ಅಖಿಲ ಭಾರತ ಸಹಕಾರ ಸಪ್ತಾಹ ನಿವೃತ್ತ ನೌಕರರಿಗೆ ಸನ್ಮಾನ

ಹಿರೇಕೆರೂರ: ಸಹಕಾರಿ ಸಂಘಗಳು ರೈತರ ಸರ್ವತೋಮುಖ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ ಎಂದು ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಕ್ರಿಬ್ಕೋ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರಿ ಇಲಾಖೆ ಕೆ.ಸಿ.ಸಿ ಬ್ಯಾಂಕ್, ಕೆ.ಎಂ.ಎಫ್, ಹಿರೇಕೆರೂರ ಹಾಗೂ ರಟ್ಟಿಹಳ್ಳಿ ತಾಲೂಕಿನ ಎಲ್ಲ ಸಹಕಾರಿ ಸಂಘಗಳ, ಬ್ಯಾಂಕ್ ಸೌಹಾರ್ದ ಸಂಘಗಳಿಂದ ಶನಿವಾರ ಜರುಗಿದ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಣಗಿಹಾಳ ಗ್ರಾಮದಲ್ಲಿ ಸಿದ್ದನಗೌಡ ಪಾಟೀಲ ಅವರು ಭೀಕರ ಬರಗಾಲ ಎದುರಿಸುತ್ತಿರುವ ಸಂದರ್ಭದಲ್ಲಿ ರೈತರ ಅನುಕೂಲಕ್ಕೆ ಸ್ಥಾಪಿಸಿದ ಸಹಕಾರ ಸಂಘದ ಪರಿಕಲ್ಪನೆ ಇಂದು ನಾಡಿನಲ್ಲಿ ಸಹಕಾರಿ ಕ್ಷೇತ್ರ ಹೆಮ್ಮರವಾಗಿ ಬೆಳೆದಿದೆ. ನಂತರದಲ್ಲಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಬೆಳೆಸಿದರು. ರೈತರ ಅಭಿವೃದ್ಧಿಗೆ ಪೂರಕವಾಗಿರುವ ಸಹಕಾರ ಸಂಘಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು ಎಂದರು.

ಸಹಕಾರಿ ಸಪ್ತಾಹದ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ರೈತರ ಸಮಗ್ರ ಅಭಿವೃದ್ಧಿಗೆ ಸಹಕಾರ ಸಂಘಗಳ ಸೇವೆ ಅಗತ್ಯವಾಗಿದೆ. ಜನರ ಕಲ್ಯಾಣ ಮತ್ತು ಅಭಿವೃದ್ಧಿ ಸಹಕಾರ ಸಂಘಗಳ ಧ್ಯೇಯವಾಗಿದೆ. ಸಾರ್ವಜನಿಕ, ಸಹಕಾರಿ ಮತ್ತು ಸಹಕಾರಿ ಸಹಭಾಗಿತ್ವಗಳು ಆರ್ಥಿಕ ಸಾಮಾಜಿಕ ಅಭಿವೃದ್ಧಿಗೆ ಅವಶ್ಯಕವಾಗಿದ್ದು, ಈ ಮೂರು ಕ್ಷೇತ್ರಗಳ ಬೆಳವಣಿಗೆ ಹೆಚ್ಚಾಗಬೇಕು. ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲರಿಗೆ ರಾಷ್ಟ್ರ ಮಟ್ಟದ ಸಹಕಾರಿ ರತ್ನಬಂಧು ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ಸಹಕಾರಿ ನೌಕರರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಹಕಾರ ಯೂನಿಯ್ನ ಅಧ್ಯಕ್ಷ ಕಲ್ಯಾಣ ಕುಮಾರ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ನವದೆಹಲಿ ಇಪೋ› ಕೋರ್ಡೆನ ಅಧ್ಯಕ್ಷ ಎಸ್.ಎಸ್. ಪಾಟೀಲ, ಕೆ.ಸಿ.ಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ಜಿ.ಪಂ. ಸದಸ್ಯ ಪ್ರಕಾಶ ಬನ್ನಿಕೋಡ, ಕೆ.ಎಂ.ಎಫ್ ನಿರ್ದೇಶಕರಾದ ಹನುಮಂತಗೌಡ ಭರಮಣ್ಣನವರ, ಬಸವರಾಜ ಅರಬಗೊಂಡ, ಎಪಿಎಂಸಿ ಅಧ್ಯಕ್ಷ ವಸಂತ ದ್ಯಾವಕ್ಕಳವರ, ಸಹಕಾರಿ ಸಂಘಗಳ ಉಪ ನಿಬಂಧಕ ಶಶಿಕಲಾ ಪಾಳೇದ, ಎಸ್.ಬಿ. ತಿಪ್ಪಣ್ಣನವರ, ಎಚ್.ಇ. ಮರಿಸ್ವಾಮಿ, ಎಂ.ವಿ. ಹೊಂಬರಡಿ, ಷಣ್ಮುಖಯ್ಯ ಮಳಿಮಠ, ಮಲ್ಲೇಶಪ್ಪ ಹಳಕಟ್ಟಿ, ಅರುಣಕುಮಾರ ಹಮ್ಮಗಿ, ಎಸ್.ಬಿ. ಗೂಳಪ್ಪನವರ, ಮಹೇಶ ಗುಬ್ಬಿ, ಮಹೇಂದ್ರ ಬಡಳ್ಳಿ, ಗೋವಿಂದಪ್ಪ ಗುತ್ತಲ್, ಈ.ಎಸ್. ಬಣಕಾರ, ಎಸ್. ವೀರಭದ್ರಯ್ಯ, ಎಸ್.ಬಿ. ಸಣ್ಣಮನಿ, ಎಂ.ಎಸ್. ಕೋರಿಗೌಡ್ರ, ಎಸ್.ಎಂ. ರೋತಿ, ಯು.ಎಸ್. ಕಳಗೊಂಡದ ಇತರರು ಇದ್ದರು.

ತಾಲೂಕಿನಲ್ಲಿ ಸಹಕಾರಿ ಸಂಘಗಳ ಬೆಳವಣಿಗೆ ಉತ್ತಮವಾಗಿದೆ. ಸಹಕಾರ ರಂಗದ ಆತ್ಮಾವಲೋಕನ ಮತ್ತು ವಿಚಾರ ಸಂಕಿರಣಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದೇ ಸಹಕಾರ ಸಪ್ತಾಹದ ಉದ್ದೇಶವಾಗಿದೆ.

| ಯು.ಬಿ. ಬಣಕಾರ, ಮಾಜಿ ಶಾಸಕ