾನ್ ಪ್ರತಿಕ್ರಿಯೆ ನೀಡುವುದೇ? ನೀಡುವುದಾದಲ್ಲಿ ಅದರ ಸ್ವರೂಪ ಹೇಗಿರುತ್ತದೆ? ಪಶ್ಚಿಮ ಏಷ್ಯಾವು ಪೂರ್ಣ ಪ್ರಮಾಣದ ಯುದ್ಧವನ್ನು ಕಾಣಬೇಕಾಗಿ ಬರುವುದೇ? ಇವೆಲ್ಲ ಪ್ರಶ್ನೆಗಳು. ಇನ್ನೊಂದು ಕಡೆ, ರಷ್ಯಾ ಮತ್ತು ಯೂಕ್ರೇನ್ ನಡುವಣ ಸಮರ ಎರಡೂವರೆ ವರ್ಷದಿಂದ ಯಾವ ರ್ತಾಕ ಅಂತ್ಯವನ್ನೂ ಕಾಣದೆ ಸಾಗುತ್ತಲೇ ಇರುವ ನಡುವೆಯೇ ಜಗತ್ತು ಮತ್ತೊಂದು ಯುದ್ಧಕ್ಕೆ ಸಾಕ್ಷಿಯಾಗಬೇಕಾಗುತ್ತದೆಯೇ ಎಂಬುದು ಸದ್ಯದ ಆತಂಕ.
ಈ ನಡುವೆ, ಹಮಾಸ್ ನಾಯಕನ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ನೇರ ದಾಳಿ ನಡೆಸುವಂತೆ ಆಯತೊಲ್ಲಾ ಅಲಿ ಖಮೇನಿ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯಲ್ಲಿ ಸೂಚನೆ ನೀಡಿದ್ದಾರೆಂದು ಮೂಲಗಳನ್ನು ಉಲ್ಲೇಖಿಸಿ ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ಆದೇಶವೇನಾದರು ಕಾರ್ಯರೂಪಕ್ಕೆ ಬಂದಲ್ಲಿ ಯುದ್ಧ ನಿಕ್ಕಿ. ಗಾಯದ ಮೇಲೆ ಬರೆ ಎಂಬಂತೆ, ಹಮಾಸ್ ಸೇನಾ ಮುಖ್ಯಸ್ಥ ಮೊಹಮದ್ ಡೀಫ್ ಸಹ ತಾನು ನಡೆಸಿದ ವಾಯು ದಾಳಿಯಲ್ಲಿ ಹತನಾಗಿದ್ದಾನೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. 2023ರ ಅಕ್ಟೋಬರ್ ದಾಳಿಯ ಸೂತ್ರಧಾರ ಈತ ಎಂಬುದು ಇಸ್ರೇಲ್ ಅಂಬೋಣ. ಈತನ ಹತ್ಯೆಗೆ ಮೊಸಾದ್ ಏಳು ಬಾರಿ ಯತ್ನ ನಡೆಸಿತ್ತು.
ಜಗತ್ತಿನಲ್ಲಿ ಯೆಹೂದಿಗಳಿಗೆ ಏಕೈಕ ದೇಶವಾದ ಇಸ್ರೇಲ್ ಜನನವಾದಾಗಿನಿಂದಲೂ ಸುತ್ತಲ ಅರಬ್ ದೇಶಗಳಿಂದ ಅಪಾಯಗಳನ್ನು ಎದುರಿಸುತ್ತಲೇ ಇದೆ. ಹೀಗಾಗಿ ದೇಶ ರಕ್ಷಣೆಗೆ ಬಹುಬಗೆಯ ಕಾರ್ಯತಂತ್ರ ಹೆಣೆಯುವುದು ಅದಕ್ಕೆ ಅನಿವಾರ್ಯ. ಈ ಕಾರಣಕ್ಕೆ ಅಲ್ಲಿನ ಸೇನೆ ಹಾಗೂ ಹೋರಾಟದ ಕಿಚ್ಚು ಜಾಗತಿಕವಾಗಿ ಹೆಸರು ಗಳಿಸಿದೆ. ಹಾಗೇ ಕೃಷಿಗೂ ಆ ದೇಶ ಪ್ರಯೋಗಶೀಲ. ಇಸ್ರೇಲ್ ಯುದ್ಧಕೋರ ದೇಶ ಎಂದು ಕೆಲವರು ಆರೋಪಿಸುತ್ತಾರೆ. ‘ಸ್ವಾಮಿ, ನಮ್ಮ ಮೇಲೆ ಸದಾ ಜಗಳ ಕಾಯುತ್ತ ಇದ್ದರೆ ನಾವು ಸುಮ್ಮನೆ ಕೂರಲು ಆಗುತ್ತದೆಯೇ? ನಮ್ಮ ನೆಲ, ಜನರನ್ನು ಕಾಪಾಡಿಕೊಳ್ಳುವುದು ತಪ್ಪಾ ನೀವೇ ಹೇಳಿ. ಅಷ್ಟಕ್ಕೂ ದೇಶವೇ ಇಲ್ಲವಾದರೆ ನಾವು ಹೋಗುವುದಾದರೂ ಎಲ್ಲಿಗೆ?’ ಎಂಬುದು ಅಲ್ಲಿನ ನಾಯಕರ ಸಮರ್ಥನೆ.
