ಅದೃಷ್ಟದ ಆಟ ಆಡಿದ ಲಾಟರಿ, 1,2… ಮತಗಳು!

ಈ ಬಾರಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಪತಿ-ಪತ್ನಿಯರು, ಸಹೋದರ-ಸಹೋದರಿಯರು, ಅಪ್ಪ-ಮಗ, ತಾಯಿ-ಮಗ ಗೆಲುವು ಕಂಡಿದ್ದಾರೆ. ಇನ್ನೇನು ಸೋತೇ ಬಿಟ್ಟೆ ಎಂದು ಕುಸಿದು ಕುಳಿತಿದ್ದವರಿಗೆ ಒಂದು, ಎರಡು, ಮೂರು… ಹೀಗೆ ಬೆರಳೆಣಿಕೆಯ ಮತಗಳು ಗೆಲುವಿನ ‘ಆಸರೆ’ಯಾಗಿವೆ. ಇಂತಹ ಹಲವು ಕೌತುಕಗಳ ಝುಲಕ್ ಇಲ್ಲಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣ ಪಂಚಾಯಿತಿಯಲ್ಲಿ ಪಕ್ಷೇತರ ಅಭ್ಯರ್ಥಿ ಶೋಭಾ ಸಿದ್ದೋಜಿ ಗಾವಡೆ, ಸದಲಗಾ ಪುರಸಭೆಯಲ್ಲಿ ಪಕ್ಷೇತರ ಅಭ್ಯರ್ಥಿ ರಾಜಶ್ರೀ ಅನೂರೆ 1 ಮತದ ಅಂತರದಲ್ಲಿ ಗೆದ್ದಿದ್ದಾರೆ. ಸವದತ್ತಿ ಪುರಸಭೆಗೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವನಗೌಡ ಪಾಟೀಲ, ಚಿಕ್ಕೋಡಿ ಪುರಸಭೆ ಪಕ್ಷೇತರ ಅಭ್ಯರ್ಥಿ ಸದಾಶಿವ ಮೇದಾರ್ 2 ಮತಗಳಲ್ಲಿ ಗೆದ್ದಿದ್ದಾರೆ. ಸದಲಗಾ ಪುರಸಭೆಗೆ ಬಿಜೆಪಿ ಅಭ್ಯರ್ಥಿ ಸುಜಾತಾ ಕುಂಬಾರ 6 ಮತ, ಪಕ್ಷೇತರ ಅಭ್ಯರ್ಥಿ ಉದಯ ಬದ್ನಿಕಾಯಿ 8 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಖಾನಾಪುರದಲ್ಲಿ ಪಕ್ಷೇತರ ಅಭ್ಯರ್ಥಿ ಸಹೇರಾ ಅಬ್ದುಲ್ ಖಾದರ ಸನದಿ 10 ಮತಗಳ ಅಂತರದಿಂದ ಗೆದ್ದಿದ್ದಾರೆ. ರಾಮದುರ್ಗ ವಾರ್ಡ್ ನಂ.11ರ ಬಿಜೆಪಿಯ ಅಭ್ಯರ್ಥಿ ರಾಣಿ ಸಂಜಯ ಬೋಕರೆ 7 ಮತ ಹೆಚ್ಚು ಪಡೆದು ಗೆದ್ದಿದ್ದಾರೆ. ಮೂಡಲಗಿಯಲ್ಲಿ ಪಕ್ಷೇತರ ಅಭ್ಯರ್ಥಿ ಹುಸೇನ್ ಸಾಬ ಶೇಖ 8 ಮತ, ಕುಡಚಿ ಪುರಸಭೆಯಲ್ಲಿ ಗುಲನಾಜ್ ಅಸೀಫ್ ಹುಸೇನ್ ಚಮನೇವಾಲೆ 9 ಮತ ಹೆಚ್ಚು ಪಡೆದು ಗೆದ್ದಿದ್ದಾರೆ. ಹುಕ್ಕೇರಿ ಪುರಸಭೆಗೆ ಜ್ಯೋತಿ ಬಡಿಗೇರ ಕೇವಲ 5 ಮತ, ಪಾರವ್ವ ಸಿದ್ದಪ್ಪ ಲಟ್ಟಿ ಕೇವಲ 9 ಮತಗಳ ಅಂತರದಿಂದ ಗೆದ್ದಿದ್ದಾರೆ. ರಾಯಚೂರು ಜಿಲ್ಲೆಯ ಮುದಗಲ್ ಪುರಸಭೆಯ ವಾರ್ಡ್ ಸಂಖ್ಯೆ 1ರಲ್ಲಿ ತಸ್ಲಿಮಾ ಹೂಮದ್ ಕೇವಲ 1 ಮತ, ಮಾನ್ವಿ ಪುರಸಭೆ ವಾರ್ಡ್ ಸಂಖ್ಯೆ 11ರಲ್ಲಿ ಸುಫಿಯಾ ಬೇಗಂ 3 ಮತ ಹಾಗೂ ವಾರ್ಡ್ ಸಂಖ್ಯೆ 2ರಲ್ಲಿ ಬಸವರಾಜ ಭಜಂತ್ರಿ 4 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

