ಮಕ್ಕಳ ಜತೆಗಿನ ಆಟವೇ ಆನಂದಮಯ

ಬಾಗಲಕೋಟೆ: ಕಳೆದ ಇಪ್ಪತ್ತು ದಿನಗಳಿಂದ ಹಗಲು-ರಾತ್ರಿ ಒಂದಾಗಿ, ಕಣ್ಣಿಗೆ ನಿದ್ದೆ ಇಲ್ಲದೆ ಸರಿಯಾದ ಸಮಯಕ್ಕೆ ಊಟ ಇಲ್ಲದೆ, ರಾಜಕೀಯ ಜಂಜಾಟ, ಚುನಾವಣೆ ಒತ್ತಡ, ಪ್ರಚಾರದ ಅಬ್ಬರದಲ್ಲಿ ಮುಳುಗಿದ್ದವರು ಇವತ್ತು ಅಕ್ಷರಶಃ ಆನಂದಮಯ ವಾತಾವರಣದಲ್ಲಿದ್ದರು.

ಮಕ್ಕಳ ಜತೆಗೂಡಿ ಮಗುವಾಗಿ ಚೆಂಡಾಟ ಆಡಿದರು. ಖುಷಿ ಖುಷಿಯಿಂದ ಉದ್ಯಾನವನದಲ್ಲಿ ಕುಳಿತು ಪತ್ನಿ, ತಾಯಿ ಜತೆ ಹರಟೆ ಹೊಡೆದರು. ಮಧ್ಯ ಮಧ್ಯದಲ್ಲಿ ರಿಂಗಣಿಸುತ್ತಿದ್ದ ಮೊಬೈಲ್ ಆನ್ ಮಾಡಿ ಅತ್ತ ಕಡೆಯವರಿಗೆ ಧನ್ಯವಾದ ಹೇಳುತ್ತಲೇ ಗೆಲುವಿನ ವಿಶ್ವಾಸ ಹೊರ ಹಾಕುತ್ತಿದ್ದರು. ಇದರ ಜತೆಗೆ ತಮ್ಮನ್ನು ಭೇಟಿ ಮಾಡಲು ಬರುತ್ತಿದ್ದ ಕಾರ್ಯಕರ್ತರು, ಹಿರಿಯರು, ಬಂಧುಗಳನ್ನು ಆತ್ಮೀಯತೆಯಿಂದ ಮಾತನಾಡಿಸಿ ಕಳುಹಿಸುತ್ತಿದ್ದರು.

ಹೌದು, ಜಮಖಂಡಿ ಉಪಚುನಾವಣೆಯ ಜಿದ್ದಾಜಿದ್ದಿ ನಲ್ಲಿ ಮುಳುಗಿದ್ದ, ಕ್ಷಣ ಕ್ಷಣವೂ ಟೆನ್ಶನಲ್ಲಿರುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಭಾನುವಾರ ಅದ್ಯಾವುದರ ಜಂಜಾಟ ಇಲ್ಲದೆ ಹಾಯಾಗಿ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆದರು.

ಚುನಾವಣೆ ಗುಂಗಿನಿಂದ ಆಚೆ ಬಂದು ಕುಟುಂಬ ಸದಸ್ಯರ ಜತೆಗೆ ಕಾಲ ಕಳೆದರು. ಕಳೆದ ಇಪ್ಪತ್ತು ದಿನಗಳ ಬಳಿಕ ಡೈನಿಂಗ್ ಟೇಬಲ್​ನಲ್ಲಿ ಕುಳಿತು ಶಾಂತ ರೀತಿಯಲ್ಲಿ ತಿಂಡಿ ಸೇವಿಸಿದರು.