ಯುದ್ಧರಹಿತ ವಿಶ್ವ ಎಂಬುದು ಒಂದು ದೊಡ್ಡ ಆದರ್ಶ. ಅದು ಸಾಕಾರವಾದಲ್ಲಿ ಎಲ್ಲರಿಗೂ ಶಾಂತಿ- ನೆಮ್ಮದಿ. ಆದರೆ ಅದು ಸಾಧ್ಯವೇ ಎಂಬುದು ಪ್ರಶ್ನೆ. ನಮ್ಮದೇ ಉದಾಹರಣೆ ನೋಡೋಣ. ಪಾಕಿಸ್ತಾನ ಮತ್ತು ಚೀನಾಗಳು ಕಾಲು ಕೆದರಿ ಜಗಳಕ್ಕೆ ಬರದೇ ಇದ್ದರೆ ನಾವು ಮಾತ್ರವಲ್ಲ ಅವರೂ ನೆಮ್ಮದಿಯಿಂದ ಇರಬಹುದಿತ್ತು. ಆ ದೇಶಗಳ ತಂಟೆಕೋರತನ ಬುದ್ಧಿಯಿಂದಾಗಿ ನಾವು ಸದಾ ಸನ್ನದ್ಧ ಸ್ಥಿತಿಯಲ್ಲಿ ಇರಬೇಕಾಗುತ್ತದೆ. ದೇಶ ವಿಭಜನೆ ಆದ ಲಾಗಾಯ್ತಿನಿಂದಲೂ ಪಾಕಿಸ್ತಾನ ಮಾಡುತ್ತಿರುವ ಕಿತಾಪತಿ ಒಂದಾ ಎರಡಾ? ಭಾರತದ ಜೊತೆಗಿನ ನಾಲ್ಕು ಯುದ್ಧಗಳಲ್ಲಿ ಪೆಟ್ಟು ತಿಂದರೂ ಅಲ್ಲಿನ ನಾಯಕರು ಬುದ್ಧಿ ಕಲಿತಿಲ್ಲ. ಭಾರತವಿರೋಧಿ ಭಜನೆ ಮಾಡುವುದು ಅವರ ಅಸ್ತಿತ್ವದ ಪ್ರಶ್ನೆ ಅನಿಸುತ್ತದೆ! ಕಾರ್ಗಿಲ್ ವಿಜಯಕ್ಕೆ ಇದೀಗ 25 ವರ್ಷಗಳು. ಆಗ ನಮ್ಮ ಸೇನೆ ಪ್ರತಿಕೂಲ ಹವಾಮಾನ ಮತ್ತು ಸನ್ನಿವೇಶದಲ್ಲಿಯೂ ಕೆಚ್ಚೆದೆಯಿಂದ ಹೋರಾಡಿ ಜಯ ಸಾಧಿಸಿತು. ಆದರೆ ನಮ್ಮ 527 ಸೈನಿಕರ ಬಲಿದಾನವಾಯಿತು. ಮನೆಮಕ್ಕಳನ್ನು ಕಳೆದುಕೊಂಡ ನೂರಾರು ಕುಟುಂಬಗಳ ಕಣ್ಣೀರು ಒರೆಸಲು ಸಾಧ್ಯವೇ? ಪಾಕ್ ಕಡೆಯೂ ಅಪಾರ ಸಾವುನೋವು ಆಯಿತು. ಕಾರ್ಗಿಲ್ ದುಸ್ಸಾಹಸಕ್ಕೆ ಪಾಕ್ ಕೈ ಹಾಕದೆ ಇದ್ದರೆ ಇದೆಲ್ಲ ಆಗುತ್ತಿತ್ತಾ?
ಕೊನೇ ಮಾತು: ನಮ್ಮ ರಾಜ್ಯವೂ ಸೇರಿ ದೇಶದ ವಿವಿಧ ಭಾಗಗಳಲ್ಲಿ ಮಳೆಯಿಂದಾಗಿ ಅಪಾರ ಹಾನಿ ಉಂಟಾಗುತ್ತಿದೆ. ದುರಂತ ಸ್ಥಳಗಳಿಂದ ಬರುತ್ತಿರುವ ವರದಿಗಳು ಮನಕಲಕುವಂತಿವೆ. ನಿಸರ್ಗದ ಆರ್ಭಟ, ಕೋಪದ ಎದುರು ಮಾನವ ಅಸಹಾಯಕ. ಈ ಪೈಕಿ ಕೆಲ ಘಟನೆಗಳು ಪ್ರಕೃತಿಯ ವಿಷಯದಲ್ಲಿ ವಿವೇಚನಾಯುಕ್ತವಾಗಿ ನಡೆದುಕೊಳ್ಳುವ ಅಗತ್ಯವನ್ನು ಮತ್ತೆ ಸಾರಿವೆ. ಯುದ್ಧ ಹಾಗಲ್ಲ. ಮಾನವ ಬೇಕೆಂದೇ, ಬುಧ್ಯಾಪೂರ್ವಕ ಆಹ್ವಾನಿಸುವ ದುರಂತ. ಅಲ್ಲವೇ?
‘ಹರ್ ಘರ್ ತಿರಂಗ’ ಅಭಿಯಾನ: ರಾಷ್ಟ್ರಧ್ವಜದ ಜೊತೆ ಸೆಲ್ಫೀ ಕ್ಲಿಕ್ಕಿಸಿ ಅಪ್ಲೋಡ್ ಮಾಡಲು ಅಮಿತ್ ಷಾ ಮನವಿ