ದೂರದೂರಿನಿಂದ ಬಂದ್ರು ವೋಟ್ ಹಾಕೋಕೆ

ಚಿಕ್ಕಮಗಳೂರು: ಮತದಾನ ಪವಿತ್ರವಾದ ಹಕ್ಕು. ಮತದಾನ ಪ್ರತಿಯೊಬ್ಬರ ಜವಾಬ್ದಾರಿ. ಅಷ್ಟೇ ಅಲ್ಲ ಮತದಾನ ಮಾಡುವುದು ಒಂದು ರೀತಿಯ ಹೆಮ್ಮೆ ಎಂಬ ಅಭಿಪ್ರಾಯ ಕೆಲವರದ್ದಾದರೆ, ನಮ್ಮ ಒಂದು ಮತ ಹಾಕದಿದ್ದರೆ ದೇಶ ಮುಳುಗಿ ಹೋಗುತ್ತದೆಯೇ? ಎಂಬ ಬೇಜವಾಬ್ದಾರಿ ಭಾವನೆ ಕೆಲವರದ್ದಾಗಿತ್ತು.

ಇಂಥ ಸಮ್ಮಿಶ್ರ ಭಾವನೆ ಇರುವ ಜನಸಮೂಹ ಚಿಕ್ಕಮಗಳೂರು ನಗರದ ಹಲವೆಡೆ ಗುರುವಾರ ಕಂಡುಬಂತು. ಮತದಾನಕ್ಕಾಗಿ ದೂರದ ಊರು, ರಾಜ್ಯಗಳಿಂದ ಆಗಮಿಸಿ ಮತ ಚಲಾಯಿಸಿ ಹಲವರು ಮಾದರಿಯಾದರೆ, ಮತ್ತೆ ಕೆಲವರು ಹಕ್ಕು ಚಲಾಯಿಸದೆ ದೂರದ ಬೆಂಗಳೂರಿನಿಂದ ಕಾಫಿ ನಾಡಿಗೆ ಮೋಜಿಗಾಗಿ ಆಗಮಿಸಿದ್ದರು.

ಜವಾಬ್ದಾರಿ ಮರೆಯದ ಕೂಲಿ ಕಾರ್ವಿುಕರು: ನಗರದ ಅಜಾದ್ ಪಾರ್ಕ್ ವೃತ್ತದ ಬಳಿ ಬೆಳಗ್ಗೆಯೇ ವೋಟು ಮಾಡಿ ಕೂಲಿಗಾಗಿ ಗುಂಪು ಕಟ್ಟಿಕೊಂಡು ಮಹಿಳೆಯರು ಕಾಯುತ್ತಿದ್ದರು. ಇವರೆಲ್ಲ 10-15 ಕಿಮೀ ದೂರದ ಹಳ್ಳಿಯಿಂದ ನಗರಕ್ಕೆ ಕೂಲಿ ಅರಸಿ ಬಂದವರು. ಬೆಳಗ್ಗೆ 5ಕ್ಕೆ ಎದ್ದು ಅಡುಗೆ ಮಾಡಿಕೊಂಡು ಬುತ್ತಿ ಕಟ್ಟಿಕೊಂಡು ಬೆಳಗ್ಗೆ 7ಕ್ಕೆ ತಮ್ಮೂರಲ್ಲಿ ಮತದಾನ ಮಾಡಿ ಬಂದವರು.

ಮತದಾನ ಮಾಡಿ ನಗರಕ್ಕೆ ಬರುವ ವೇಳೆಗೆ ಒಂಬತ್ತು ಗಂಟೆಯಾಗಿತ್ತು. ಹಾಗಾಗಿ ಹಲವರಿಗೆ ಇಂದಿನ ಕೂಲಿ ಕೆಲಸ ಸಿಗಲಿಲ್ಲ. ಕೂಲಿ ಕೆಲಸವೇ ಇವರಿಗೆ ಜೀವನಾಧಾರ. ಕೂಲಿ ಸಿಗದಿದ್ದರೂ ಪರವಾಗಿಲ್ಲ, ಮತದಾನ ಮಾಡಿದ ಖುಷಿ ನಮಗಿದೆ ಎಂದು ಹೇಳಿದರು.

ಎಲ್ಲಿಗೆ ಹೊರಟಿದ್ದೀರಿ? ಮತದಾನ ಮಾಡಿದ್ದೀರಾ? ಕೈ ತೋರಿಸಿ ಎನ್ನುತ್ತಿದ್ದಂತೆ ಉತ್ಸಾಹದಿಂದ ಈ ಮಹಿಳೆಯರು ಮತದಾನ ಮಾಡಿ ನೀಲಿ ಶಾಯಿ ಹಾಕಿಸಿಕೊಂಡ ಬೆರಳು ತೋರಿಸಿ ಕ್ಯಾಮರಾಕ್ಕೆ ಫೋಸು ನೀಡಿದರು. ನಗರ ಹೊರವಲಯದ ಗವನಹಳ್ಳಿ, ಮರ್ಲೆ, ನಲ್ಲೂರು, ಕರುಬರಹಳ್ಳಿ, ಗಿಡ್ಡೇನಹಳ್ಳಿ ಸೇರಿ ಹಲವು ಗ್ರಾಮದಿಂದ ನಿತ್ಯ ನಗರಕ್ಕೆ ನೂರಾರು ಮಹಿಳೆಯರು ಕೂಲಿ ಅರಿಸಿ ಬರುತ್ತಾರೆ.

