ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ; ಸಚಿವ ಎಂ.ಬಿ. ಪಾಟೀಲ ಸೂಚನೆ

MINISTER M B PATIL DRINKING WATER MEETING

ವಿಜಯಪುರ: ಬೇಸಿಗೆ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ತುರ್ತಾಗಿ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಕುಡಿಯುವ ನೀರಿನ ಪರಿಸ್ಥಿತಿ-ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನಗರ ಸೇರಿದಂತೆ ಜಿಲ್ಲಾದ್ಯಂತ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದರು.

ಈ ಬಾರಿ ಮಳೆ ಪ್ರಮಾಣ ಕುಂಠಿತಗೊಂಡಿದೆ. ರಾಜ್ಯದೆಲ್ಲೆಡೆ ಬರ ಆವರಿಸಿದೆ. ಹೀಗಾಗಿ ಸರ್ಕಾರ ಕುಡಿಯುವ ನೀರು ಪೂರೈಕೆಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ಅಧಿಕಾರಿಗಳು ಸಹ ಕೈ ಜೋಡಿಸಬೇಕು. ಸಮಸ್ಯೆ ಕಂಡು ಬಂದಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಸಾಧ್ಯವಾದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕೆಂದರು.

ನಗರ ನೀರು ಸರಬರಾಜು

ವಿಜಯಪುರ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನಿಡಗುಂದಿ ಅಕ್ವಾಡೆಕ್ಟ್ ಮೂಲಕ ಭೂತನಾಳ ಕೆರೆ ತುಂಬಿಸಲು ತಾತ್ಕಾಲಿಕವಾಗಿ ಸ್ಟೋರೇಜ್ ನಿರ್ಮಿಸಿಕೊಂಡು ಕೆರೆ ತುಂಬಿಸಿ ಕುಡಿಯುವ ನೀರಿನ ಪೂರೈಕೆಗೆ ಕ್ರಮ ವಹಿಸಬೇಕು. ವಿಜಯಪುರ ನಗರದಲ್ಲಿ ಜಲಮಂಡಳಿಯಿಂದ ಕೊರೆಯಿಸಲಾದ 20 ಬೋರವೆಲ್ಗಳಿಗೆ ಮಾಸಾಂತ್ಯದೊಳಗೆ ತುರ್ತಾಗಿ ಮೋಟರ್ ಅಳವಡಿಸಿ ನೀರು ಪೂರೈಕೆಗೆ ಕ್ರಮ ವಹಿಸಬೇಕು. ಸಣ್ಣ ಪುಟ್ಟ ದುರಸ್ತಿಗಳಿರುವ ಬೋರವೆಲ್‌ಗಳ ದುರಸ್ತಿಗೆ ಕ್ರಮ ವಹಿಸಿ ನೀರು ಒದಗಿಸಲು ಮುಂದಾಗಬೇಕು. ಈಗಾಗಲೇ 8 ಖಾಸಗಿ ಬೋರವೆಲ್ಗಳು ನೀಡಲು ಮುಂದಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ನಗರದ ಆಯಾ ವಾರ್ಡ್‌ಗಳಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನೀರು ಒದಗಿಸಲು ಕ್ರಮ ವಹಿಸಬೇಕು. ಈಗಾಗಲೇ ಗುರುತಿಸಲಾದ 28 ಸರ್ಕಾರಿ ಹಾಗೂ ಖಾಸಗಿ ಭಾವಿಗಳ ನೀರಿನ ಬಳಕೆ ಮಾಡುವ ನಿಟ್ಟಿನಲ್ಲಿ ಅಗತ್ಯವಿರುವ ಮೋಟರ್-ಪಂಪ್ ಅಳವಡಿಸಿ ಕುಡಿಯಲು ನೀರು ಯೋಗ್ಯವಿಲ್ಲದಿದ್ದಲ್ಲಿ ಬಾವಿಯ ನೀರು ಗೃಹಬಳಕೆ ಉಪಯೋಗ ಮಾಡಲು ಕ್ರಮ ವಹಿಸಬೇಕು. ಇದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ನೀರಿನ ಸದ್ಭಳಕೆಯಾಗಲಿ

