ಕಾಫಿ ನಾಡಲ್ಲಿ ಚುನಾವಣೆ ರಂಗೇರಿಸದ ಸ್ಟಾರ್ ಪ್ರಚಾರಕರು

ಚಿಕ್ಕಮಗಳೂರು: ದೇಶದ 18ನೇ ಲೋಕಸಭೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಏ.18 ರಂದು ನಡೆಯಲಿರುವ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ತಿಂಗಳ ಕಾಲ ನಡೆಸಿದ ಬಹಿರಂಗ ಪ್ರಚಾರದ ಕಸರತ್ತಿಗೆ ಮಂಗಳವಾರ ಸಂಜೆ 6 ಗಂಟೆಗೆ ತೆರೆಬಿದ್ದಿತು. ಸ್ಟಾರ್ ಪ್ರಚಾರಕರು ಕ್ಷೇತ್ರಕ್ಕೆ ಆಗಮಿಸಿದರೂ ಚುನಾವಣಾ ಕಣ ರಂಗೇರಲಿಲ್ಲ.

ಸುಮಾರು ಒಂದೂವರೆ ತಿಂಗಳ ಕಾಲ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಅಭ್ಯರ್ಥಿಗಳು ಪ್ರಚಾರ ಸಭೆ, ಸಮಾರಂಭಗಳು, ಪಾದಯಾತ್ರೆ, ರೋಡ್ ಶೋಗಳ ಮೂಲಕ ಮತದಾರರ ಮನ ಗೆಲ್ಲುವ ಕಸರತ್ತು ನಡೆಸಿದ ಅಭ್ಯರ್ಥಿಗಳು ಮತದಾರರ ಮನ ಗೆಲ್ಲಲು ಕೊನೆಯ ಕ್ಷಣದ ತೀವ್ರ ಕಸರತ್ತು ಆರಂಭಿಸಿದ್ದಾರೆ. ಸ್ಟಾರ್ ಪ್ರಚಾರಕರು

ಇನ್ನೇನಿದ್ದರೂ ಮತದಾರರ ಮನೆ ಮನೆಗಳಿಗೆ ತೆರಳಿ ಕದ ತಟ್ಟಿ ಮತದಾರರ ಮನವೊಲಿಸುವುದು ಬಾಕಿ ಉಳಿದಿದೆ. ಮತದಾರರ ಮೇಲೆ ಕೊನೆಯ ಕ್ಷಣದ ಹಣ, ಹೆಂಡದ ಆಮಿಷವೊಡ್ಡುವ ಪ್ರಭಾವದ ಸಾಧ್ಯತೆಗೂ ಹೆಚ್ಚು ಅವಕಾಶವಾಗುವುದು ಈ ಹಂತದಲ್ಲೆ. ಹೀಗಾಗಿ ಜಿಲ್ಲಾದ್ಯಂತ ಚುನಾವಣಾ ಆಯೋಗದ ಕಣ್ಗಾವಲು ಹೆಚ್ಚು ತೀಕ್ಷ್ಣವಾಗಿರಲಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹೆಸರಿಗೆ 12 ಅಭ್ಯರ್ಥಿಗಳು ಕಣದಲ್ಲಿದ್ದರೂ ಬಿಜೆಪಿ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಬಿಟ್ಟರೆ ಬಹುತೇಕರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ. ಹಲವರು ಪ್ರಚಾರದಲ್ಲಿ ಗುರುತಿಸಿಕೊಳ್ಳಲೇ ಇಲ್ಲ ಎನ್ನುವುದು ಗಮನಾರ್ಹ ಅಂಶ.

ಆರೋಪ-ಪ್ರತ್ಯಾರೋಪಕ್ಕೆ ಕೊರತೆಯಿಲ್ಲ: ಚುನಾವಣಾ ಆಯೋಗದ ದಿಗ್ಬಂಧನ, ಖರ್ಚಿಗೆ ಮಿತಿ ಹೇರಿಕೆ ನಡುವೆ ಪ್ರಚಾರದಲ್ಲಿ ಹೆಚ್ಚಿನ ಅಬ್ಬರ ಕಂಡು ಬರದಿದ್ದರೂ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ, ಕೆಸರೆರಚಾಟಕ್ಕೇನೂ ಕೊರತೆ ಇರಲಿಲ್ಲ. ನೆತ್ತಿ ಸುಡುವ ಬಿಸಿಲ ಝುಳದ ನಡುವೆ ಕ್ಷೇತ್ರದ ಉದ್ದಗಲಕ್ಕೂ ಅಡ್ಡಾಡಿದ ಮುಖಂಡರು ಹಾಗೂ ಕಾರ್ಯಕರ್ತರು, ಪ್ರಚಾರ ಸಭೆಗಳಲ್ಲಿ ಬೊಬ್ಬಿರಿದು ಮತದಾರರನ್ನು ಓಲೈಸುವ ಪ್ರಯತ್ನ ನಡೆಸಿದ್ದಾರೆ.

ಸಿಎಂ ಸೀಮಿತ ಪ್ರಚಾರ: ರಾಜ್ಯದ ಬೇರೆ ಕ್ಷೇತ್ರಗಳನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಹೋಲಿಸಿದರೆ ರಾಷ್ಟ್ರಮಟ್ಟದ ಪ್ರಭಾವಿ ನಾಯಕರಾರೂ ಜಿಲ್ಲೆಗೆ ಭೇಟಿ ನೀಡಿಲ್ಲ. ಮೈತ್ರಿ ಒಡಂಬಡಿಕೆ ಪ್ರಕಾರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಟ್ಟರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೊಪ್ಪ, ಮೂಡಿಗೆರೆ, ತರೀಕೆರೆಯಲ್ಲಿ ಪ್ರಚಾರ ಮಾಡಿದ್ದು ಬಿಟ್ಟರೆ ಮತ್ತೆಲ್ಲಿಗೂ ಭೇಟಿ ನೀಡಿಲ್ಲ. ಹೀಗಾಗಿ ಕೊನೆವರೆಗೂ ಜಿಲ್ಲೆಯ ಚುನಾವಣಾ ಕಣದ ರಂಗು ಏರಲೇ ಇಲ್ಲ.

ಗಮನಸೆಳೆದಿದ್ದು 8 ಮಂದಿ: ಸ್ಟಾರ್ ಪ್ರಚಾರಕರಾಗಿ ಕಾಂಗ್ರೆಸ್​ನಿಂದ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವೆ ಜಯಮಾಲಾ ಜಿಲ್ಲೆಯ ಕೆಲವೆಡೆ ಪ್ರಚಾರ ಸಭೆಗಳಲ್ಲಿ ಭಾಗಿಯಾಗಿದ್ದರೆ, ಬಿಜೆಪಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಎಸ್ಸಿ ಮೋರ್ಚಾದ ಅಧ್ಯಕ್ಷ ಡಿ.ಎಸ್.ವೀರಯ್ಯ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಪ್ರಚಾರ ನಡೆಸಿದರು.

Leave a Reply

Your email address will not be published. Required fields are marked *