ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಖಾಸಗಿ ವಿಶ್ವವಿದ್ಯಾಲಯಗಳು ನಡೆಸುತ್ತಿದ್ದ ಪ್ರವೇಶ ಪರೀಕ್ಷೆಗೆ ರಾಜ್ಯ ಸರ್ಕಾರವು ಕಡಿವಾಣ ಹಾಕಿದೆ. ಈಗಾಗಲೇ ವಿವಿಧ ಪ್ರಾಧಿಕಾರಗಳು ನಡೆಸುತ್ತಿರುವ ಪ್ರವೇಶ ಪರೀಕ್ಷೆಗಳಲ್ಲಿಯೇ ಒಂದನ್ನು ಆಯ್ಕೆ ಮಾಡಿಕೊಂಡು ಪ್ರವೇಶ ಕಲ್ಪಿಸುವಂತೆ ಸೂಚನೆ ನೀಡಿದ್ದು, ಇದಕ್ಕೆ ರಾಜ್ಯದ 17 ವಿಶ್ವವಿದ್ಯಾಲಯಗಳು ಒಪ್ಪಿಗೆ ಸೂಚಿಸಿವೆ.
ಹಿಂದಿನ ಸರ್ಕಾರದ ಅವಧಿಯಲ್ಲಿಯೂ ಏಕರೂಪದ ಪ್ರವೇಶ ಪ್ರಕ್ರಿಯೆ ನಡೆಸಲು ಸಾಕಷ್ಟು ಪ್ರಯತ್ನಿಸಲಾಗಿದ್ದರೂ ಒಮ್ಮತ ನಿರ್ಧಾರವಾಗಿರಲಿಲ್ಲ. ಆದರೆ, ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಗುರುವಾರ ನಡೆದ ಸಭೆಯಲ್ಲಿ ಖಾಸಗಿ ವಿವಿಗಳಲ್ಲಿ ಏಕರೂಪತೆ ತರಲು ಒಪ್ಪಿಗೆ ನೀಡಿವೆ.
ಸಭೆಯ ಬಳಿಕ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಒಂದೇ ಕೋರ್ಸ್ನ ಒಂದೇ ಸೀಟಿಗೆ ಹಲವು ಪ್ರವೇಶ ಪರೀಕ್ಷೆ ಬರೆಯುವುದರಿಂದ ಮಕ್ಕಳಿಗೆ ಹೊರೆಯಾಗುತ್ತಿದೆ. ಅಲ್ಲದೆ, ಪ್ರವೇಶಾತಿಯಲ್ಲಿರುವ ಹಲವು ಅನುಮಾನಗಳನ್ನು ತೊಲಗಿಸಿ ಪಾರದರ್ಶಕತೆ ತರುವ ಉದ್ದೇಶದಿಂದ ಒಂದೇ ಪ್ರವೇಶ ಪರೀಕ್ಷೆ ಅಡಿ ಸೀಟುಗಳನ್ನು ಭರ್ತಿ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಯಾವೆಲ್ಲ ಪರೀಕ್ಷೆಗಳು ಆಯ್ಕೆ: 2024-25ನೇ ಸಾಲಿನ ಪ್ರವೇಶ ಪ್ರಕ್ರಿಯೆ ಈಗಾಗಲೇ ಮುಗಿಯುವ ಹಂತಕ್ಕೆ ಬಂದಿದೆ. ಈ ಕಾರಣದಿಂದ 2025-26ಸಾಲಿನಿಂದ ಹೊಸ ನಿಯಮ ಜಾರಿಯಾಗಲಿದೆ. ಕೆಇಎ ನಡೆಸುವ ಸಿಇಟಿ, ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ನಡೆಸುವ ಕಾಮೆಡ್-ಕೆ, ಎನ್ಟಿಎ ನಡೆಸುವ ಜೆಇಇ ಹಾಗೂ ಐಐಎಸ್ಸಿ, ಐಐಟಿ ನಡೆಸುವ ಗೇಟ್ ಪರೀಕ್ಷೆಗಳಲ್ಲಿ ಒಂದನ್ನು ಖಾಸಗಿ ವಿಶ್ವವಿದ್ಯಾಲಯಗಳು ಆಯ್ಕೆ ಮಾಡಿಕೊಳ್ಳಬೇಕು. ಪ್ರವೇಶಕ್ಕೂ ಮೊದಲು ಯಾವುದನ್ನು ಆಯ್ಕೆ ಮಾಡಿಕೊಂಡಿದ್ದೇವೆಂದು ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದು ಹೇಳಿದರು.
