ದಕ್ಷಿಣ ದಾಟದ ದಳ, ಉತ್ತರ ಬಿಡದ ಕಮಲ, ಕುಗ್ಗದ ಕಾಂಗ್ರೆಸ್ ಬಲ

ಬಿಜೆಪಿ ತೆಕ್ಕೆಗೆ ಶಿವಮೊಗ್ಗ

ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸರಳ ಬಹುಮತ ಗಳಿಸುವ ಮೂಲಕ ಸ್ವಂತ ಶಕ್ತಿ ಮೇಲೆ ಅಧಿಕಾರ ಹಿಡಿಯಲಿದೆ. ಕಳೆದ ಬಾರಿ ಬಿ.ಎಸ್.ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದ್ದರಿಂದ ತೀವ್ರ ಹಿನ್ನಡೆ ಅನುಭವಿಸಿದ್ದ ಬಿಜೆಪಿಗೆ ಈಗ ಅವರ ಕಾರ್ಯತಂತ್ರ ಫಲನೀಡಿದೆ. 35 ವಾರ್ಡ್​ಗಳ ಪೈಕಿ ಬಿಜೆಪಿ 20, ಕಾಂಗ್ರೆಸ್ 7, ಜೆಡಿಎಸ್ 2 ಕಡೆ ಗೆದ್ದಿದೆ. 1 ವಾರ್ಡ್​ನಲ್ಲಿ ಎಸ್​ಡಿಪಿಐ ಮತ್ತು ಐದು ವಾರ್ಡಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಐವರು ಪಕ್ಷೇತರರಲ್ಲಿ ಮೂವರು ಬಿಜೆಪಿ ಬಂಡಾಯ ಹಾಗೂ ಒಬ್ಬ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಜಕಾರಣವೇ ಬೇರೆ

ಬೆಂಗಳೂರು: ಬೆಳಗಾವಿ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಜಾರಕಿಹೊಳಿ ಸಹೋದರರು ಪಕ್ಷೇತರ ಶೈಲಿಯಲ್ಲಿಯೇ ಎದು ರಿಸುತ್ತಾರೆ. ಆ ಜಿಲ್ಲೆಯ ರಾಜಕೀಯವೇ ಬೇರೆ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಸುದ್ದಿ ಗಾರರಿಗೆ ತಿಳಿಸಿದರು. ಜಾರಕಿಹೊಳಿ ಸಹೋದರರು ಬಿಜೆಪಿಗೆ ಹೋಗುವುದಿಲ್ಲ. ಒಬ್ಬರು ಸಚಿವರು, ಮತ್ತೊಬ್ಬರು ಶಾಸಕರಾಗಿದ್ದಾರೆ. ಬಿಜೆಪಿ ನಾಯಕರು ಶಾಸಕರ ಪಟ್ಟಿ ಹಿಡಿದುಕೊಂಡು ಬಿಜೆಪಿಗೆ ಸೇರುತ್ತಾರೆಂದು ಓಡಾಡುತ್ತಿದ್ದಾರೆ. ಅವರಿಗೆ ನಿರಾಸೆ ಕಾದಿದೆ ಎಂದರು.

ಜೆಡಿಎಸ್ ಕೋಟೆ ಮತ್ತಷ್ಟು ಭದ್ರ

ಮಂಡ್ಯ: ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಮತ್ತೆ ಪಾರುಪತ್ಯೆ ಮೆರೆದಿದೆ. ಮಂಡ್ಯ ನಗರಸಭೆಯಲ್ಲಿ 18 ಸ್ಥಾನ ಗೆದ್ದು ಅಧಿಕಾರ ಹಿಡಿಯುವುದು ಖಚಿತವಾಗಿದ್ದರೆ, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಪಾಂಡವಪುರಲ್ಲಿ ತಾವೇ ಕಿಂಗ್ ಎಂದು ನಿರೂಪಿಸಿದ್ದಾರೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲುಕಂಡಿದ್ದ ಚಲುವರಾಯಸ್ವಾಮಿಗೆ ನಾಗಮಂಗಲ ಹಾಗೂ ಬೆಳ್ಳೂರು ಮತದಾರರು ಸಿಹಿ ನೀಡಿದ್ದಾರೆ. ಮದ್ದೂರು ಪುರಸಭೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣರಿಗೆ ಒಲಿದಿದೆಯಾದರೂ, ಹಿಂದೆ ಗಳಿಸಿದ್ದಷ್ಟೇ ಸ್ಥಾನಗಳಿಗೆ (12) ತೃಪ್ತಿ ಪಟ್ಟಿದೆ.

ಮಹಿಳೆಗೆ ಚಾಕು ಇರಿದ ಪರಾಜಿತನ ಮೈದುನ

ಕೊಪ್ಪಳ: ನಗರದ 19ನೇ ವಾರ್ಡ್​ನಲ್ಲಿ ಜೆಡಿಎಸ್ ಅಭ್ಯರ್ಥಿ ಆಯೇಶಾ ರುಬಿನಾ ವಿಜಯ ಸಾಧಿಸಿದ್ದು, ಸಂಭ್ರಮಾಚರಣೆ ವೇಳೆ ಕಾಂಗ್ರೆಸ್​ನ ಪರಾಜಿತ ಅಭ್ಯರ್ಥಿ ಸೈಯದ್ ಸಾಜಿಯಾ ಹುಸೇನ್ ಮೈದುನ ಸೈಯದ್ ನಿಜಾಮುದ್ದೀನ್ ಎಂಬಾತ ರೆಹಮತ್ ಬೀ (60) ಎಂಬ ಮಹಿಳೆಗೆ ಚಾಕುವಿನಿಂದ ಇರಿದಿದ್ದಾನೆ. ಆಕೆಯನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹಾಜಿ ಹುಸೇನ್ ಎಂಬಾತನನ್ನು ಬಂಧಿಸಲಾಗಿದೆ. ನಾಲ್ವರ ಪತ್ತೆಗೆ ಜಾಲ ಬೀಸಲಾಗಿದೆ.