ಇಬ್ಬರು ಮಕ್ಕಳಾದ ಅನ್ವಯ, ಅದ್ವಿಕ ಹಾಗೂ ಸಹೋದರ ಬಸವರಾಜ ಅವರ ಪುತ್ರಿ ಮಿಯಿಕ ಜತೆ ಆಟವಾಡಿ ಮನಸ್ಸು ಹಗರು ಮಾಡಿಕೊಂಡರು. ತಾಯಿ ಸುಮಿತ್ರಮ್ಮ, ಪತ್ನಿ ಕೀರ್ತಿ ಹಾಗೂ ಸಹೋದರಿಯರ ಜತೆ ಖುಷಿಯಾಗಿ ಕಾಲ ಕಳೆದರು. ಇದರ ಜತೆಗೆ ತಮ್ಮ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವಿಕೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಶ್ರೀಕಾಂತ ಕುಲಕರ್ಣಿ ಹೇಳಿದ್ದೇನು?: ಪ್ರತಿ ದಿನ ನಾಲ್ಕೂವರೆಗೆ ಏಳುತ್ತಿದ್ದೆ. ಇವತ್ತು ರಿಲ್ಯಾಕ್ಸ್ ಆಗಿದ್ದು, ಆರು ಗಂಟೆಗೆ ಎದ್ದಿದ್ದೇನೆ. ಟೆನ್ಶನ್ ಇಲ್ಲ ಅಂತ ಹೇಳಕಾಗಲ್ಲ. ಫಲಿತಾಂಶ ಬರುವವರೆಗೂ ಅದು ಇದ್ದೇ ಇರುತ್ತದೆ. ಚುನಾವಣೆಯಲ್ಲಿ ತಮ್ಮ ಪರವಾಗಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಗೆಲುವಿನ ಬಗ್ಗೆ ಸಂಶಯ ಇಲ್ಲ. ಆದರೆ, ಖಾಸಗಿ ವಾಹನದಲ್ಲಿ ಇವಿಎಂ ಮತಯಂತ್ರಗಳನ್ನು ಸಾಗಿಸಲು ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಅದರಲ್ಲೂ ಕಾಂಗ್ರೆಸ್, ಜೆಡಿಎಸ್ ಮುಖಂಡರಿಗೆ ಸಂಬಂಧಿಸಿದ ಸಂಸ್ಥೆಗಳ ವಾಹನ ಪಡೆದಿರುವ ಉದ್ದೇಶ ಏನು ಎನ್ನುವುದು ಗೊಂದಲ ಮೂಡಿಸಿದೆ. ಇದೇ ಕಾರಣಕ್ಕೆ ನಮ್ಮ ಕಾರ್ಯಕರ್ತರು ತಡರಾತ್ರಿವರೆಗೂ ಪ್ರತಿಭಟನೆ ನಡೆಸಿದ್ದಾರೆ. ಭಾನುವಾರ ಮಧ್ಯಾಹ್ನ ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ಲಿಖಿತ ದೂರು ನೀಡಿ ಆ ಬಗ್ಗೆ ಸ್ಪಷ್ಟನೆ ಕೇಳಿದ್ದೇವೆ. ಅವರು ನೀಡುವ ಉತ್ತರ ಸರಿ ಅನ್ನಿಸದೆ ಇದ್ದಲ್ಲಿ ಬೀದಿಗೆ ಇಳಿದು ಹೋರಾಟ ನಡೆಸಲಾಗುವುದು ಎಂದು ಶ್ರೀಕಾಂತ ಕುಲಕರ್ಣಿ ಹೇಳಿದರು.

ಉಪಚುನಾವಣೆ ಹಿನ್ನೆಲೆ ರಾಜಕೀಯ ಜಂಜಾಟದಲ್ಲಿ ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಲು ಆಗಲಿಲ್ಲ ಅಂತ ಅಲ್ಲ. ನಾನು ಯಾವಾಗಲೂ ಪಕ್ಷದ ಕೆಲಸದಲ್ಲಿ ತೊಡಗಿರುವುದರಿಂದ ಚುನಾವಣೆ ಇದ್ದಾಗ, ಇಲ್ಲದಿದ್ದಾಗಲೂ ಇದೇ ಸ್ಥಿತಿ ಇರುತ್ತದೆ. ಆದರೂ ಮತದಾನ ಮುಕ್ತಾಯ ಆಗಿದ್ದು, ಇಂದು ಕುಟುಂಬ ಸದಸ್ಯರೊಂದಿಗೆ ವಿಶೇಷವಾಗಿ ಮೊಮ್ಮಕ್ಕಳ ಜತೆ ಸಮಯ ಕಳೆದಿದ್ದೇನೆ. ಹಾಗೆಯೇ ಮನೆಗೆ ಬರುತ್ತಿರುವ ಕಾರ್ಯಕರ್ತರನ್ನು ಮಾತನಾಡಿಸುವುದು ಮುಖ್ಯ. ನಾಳೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಭೇಟಿ ಮಾಡುವೆ ಎಂದು ತಿಳಿಸಿದರು.