‘ಕೈ’ಗೆ ಪತಿ-ಪತ್ನಿ ಆಸರೆ!

19 ವಾರ್ಡ್​ಗಳ ಗುಬ್ಬಿ ಪಟ್ಟಣ ಪಂಚಾಯಿತಿಯಲ್ಲಿ ಜೆಡಿಎಸ್ 10 , ಬಿಜೆಪಿ 6 , ಕಾಂಗ್ರೆಸ್ 2, 1 ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದು. ಇಲ್ಲಿ ಕಾಂಗ್ರೆಸ್ ಮಾನ ಉಳಿಸಿರುವುದು ಪತಿ- ಪತ್ನಿಯರು. 6ನೇ ವಾರ್ಡ್​ನಿಂದ ಸ್ಪರ್ಧಿಸಿದ್ದ ಮಹಮ್ಮದ್ ಸಾಧಿಕ್ ಸತತ 6ನೇ ಬಾರಿ ಗೆಲುವು ಸಾಧಿಸಿದರೆ, ಪತ್ನಿ ಆಯಿಷಾ 7ನೇ ವಾರ್ಡ್​ನಿಂದ ಸತತ 3ನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷೆಗೆ ಸೋಲು: ವಾರ್ಡ್ ನಂ.3ರಲ್ಲಿ ಸ್ಪರ್ಧಿಸಿದ್ದ ಬಾಗಲಕೋಟೆ ಬಿಜೆಪಿ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಭಾಗ್ಯಾ ಉದ್ನೂರ ಅವರನ್ನು ಜೆಡಿಎಸ್ ಪಕ್ಷದ ಜ್ಯೋತಿ ಗೋವನಕೊಪ್ಪ ಸೋಲಿಸಿದ್ದಾರೆ.

