ಶಿವಮೊಗ್ಗ: ಭದ್ರಾ ಜಲಾಶಯದಿಂದ ವೇದಾವತಿ ನದಿಗೆ ಸೇರುವ ಹಳ್ಳದ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುತ್ತಿದೆ. ಈ ವೇಳೆ ಸಾರ್ವಜನಿಕರು ಎಚ್ಚರಿಕೆ ಹಾಗೂ ಸುರಕ್ಷತೆ ಅನುಸರಿಸಬೇಕು. ಕಾಲುವೆ ಹಾಗೂ ಹಳ್ಳದ ಪಾತ್ರಗಳಲ್ಲಿ ಸಾರ್ವಜನಿಕರು ತಿರುಗಾಡಲು, ಜಾನುವಾರುಗಳನ್ನು ಕಾಲುವೆಗೆ ಇಳಿಸುವುನ್ನು ನಿರ್ಬಂಧಿಸಲಾಗಿದೆ ಎಂದು ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತ ತಿಳಿಸಿದ್ದಾರೆ.
ತರೀಕೆರೆ ತಾಲೂಕಿನ ಲಕ್ಕವಳ್ಳಿ, ಲಿಂಗದಹಳ್ಳಿ, ತರೀಕೆರೆ ಕಸಬಾ, ಅಮೃತಾಪುರ, ಅಜ್ಜಂಪುರ ಗ್ರಾಪಂ ವ್ಯಾಪ್ತಿಯಲ್ಲಿ ನೀರು ಹಾಯ್ದು ಹೋಗುತ್ತಿದೆ. ಶಾಂತಿಪುರ ಪಂಪ್‌ಹೌಸ್-1, ಜಂಬದಹಳ್ಳ ಅಕ್ವೆಡಕ್ಟ್, ತರೀಕೆರೆ ರೈಲು ಸೇತುವೆ, ಬೆಟ್ಟತಾವರೆಕೆರೆ ಪಂಪ್‌ಹೌಸ್-2, ಅಜ್ಜಂಪುರ ಸುರಂಗದ ಮಾರ್ಗವಾಗಿ ಹೆಬ್ಬೂರು ಗ್ರಾಮದ ಹತ್ತಿರವಿರುವ ವೈ-ಜಂಕ್ಷನ್‌ನಿಂದ ಹೆಬ್ಬೂರು, ಕಾಟಿನಗೆರೆ, ಬೆಣಕುಣಸೆ, ಮುಗಳಿ, ಬೇಗೂರು, ಆಸಂದಿ, ಹಡಗಲು, ಕಲ್ಕೆರೆ, ಎಚ್.ತಿಮ್ಮಾಪುರ, ಕಲ್ಲಹಳ್ಳಿ, ಚಿಕ್ಕಬಳ್ಳೇಕೆರೆ, ಹನುಮನಹಳ್ಳಿ, ಚೌಳಹಿರಿಯೂರು ಮತ್ತು ಹಿ.ತಿಮ್ಮಾಮರ ಗ್ರಾಮಗಳ ಮಾರ್ಗವಾಗಿ ನೀರು ಹರಿಯುತ್ತಿದೆ.
ಮುನ್ನೆಚ್ಚರಿಕೆಯಾಗಿ ನೀಡಿರುವ ಸೂಚನೆಗಳನ್ನು ಉಲ್ಲಂಘಿಸುವವರು. ನೀರಾವರಿ ಕಾಲುವೆ, ಪಂಪ್‌ಹೌಸ್ ಕಟ್ಟಡಗಳನ್ನು ಜಖಂಗೊಳಿಸುವುದು, ಅನಧಿಕೃತವಾಗಿ ಪಂಪ್‌ಸೆಟ್‌ಗಳನ್ನು ಅಳವಡಿಸಿ ನೀರೆತ್ತುವುದು ನೀರಾವರಿ ಕಾಯ್ದೆಯ ವಿವಿಧ ನಿಯಮಗಳ ಪ್ರಕಾರ ಕಾನೂನು ಬಾಹಿರವಾಗಿದೆ. ಇಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅಧೀಕ್ಷಕ ಅಭಿಯಂತ ಎಚ್ಚರಿಕೆ ನೀಡಿದ್ದಾರೆ.