ಸರ್ಕಾರಿ ಹಾಗೂ ಖಾಸಗಿ ಬಾವಿಗಳನ್ನು ಗುರುತಿಸಿಟ್ಟುಕೊಳ್ಳಬೇಕು. ಸಾರ್ವಜನಿಕ ಕೊಳವೆಬಾವಿಗಳನ್ನು ದುರಸ್ಥಿಗೊಳಿಸಬೇಕು. ಬಾವಡಿಗಳ ನೀರು ಸ್ವಚ್ಛಗೊಳಿಸಿ ದಿನಬಳಕೆಗಾದರೂ ಪೂರೈಸಬೇಕು. ಆಯಾ ವಾರ್ಡ್‌ಗಳಲ್ಲಿರುವ ಬೋರ್‌ವೆಲ್, ಬಾವಿಗಳನ್ನು ಸ್ವಚ್ಛಗೊಳಿಸಿದ್ದಲ್ಲಿ ವಾರ್ಡ್‌ನ ನೀರಿನ ಸಮಸ್ಯೆಗೆ ಪರಿಹಾರ ಸಿಗುವುದರಿಂದ ಈ ತಿಂಗಳ 28ರೊಳಗೆ ಲಭ್ಯವಿರುವ ಎಲ್ಲ ಕೊಳವೆ ಬಾವಿ- ಬಾವಿಗಳ ನೀರಿನ ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸಚಿವರು ಸೂಚಿಸಿದರು.
ಜಿಲ್ಲೆಯ 15 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಸ್ತುತ ಯಾವುದೇ ನೀರಿನ ತೀವ್ರತರವಾಗಿ ಸಮಸ್ಯೆ ಎದುರಾಗಿಲ್ಲ. ಆಲಮೇಲ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಮಾರ್ಚ್‌ನವರೆಗೆ ಯಾವುದೇ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಮಾರ್ಚ್ ನಂತರ ಬರಬಹುದಾದ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಈಗಿನಿಂದಲೇ ಟ್ಯಾಂಕರ್ ವ್ಯವಸ್ಥೆ ಸೇರಿದಂತೆ ಬೋರ್‌ವೆಲ್‌ಗಳನ್ನು ಗುರುತಿಸಿಕೊಂಡು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರಣಿ ಸಭೆ ನಡೆಸಿ

ಜಿಲ್ಲೆಯ ಎಲ್ಲ ತಾಲೂಕು, ಗ್ರಾಮ ಮಟ್ಟದ ಟಾಸ್ಕ್‌ಪೋರ್ಸ್ ಸಮಿತಿಗಳು ಕಾಲಕಾಲಕ್ಕೆ ನಿರಂತರವಾಗಿ ಸಭೆಗಳನ್ನು ನಡೆಸಿ ಇದ್ದ ಸಣ್ಣಪುಟ್ಟ ಸಮಸ್ಯೆಗಳನ್ನು ನಿವಾರಿಸಿಕೊಂಡು ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪಾಲಿಕೆ ಅಧಿಕಾರಿಗಳು ಜಲಮಂಡಳಿ ಅಧಿಕಾರಿಗಳ ಮೇಲೆ ಜಲಮಂಡಳಿ ಅಧಿಕಾರಿಗಳು ಪಾಲಿಕೆ ಅಧಿಕಾರಿಗಳ ಮೇಲೆ ಬೊಟ್ಟು ತೋರಿಸಿದೇ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಕುಡಿಯುವ ನೀರಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಯಾರೂ ನಿರ್ಲಕ್ಷೃ ವಹಿಸದೇ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಜನರಿಗೆ ಕುಡಿಯುವ ನೀರು ಒದಗಿಸಲು ಮುಂದಾಗುವಂತೆ ಸಚಿವ ಎಂ.ಬಿ. ಪಾಟೀಲ ಸೂಚನೆ ನೀಡಿದರು.

ಕುಡಿಯುವ ನೀರು ಒದಗಿಸಲು ಯಾವುದೇ ಅನುದಾನದ ಕೊರತೆಯಿಲ್ಲ. ವಿಪತ್ತು ಪರಿಹಾರ ನಿಧಿಯಲ್ಲಿ 18 ಕೋಟಿ ರೂ. ಇದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ, ಪೈಪ್‌ಲೈನ್, ಬಾಡಿಗೆ ಪಾವತಿ ಸೇರಿದಂತೆ ಈ ಹಣವನ್ನು ಬಳಕೆ ಮಾಡಿಕೊಂಡು ತುರ್ತಾಗಿ ನೀರು ಒದಗಿಸಲು ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶಾಸಕ ವಿಠಲ ಕಟಕದೊಂಡ, ಮಹಾನಗರ ಪಾಲಿಕೆ ಮಹಾಪೌರ ಮಾಹೆಜಬಿನ್ ಹೊರ್ತಿ, ಉಪಮಹಾಪೌರ ದಿನೇಶ ಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೊನಾವಣೆ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ ಮತ್ತಿತರರಿದ್ದರು.

Share This Article

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…

Chanakya Niti: ದಾಂಪತ್ಯ ಜೀವನ ಸುಂದರವಾಗಿರಲು 4 ವಿಷಯಗಳನ್ನು ಅನುಸರಿಸಿ….

ಬೆಂಗಳೂರು:  ವಿದ್ವಾಂಸರಲ್ಲಿ ಚಾಣಕ್ಯರು ( Chanakya Niti ) ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…

Tamarind Juice : ಹುಣಸೆ ಹಣ್ಣಿನ ರಸದ ಅದ್ಭುತ ಪ್ರಯೋಜನಗಳಿವು…

ಬೆಂಗಳೂರು:  ಹುಣಸೆಹಣ್ಣು ಭಾರತೀಯ ಪಾಕಪದ್ಧತಿಯಲ್ಲಿ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ. ಹುಣಸೆಹಣ್ಣು ಸ್ವಲ್ಪ ಸಿಹಿ ಮತ್ತು ಸ್ವಲ್ಪ…