ಗೋವಾದಿಂದ ಬಂದ ದಂಪತಿ: ಮತದಾನ ಮಾಡಲು ಗೋವಾದಿಂದ ಆಗಮಿಸಿದ್ದ ಮಹೇಶ್ ಹಾಗೂ ಸುಪ್ರಿಯಾ ದಂಪತಿ ಇಲ್ಲಿನ ವಿಜಯಪುರ ಬಡಾವಣೆ ಮತಗಟ್ಟೆ ಸಂಖ್ಯೆ 191ರಲ್ಲಿ ಬೆಳಗ್ಗೆ 8ಕ್ಕೆ ಮತ ಚಲಾಯಿಸಿದರು. ವಿಜಯಪುರ ಬಡಾವಣೆಯಲ್ಲಿ ವಾಸವಾಗಿದ್ದ ಇವರು ಒಂದೂವರೆ ವರ್ಷದಿಂದ ಉದ್ಯೋಗಕ್ಕಾಗಿ ಗೋವಾದಲ್ಲಿ ನೆಲೆಸಿದ್ದಾರೆ. ನಮ್ಮೂರಿನಲ್ಲಿಯೇ ಮತ ಇರಬೇಕೆಂಬ ಕಾರಣಕ್ಕೆ ಅವರು ಬದಲಾವಣೆ ಮಾಡಿಸಿಕೊಂಡಿಲ್ಲ. ಒಂದು ದಿನ ಮುಂಚೆಯೇ ನಗರಕ್ಕೆ ಆಗಮಿಸಿದ್ದ ದಂಪತಿ ಬೆಳಗ್ಗೆಯೇ ಮತದಾನ ಮಾಡಿ ಬಡಾವಣೆಯ ಹಲವರಿಗೆ ಮತದಾನ ಮಾಡುವಂತೆ ಮನವಿ ಮಾಡಿದರು.

ಮೋದಿ ರಾಜ್ಯದಿಂದ ಬಂದ್ರು ವಿಜ್ಞಾನಿ

ಅಹಮದಾಬಾದ್​ನ ಇಸ್ರೋ ವಿಭಾಗದಲ್ಲಿ ಹಿರಿಯ ವಿಜ್ಞಾನಿಯಾಗಿರುವ ಡಾ. ತೇಜಸ್ ಎನ್. ಬಂಡಿ ಇಲ್ಲಿನ ಲೋಕೋಪಯೋಗಿ ಕಚೇರಿ ಎದುರಿನ ಬಾಲಕಿಯರ ಶಾಲೆ ಮತಗಟ್ಟೆ ಸಂಖ್ಯೆ 149ರಲ್ಲಿ ಮತದಾನ ಮಾಡಿದರು. ಈ ಮೊದಲು ಅಮೆರಿಕದ ನಾಸಾದಲ್ಲಿ ಕೆಲಸ ಮಾಡುತ್ತಿದ್ದ ಅವರನ್ನು ಒಂದು ವರ್ಷದಿಂದ ಇಸ್ರೋ ಸಂಸ್ಥೆ ಕರೆಸಿಕೊಂಡು ಅಹಮದಾಬಾದ್ ವಿಭಾಗದಲ್ಲಿ ಸಂಶೋಧನೆಗೆ ತೊಡಗಿಸಿಕೊಂಡಿದೆ. ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ಬುಧವಾರ ಅಧ್ಯಕ್ಷರೊಂದಿಗೆ ನಡೆದ ಸಭೆ ಮುಗಿಸಿಕೊಂಡು ಗುರುವಾರ ಬೆಳಗ್ಗೆ ನಗರಕ್ಕೆ ಆಗಮಿಸಿ ಮತ ಚಲಾಯಿಸಿದರು.

ಕಳೆದ 35 ವರ್ಷಗಳಿಂದ ನಿರಂತವಾಗಿ ಮತದಾನ ಮಾಡುತ್ತಿದ್ದೇನೆ. ಗ್ರಾಪಂ, ತಾಪಂ, ಜಿಪಂ, ವಿಧಾನಸಭೆ ಹಾಗೂ ಲೋಕಸಭೆ ಸೇರಿ ಎಲ್ಲ ಚುನಾವಣೆಗಳಲ್ಲೂ ಮತದಾನ ಬಿಟ್ಟಿಲ್ಲ. ಮತದಾನ ಮಾಡುವುದೇ ನನ್ನ ಧರ್ಮ ಎಂದು ಭಾವಿಸಿದ್ದೇನೆ. | ಜಯಮ್ಮ, ಗವನಹಳ್ಳಿ ಕೂಲಿ ಕಾರ್ವಿುಕ ಮಹಿಳೆ