ಪತಿ-ಪತ್ನಿ, ಅಪ್ಪ/ಅಮ್ಮ-ಮಗನ ದರ್ಬಾರ್

  • ಬೆಳಗಾವಿಯ ಖಾನಾಪುರ ಪಟ್ಟಣ ಪಂಚಾಯಿತಿಯಲ್ಲಿ ಪತಿ-ಪತ್ನಿಯರಾದ ಸಿದ್ಧೋಜಿ ಗಾವಡೆ ಹಾಗೂ ಶೋಭಾ ಗಾವಡೆ ಸತತ ಮೂರನೇ ಬಾರಿಗೆ ಗೆದ್ದಿದ್ದಾರೆ.
  • ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪುರಸಭೆ ಚುನಾವಣೆಯಲ್ಲಿ ಪತಿ, ಪತ್ನಿ ಮತ್ತು ದೊಡ್ಡಪ್ಪ, ಮಗ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸವಿತಾ ಸಂಜಯ ನಷ್ಟಿ, ಸಂಜಯ ದುಂಡಪ್ಪ ನಷ್ಟಿ ಗೆದ್ದಿದ್ದರೆ, ಕಾಂಗ್ರೆಸ್​ನಿಂದ ವಾರ್ಡ್ 2ರಲ್ಲಿ ದೊಡ್ಡಪ್ಪ ಜಯಪ್ರಕಾಶ ನಾಗಪ್ಪಾ ಕರಜಗಿ, ಪಕ್ಷೇತರ ಅಭ್ಯರ್ಥಿಯಾಗಿ ಮಗ ಅಜಿತ ಅಶೋಕ ಕರಜಗಿ ಜಯ ಸಾಧಿಸಿದ್ದಾರೆ.
  • ಬೆಳಗಾವಿಯ ಖಾನಾಪುರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ರಫೀಕ್ ಖಾನಾಪುರೆ ಹಾಗೂ ಅವರ ಮಗ ಮಜಾವರ ರಫೀಕ್ ಖಾನಾಪುರೆ ಜಯ ಸಾಧಿಸಿದ್ದಾರೆ.
  • ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪುರಸಭೆಗೆ ನೂರಜಹಾನ್ ಮುರ್ತಜಾ ಜಮಾದಾರ ಮತ್ತು ಮಗ ಸಾಬೀರ ಮುರ್ತಜಾ ಜಮಾದಾರ ಆಯ್ಕೆಯಾಗಿದ್ದಾರೆ.
  • ಬಾಗಲಕೋಟೆಯ ಗುಳೇದಗುಡ್ಡ ಪುರಸಭೆ ವಾರ್ಡ್ ನಂ.21 ರಲ್ಲಿ ರಾಜಶೇಖರ ಹೆಬ್ಬಳ್ಳಿ ಹಾಗೂ 22ರಲ್ಲಿ ರಾಜಶೇಖರ ಅವರ ತಾಯಿ ರಾಜವ್ವ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ.
  • ದಾವಣಗೆರೆಯ ಹೊನ್ನಾಳಿ ಪಪಂನ 16ನೇ ವಾರ್ಡ್​ನ ಪಕ್ಷೇತರ ಅಭ್ಯರ್ಥಿ ಧರ್ಮಪ್ಪ ಗೆಲುವು ಸಾಧಿಸಿದ್ದು, ಅವರ ಪತ್ನಿ, ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಶ್ರೀದೇವಿ ಧರ್ಮಪ್ಪ 3ನೇ ವಾರ್ಡ್​ನಲ್ಲಿ ಪರಾಜಿತರಾಗಿದ್ದಾರೆ.
  • ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಗೊಪ್ಪೆ ಮಂಜುನಾಥ್ 11ನೇ ವಾರ್ಡಿನಿಂದ ಅವರ ಪತ್ನಿ ಜಯಂತಿ ಗೊಪ್ಪೇ 14ನೇ ವಾರ್ಡ್​ನಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಅದೇ ರೀತಿ 16ನೇ ವಾರ್ಡ್​ನಿಂದ ವೆಂಕಟೇಶಪ್ಪ ಹಾಗೂ 19 ನೇ ವಾರ್ಡ್​ನಿಂದ ಅವರ ಪತ್ನಿ ತಿಪ್ಪಮ್ಮ ಇಬ್ಬರೂ ಬಿಜೆಪಿಯಿಂದ ಗೆದ್ದಿದ್ದಾರೆ.
  • ಚಿತ್ರದುರ್ಗದ 34ನೇ ವಾರ್ಡ್​ನಲ್ಲಿ ಚಿಕ್ಕಪ್ಪ ಶ್ರೀನಿವಾಸ್ ಹಾಗೂ 35ನೇ ವಾರ್ಡ್​ನಲ್ಲಿ ಮಗ ಭಾಸ್ಕರ್ ಬಿಜೆಪಿಯಿಂದ ಗೆದ್ದಿದ್ದಾರೆ. 3ನೇ ವಾರ್ಡ್​ನಲ್ಲಿ ಚಿಕ್ಕಮ್ಮ ಗೀತಾ ವೆಂಕಟೇಶ್ ಕಾಂಗ್ರೆಸ್​ನಿಂದ, 28ನೇ ವಾರ್ಡ್​ನಲ್ಲಿ ಮಗಳು ಶ್ವೇತಾ ವೀರೇಶ್ ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ.

 

ಚೀಟಿಯಲ್ಲಿ ಒಲಿದ ಅದೃಷ್ಟ

ಕೊಪ್ಪಳ ನಗರಸಭೆಯ 5ನೇ ವಾರ್ಡ್​ನಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಸಮ ಮತ ಪಡೆದಿದ್ದರಿಂದ ಚೀಟಿ ಎತ್ತುವ ಪರೀಕ್ಷೆಯಲ್ಲಿ ಬಿಜೆಪಿ ಅಭ್ಯರ್ಥಿ ವಿದ್ಯಾ ಸುನಿಲ್ ಅವರಿಗೆ ಅದೃಷ್ಟ ಒಲಿದಿದೆ. ಯಲಬುರ್ಗಾ ಪಪಂನ 4ನೇ ವಾರ್ಡ್​ನ ಪಕ್ಷೇತರ ಅಭ್ಯರ್ಥಿ ಹನುಮಂತ ಭಜಂತ್ರಿ 7 ಮತ, 5ನೇ ವಾರ್ಡ್​ನ ರೇವಣಪ್ಪ ಕೇವಲ 5 ಮತ, ಕುಷ್ಟಗಿ ಪುರಸಭೆಯ 7ನೇ ವಾರ್ಡ್​ನ ಕಾಂಗ್ರೆಸ್ ಅಭ್ಯರ್ಥಿ ಇಮಾಮ್ೕ 3 ಮತಗಳ ಅಂತರದಿಂದ ಗೆದ್ದಿದ್ದಾರೆ.

ಹ್ಯಾಟ್ರಿಕ್ ವೀರರು

  • ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಆರ್. ತಿಪ್ಪೇಸ್ವಾಮಿ ಹ್ಯಾಟ್ರಿಕ್ ಗೆಲುವು ಪಡೆದಿದ್ದಾರೆ.
  • ಚನ್ನಗಿರಿ ಪುರಸಭೆಯ 14ನೇ ವಾರ್ಡ್​ನಿಂದ ಕಾಂಗ್ರೆಸ್​ನ ಅಸ್ಲಾಂ ಬೇಗ್ ಸತತ ಮೂರನೇ ಬಾರಿಗೆ ಜಯಶೀಲರಾಗಿದ್ದಾರೆ. ಹಿಂದೆ ಪಟ್ಟಣ ಪಂಚಾಯಿತಿ ಇದ್ದಾಗಲೂ ಇವರು 2 ಬಾರಿ ಗೆದ್ದಿದ್ದರು.

ಅಣ್ಣ- ತಂಗಿ ಗೆಲುವು: ಜಗಳೂರಿನ ಜೆಸಿಆರ್ ಬಡಾವಣೆ-1 ಪ.ಜಾತಿ ಮಹಿಳೆ ಮೀಸಲು ಕ್ಷೇತ್ರದಿಂದ ನಿರ್ಮಲ ಕುಮಾರಿ ಹಾಗೂ ಇಂದಿರಾ ಬಡಾವಣೆ ಪಶ್ಚಿಮಕ್ಕೆ ಸಾಮಾನ್ಯ ಮೀಸಲು ಕ್ಷೇತ್ರದಿಂದ ಸಹೋದರ ದೇವರಾಜ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದಾರೆ.

ಇದ್ದಿದ್ದು 57 ಮತ ಮಾತ್ರ!

ಬಳ್ಳಾರಿ ಜಿಲ್ಲೆಯ ಕುಡತಿನಿ ಪಪಂನ 5 ಹಾಗೂ 17ನೇ ವಾರ್ಡ್​ನಲ್ಲಿ ಬಿಜೆಪಿ ಅಭ್ಯರ್ಥಿಗಳು ಕ್ರಮವಾಗಿ ಒಂದು ಮತ್ತು ಏಳು ಮತಗಳ ಅಂತರದಿಂದ ಗೆದ್ದಿದ್ದಾರೆ. 13ನೇ ವಾರ್ಡ್​ನಲ್ಲಿ ಕೇವಲ 57 ಮತಗಳಿದ್ದವು. ಈ ಪೈಕಿ ಪಕ್ಷೇತರ ಅಭ್ಯರ್ಥಿ ಕೃಷ್ಟಪ್ಪ ಕುಟುಂಬ 10 ಮತಗಳನ್ನು ಹೊಂದಿದ್ದರಿಂದ ಫಲಿತಾಂಶ ಕುತೂಹಲ ಮೂಡಿಸಿತ್ತು. ಕಾಂಗ್ರೆಸ್ ಅಭ್ಯರ್ಥಿ 34 ಮತ ಪಡೆದು 15 ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಎಸ್ಸಾರ್ ಕಾಂಗ್ರೆಸ್ ಸಂಸ್ಥಾಪಕ ಬಿ.ಶ್ರೀರಾಮುಲು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದರಿಂದ ಕೊಟ್ಟೂರಿನಲ್ಲಿ ಕಮಲ ಪಾಳಯದ ಬಲ ಹೆಚ್ಚಿದೆ.

2 ಬಾರಿ ಗೆದ್ದವಗೆ ಕೈಕೊಟ್ಟ ಅದೃಷ್ಟ

ಶಿವಮೊಗ್ಗ ಮಹಾನಗರಪಾಲಿಕೆಯ ವಾರ್ಡ್ ನಂ. 15ರ (ಹರಿಗೆ) ಜೆಡಿಎಸ್ ಅಭ್ಯರ್ಥಿ ಆರ್.ಎಸ್. ಸತ್ಯನಾರಾಯಣ ಅವರಿಗೆ ಲಾಟರಿಯಲ್ಲಿ ವಿಜಯಲಕ್ಷ್ಮಿ ಒಲಿದಿದ್ದಾಳೆ. ಕಾಂಗ್ರೆಸ್ ಅಭ್ಯರ್ಥಿ ಎಸ್. ರಾಜಶೇಖರ ಮತ್ತು ಜೆಡಿಎಸ್ ಅಭ್ಯರ್ಥಿ ಆರ್.ಎಸ್. ಸತ್ಯನಾರಾಯಣ ಅವರಿಗೆ ತಲಾ 1,708 ಮತಗಳು ಲಭಿಸಿದ್ದವು. ಇಬ್ಬರೂ ಅಭ್ಯರ್ಥಿಗಳ ಕೋರಿಕೆ ಮೇರೆಗೆ ಮರು ಎಣಿಕೆ ಮಾಡಿದಾಗ ಯಾವುದೇ ವ್ಯತ್ಯಾಸವಾಗಲಿಲ್ಲ. ಈ ಹಂತದಲ್ಲಿ ನಿಯಮಗಳ ಪ್ರಕಾರ ಚೀಟಿ ಎತ್ತುವ ಮೂಲಕ ವಿಜಯ ಅಭ್ಯರ್ಥಿ ಹೆಸರು ಘೊಷಣೆ ಮಾಡಲಾಯಿತು. ಬಿಜೆಪಿ ಅಭ್ಯರ್ಥಿ ಸುದರ್ಶನ್​ಗೆ 1,119 ಮತಗಳು ಲಭಿಸಿವೆ. ರಾಜಶೇಖರ್ ಸತತ ಎರಡು ಚುನಾವಣೆಗಳಲ್ಲಿ ಜಯಗಳಿಸಿದ್ದರು.

ಬೀಗತಿಯರ ಗೆಲುವು

ಚಿಕ್ಕನಾಯಕನಹಳ್ಳಿ ಪುರಸಭೆ ವಾರ್ಡ್ 10ರಲ್ಲಿ ಪುರಸಭಾ ಮಾಜಿ ಸದಸ್ಯ ಗಾರೆ ಬೀರಪ್ಪ ಪತ್ನಿ ಎಚ್.ಎಂ.ರಾಜಮ್ಮ ಆಯ್ಕೆಯಾದರೆ, ವಾರ್ಡ್ 13ರಲ್ಲಿ ಇವರ ಬೀಗರಾದ ಪುರಸಭಾ ಮಾಜಿ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ ಪತ್ನಿ ಜಯಮ್ಮ ಆಯ್ಕೆಯಾಗಿದ್ದಾರೆ.

ಲಾಟರಿಯಲ್ಲಿ ಒಲಿದ ‘ರತ್ನ’

ಮದ್ದೂರು: 23 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ ಪಟ್ಟಣದ 8ನೇ ವಾರ್ಡ್​ನಲ್ಲಿ ಜೆಡಿಎಸ್ ಅಭ್ಯರ್ಥಿ ಡಿ.ಲತಾ ವೆಂಕಟೇಶ್ ಹಾಗೂ ಪಕ್ಷೇತರ ಅಭ್ಯರ್ಥಿ ರತ್ನ ತಿಮ್ಮಯ್ಯ ಕ್ರಮವಾಗಿ 286 ಮತಗಳು ಬಂದ ಹಿನ್ನೆಲೆಯಲ್ಲಿ ತಾ.ಪಂ. ಪ್ರಭಾರ ಇಒ ಚೇತನ್​ಕುಮಾರ್ ಕಣ್ಣಿಗೆ ಬಟ್ಟೆ ಕಟ್ಟಿ ಚೀಟಿ ಎತ್ತಿಸಲಾಯಿತು. ಇದರಲ್ಲಿ ರತ್ನ ತಿಮ್ಮಯ್ಯ ಹೆಸರು ಬಂದು ವಿಜಯಿಯಾದರು.