ಬಲಿಗಾಗಿ ಕಾದಿದೆ ರಸ್ತೆ ಗುಂಡಿ

ರೇವತಗಾಂವ: ಗ್ರಾಮದಿಂದ ಉಮರಜಗೆ ತೆರಳುವ 1 ಕಿ.ಮೀ. ದೂರದಲ್ಲಿ ರಸ್ತೆ ಪಕ್ಕ ಬೃಹತ್ ಗುಂಡಿ ಬಿದ್ದಿದ್ದು ಬೈಕ್ ಹಾಗೂ ಇತರ ವಾಹಕನ ಚಾಲಕರು ಅಪಘಾತಕ್ಕೆ ಈಡಾಗುವ ಸಾಧ್ಯತೆ ಹೆಚ್ಚಾಗಿ ಜೀವಭಯದಲ್ಲಿ ಸಂಚರಿಸುವಂತಾಗಿದೆ.
ರಸ್ತೆ ಪಕ್ಕದಲ್ಲಿ ಈ ಗುಂಡಿ ಕಾಣಿಸಿಕೊಂಡು ಹಲವಾರು ತಿಂಗಳು ಕಳೆದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನ ಹರಿಸಿಲ್ಲ. ರಸ್ತೆಯಲ್ಲಿ ಸಂಚರಿಸುವ ವಾಹನ ಹಾಗೂ ಬೈಕ್ ಸವಾರರು ಗೊತ್ತಾಗದೆ ಆಕಸ್ಮಿಕವಾಗಿ ಈ ಗುಂಡಿ ಮೇಲೆ ವಾಹನ ಹಾಯಿಸಿದರೆ ದೊಡ್ಡ ಅಪಘಾತ ಉಂಟಾಗುವ ಸಂಭವವಿದೆ.
ಇದೇ ಮಾರ್ಗವಾಗಿ ಬಸ್, ಲಾರಿ ಹಾಗೂ ಇತರ ವಾಹನ ಸವಾರರು ಉಮರಜ, ದಸೂರ, ಗೋವಿಂದಪುರ ಹಾಗೂ ಮಹಾರಾಷ್ಟ್ರದ ಅಳಗಿ, ತೇಲಗಾಂವ, ಭಂಡರಕವಡೆ, ಮಂದ್ರೋಪ ಮತ್ತು ಸೊಲ್ಲಾಪುರಕ್ಕೆ ತೆರಳುತ್ತಾರೆ. ಅಲ್ಲದೆ ಈ ರಸ್ತೆ ಮೂಲಕ ಭಾರವಾದ ಮಣ್ಣು ತುಂಬಿದ ಟಿಪ್ಪರ್‌ಗಳು ಸಂಚರಿಸುತ್ತವೆ. ಈ ಹಿಂದೆಯು ಕೂಡ ಇದೇ ಮಾರ್ಗದಲ್ಲಿ ಎರಡು ಬಾರಿ ಸೇತುವೆ ರಸ್ತೆಯಲ್ಲಿ ಗುಂಡಿ ಬಿದ್ದ ವೇಳೆ ವಿಜಯವಾಣಿಯಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುಂಡಿ ಮುಚ್ಚಿಸಿದ್ದರು. ಸದ್ಯ ಲೋಕೋಪಯೋಗಿ ಅಧಿಕಾರಿಗಳು ಕ್ರಮ ಕೈಗೊಂಡು ರಸ್ತೆ ಪಕ್ಕ ಗುಂಡಿ ಮುಚ್ಚಿಸಬೇಕು ಎಂದು ರೇವತಗಾಂವ ಹಾಗೂ ಉಮರಜ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಹಿಂದಿದ್ದ ಹಳೇ ರಸ್ತೆಯಲ್ಲಿ ನೀರು ಹರಿದು ಹೋಗಲು ಹಾಕಿದ್ದ ಸಿಡಿ ಪೈಪ್‌ಗಳನ್ನು ರಸ್ತೆಯಲ್ಲೇ ಮುಚ್ಚಲಾಗಿದೆ. ಅಂಥ ಜಾಗದಲ್ಲಿ ಭಾರವಾದ ವಾಹನಗಳು ಹಾಯ್ದು ಹೋದಾಗ ಈ ರೀತಿ ಗುಂಡಿಗಳು ಬೀಳುತ್ತವೆ. ಶೀಘ್ರ ರಸ್ತೆ ಪಕ್ಕ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು.
ಆರ್.ಆರ್. ಕತ್ತಿ, ಲೋಕೋಪಯೋಗಿ ಇಲಾಖೆ ಅಧಿಕಾರಿ, ಇಂಡಿ

Leave a Reply

Your email address will not be published. Required fields are marked *