ರಾಜ್ಯದಲ್ಲಿರುವ 30 ಖಾಸಗಿ ವಿವಿಗಳಲ್ಲಿ 17 ವಿವಿಗಳು ಗುರುವಾರದ ಸಭೆಯಲ್ಲಿ ಒಪ್ಪಿಗೆ ನೀಡಿವೆ. ಉಳಿದ ವಿವಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಲಿವೆ. ಇದಕ್ಕಾಗಿ ಖಾಸಗಿ ವಿವಿಗಳು ತಮ್ಮದೇ ಆದ ಸಂಘಟನೆಯನ್ನು ಮಾಡಿಕೊಂಡು ನಿರ್ಧರಿಸಲಿವೆ ಎಂದು ತಿಳಿಸಿದರು. ಸದ್ಯ ಶೇ.40 ಸೀಟುಗಳು ಕೆಇಎ ಮೂಲಕ ಹಂಚಿಕೆಯಾಗಿದೆ. ಉಳಿದ ಸೀಟುಗಳನ್ನು ಖಾಸಗಿ ಕಾಲೇಜುಗಳು ತಮ್ಮದೇ ಪ್ರವೇಶ ಪರೀಕ್ಷೆಗಳ ಮೂಲಕ ತುಂಬಿಕೊಳ್ಳುತ್ತಿವೆ. ಮೊದಲ ಹಂತದಲ್ಲಿ ವೃತ್ತಿಪರ ಕೋರ್ಸ್ಗಳಿಗೆ ಏಕರೂಪತೆ ತರಲಾಗುತ್ತದೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಕೋರ್ಸ್ಗಳಿಗೂ ಇದೇ ನಿಯಮ ಜಾರಿಗೊಳಿಸುವ ಸಂಬಂಧ ರ್ಚಚಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.
ಸಂಯೋಜನೆಗೂ ವೇಳಾಪಟ್ಟಿ: ರಾಜ್ಯದ ಎಲ್ಲ ವಿವಿಗಳ ಪ್ರವೇಶಾತಿ, ಪರೀಕ್ಷಾ ವೇಳಾಪಟ್ಟಿ, ಫಲಿತಾಂಶ ಪ್ರಕಟಣೆ ಹಾಗೂ ಸಂಯೋಜನೆಗೂ ವೇಳಾಪಟ್ಟಿ ಪ್ರಕಟಿಸಿದೆ. 2025-26ನೇ ಸಾಲಿನ ವೇಳಾಪಟ್ಟಿಯನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಗುರುವಾರ ಪ್ರಕಟಿಸಿದರು. ಕಾಲೇಜುಗಳು ಹೊಸ ಕೋರ್ಸ್ಗಳ ಸಂಯೋಜನೆ ಹಾಗೂ ತಮ್ಮಲ್ಲಿ ಲಭ್ಯವಿರುವ ಸೀಟುಗಳ (ಇನ್ ಟೇಕ್) ಮಾಹಿತಿ ಪ್ರಕಟಿಸಲು ವೇಳಾಪಟ್ಟಿ ಪ್ರಕಟಿಸಿದೆ. ಪ್ರತಿವರ್ಷ ಮಾರ್ಚ್ ವೇಳೆಗೆ ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದು ಸಚಿವರು ತಿಳಿಸಿದರು.
ಶುಲ್ಕ ನಿಯಂತ್ರಣಕ್ಕೆ ಸಮಿತಿ: ಖಾಸಗಿ ಕಾಲೇಜುಗಳ ಶುಲ್ಕ ನಿಯಂತ್ರಣ ಮತ್ತು ನಿಗದಿ ಮಾಡುವುದಕ್ಕೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ಮಾಡಲಾಗುತ್ತದೆ. ಆ ಸಮಿತಿಯು ಶುಲ್ಕವನ್ನು ನಿಗದಿ ಮಾಡುವ ಜತೆಗೆ ನಿಯಂತ್ರಣ ಮಾಡುವ ಕೆಲಸ ಮಾಡಲಿದೆ. ಪ್ರಸ್ತುತ ರಾಜ್ಯದಲ್ಲಿನ ಖಾಸಗಿ ಕಾಲೇಜುಗಳು ಹೆಚ್ಚಿನ ಶುಲ್ಕ ಕೇಳಿದರೆ ಅಂತಹ ಪ್ರಕರಣಗಳನ್ನು ನಿಯಂತ್ರಿಸಲು ಕೆಇಎ ನಲ್ಲಿ ಈಗಾಗಲೇ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಇದೇ ಸಮಿತಿಗೆ ಜವಾಬ್ದಾರಿಯನ್ನು ವಹಿಸುತ್ತಾರೆಯೋ ಇಲ್ಲ ಹೊಸ ಸಮಿತಿ ರಚನೆ ಮಾಡುತ್ತಾರೆಯೋ ಎಂಬುದು ಇನ್ನೂ ಖಚಿತವಾಗಿಲ್ಲ.
Breaking News | ತಿರುಪತಿ ಲಡ್ಡುಗೆ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿದ್ದು ಕನ್ಫರ್ಮ್! ಸಾಕ್ಷ್ಯ ಮುಂದಿಟ್ಟ ಟಿಡಿಪಿ!