ನನ್ನ ಟ್ವಿಟರ್ ಖಾತೆಯಿಂದ ನಾನೇ ಟ್ವೀಟ್​ ಮಾಡುತ್ತೇನೆ ವಿನಃ ನನ್ನ ಭೂತ ಮಾಡುವುದಿಲ್ಲ: ಸುಷ್ಮಾ ಸ್ವರಾಜ್​

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ಟ್ವಿಟರ್​ನಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆದರೆ ಅವರ ಟ್ವಿಟರ್​ ಖಾತೆಯನ್ನು ಅವರೇ ನಿಭಾಯಿಸುತ್ತಾರಾ? ಅಥವಾ ಬೇರೆಯವರು ಟ್ವೀಟ್​ ಮಾಡುತ್ತಾರಾ ಎಂಬ ಅನುಮಾನವನ್ನು ಅವರ ಟ್ವಿಟರ್​ ಖಾತೆಯಲ್ಲಿ ಕಾಮೆಂಟ್​ ಮಾಡುವ ಮೂಲಕ ವ್ಯಕ್ತಪಡಿಸಲಾಗಿತ್ತು. ಅದಕ್ಕೆ ಪ್ರತಿಯಾಗಿ ಈಗ ಸುಷ್ಮಾ ಸ್ವರಾಜ್​ ಮಾಡಿರುವ ಖಡಕ್​ ಟ್ವೀಟ್​ ಅವರ ಬೆಂಬಲಿಗರಲ್ಲಿ ಮತ್ತಷ್ಟು ನಂಬಿಕೆ ಹುಟ್ಟಿಸಿದೆ ಎನ್ನಬಹುದು.

ನನ್ನ ಟ್ವಿಟರ್​ ಖಾತೆಯಿಂದ ನಾನೇ ಸ್ವತಃ ಟ್ವೀಟ್​ ಮಾಡುತ್ತೇನೆ ಹೊರತು ನನ್ನ ಭೂತ ಮಾಡುವುದಿಲ್ಲ ಎಂದು ಸುಷ್ಮಾ ಸ್ವರಾಜ್​ ಟ್ವೀಟ್​ ಮಾಡಿದ್ದಾರೆ. ಆದರೆ ಹೀಗೆ ಹೇಳಲು ಕಾರಣ ಇದೆ.

ಇತ್ತೀಚೆಗೆ ಅವರು ತಮ್ಮ ಹೆಸರನ್ನು ಚೌಕೀದಾರ್​ ಸುಷ್ಮಾ ಸ್ವರಾಜ್​ ಎಂದು ಟ್ವಿಟರ್​ನಲ್ಲಿ ಬದಲಿಸಿಕೊಂಡಿದ್ದರು. ಅದನ್ನು ನೋಡಿದ ಅವರ ಅನುಯಾಯಿಯೊಬ್ಬರು, ಮೇಡಂ, ನಾವು ನಿಮ್ಮನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಎಂದು ಭಾವಿಸಿದ್ದೇವೆ. ಬಿಜೆಪಿಯಲ್ಲಿ ನೀವೊಬ್ಬರೇ ಸಂವೇದನಾ ಶೀಲ ವ್ಯಕ್ತಿ ಎನ್ನಿಸುತ್ತೀರಿ. ನಿಮ್ಮ ಹೆಸರನ್ನೇಕೆ ಚೌಕಿದಾರ್​ ಎಂದು ಬದಲಿಸಿಕೊಳ್ಳುತ್ತೀರಿ ಎಂದು ರಿಪ್ಲೈ ಮಾಡಿದ್ದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುಷ್ಮಾ ಸ್ವರಾಜ್​, ಏಕೆಂದರೆ ನಾನೂ ಕೂಡ ವಿದೇಶದಲ್ಲಿರುವ ಭಾರತೀಯರು ಮತ್ತು ಅವರ ಹಿತಾಸಕ್ತಿಯನ್ನು ರಕ್ಷಿಸಲು ಶ್ರಮಪಡುತ್ತಿದ್ದೇನೆ ಎಂದು ಟ್ವೀಟ್​ ಮಾಡಿದ್ದರು.

ಮತ್ತೆ ಈ ಟ್ವೀಟ್​ಗೆ ಪ್ರತಿಯಾಗಿ ಇನ್ನೊಬ್ಬ ಅನುಯಾಯಿ, ಇದು ಖಂಡಿತ ಸುಷ್ಮಾ ಸ್ವರಾಜ್​ ಮಾಡಿದ ಟ್ವೀಟ್​ ಅಲ್ಲ. ಅವರ ಖಾತೆಯನ್ನು ಬೇರೆಯವರು ನಿರ್ವಹಿಸುತ್ತಿದ್ದಾರೆ. ಅದಕ್ಕಾಗಿಯೇ ಅಂತಹವರಿಗೆ ಹಣವನ್ನೂ ನೀಡಲಾಗುತ್ತದೆ ಎಂದು ಟ್ವೀಟ್​ ಮಾಡಿದ್ದರು.

ಈಗ ಆ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ ಸುಷ್ಮಾ ಸ್ವರಾಜ್​, ಖಂಡಿತ ನನ್ನ ಟ್ವಿಟರ್​ ಖಾತೆಯಿಂದ ನಾನೇ ಟ್ವೀಟ್​ ಮಾಡುತ್ತೇನೆ ಹೊರತು ಬೇರೆಯಾರೂ ಮಾಡುವುದಿಲ್ಲ. ನನ್ನ ಭೂತವೂ ಅದನ್ನು ಮಾಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *