ಮೈಸೂರು: ಮಾರಕ ರೋಗ ಕರೋನಾ ಸೇರಿದಂತೆ ಹಲವು ತುರ್ತು ಪರಿಸ್ಥಿತಿಗಳಲ್ಲಿ ನಿಷ್ಠೆ ಮತ್ತು ನಿಸ್ವಾರ್ಥ ಭಾವನೆಯಿಂದ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರನ್ನು ಎಲ್ಲರೂ ಗೌರವಿಸಬೇಕು ಎಂದು ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್ ಹೇಳಿದರು.
ನಗರದ ನ್ಯೂ ಸಯ್ಯಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದಲ್ಲಿ ಶ್ರೀದುರ್ಗಾ ಫೌಂಡೇಷನ್‌ನಿಂದ ಸೋಮವಾರ ಆಯೋಜಿದ್ದ ವಿಶ್ವ ದಾದಿಯರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮೇಣದ ಬತ್ತಿ ಹಿಡಿದು ಫ್ಲಾರೆನ್ಸ್ ನೈಟಿಂಗೆಲ್ ಸ್ಮರಿಸುತ್ತ ಆನಂತರ ಹಲವು ವರ್ಷದಿಂದ ದಾದಿಯರಾಗಿ ಸೇವೆ ಸಲ್ಲಿಸಿದ ರಶ್ಮಿ, ರಶೀದ್, ಕೋಮಲಾ, ಪೂರ್ಣಿಮಾ ಅವರನನ್ನು ಸನ್ಮಾನಿಸಲಾಯಿತು.
ಆರೋಗ್ಯ ಸೇವಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾದ ಶುಶ್ರೂಷಾ ವಿಭಾಗಕ್ಕೆ ದಾದಿಯರದೇ ನೇತೃತ್ವ. ವೈದ್ಯರ ನಿರ್ದೇಶನವನ್ನು ಯಥಾವತ್ತಾಗಿ ಪಾಲಿಸಲು ದಾದಿಯರು ಸಹಕರಿಸುತ್ತಾರೆ. ವಿಶ್ವ ದಾದಿಯರ ದಿನಾಚರಣೆಯ ನಿಮಿತ್ತ ಶುಶ್ರೂಷಾ ಸೇವೆಯ ಬಗ್ಗೆ ಉಲ್ಲೇಖೀಸುವುದು ಔಚಿತ್ಯದಾಯಕ ಅವರಿವರೆನ್ನದೆ ಎಲ್ಲರ ಆರೋಗ್ಯ ಕಾಪಾಡಲು ಹಗಲಿರುಳು ಶ್ರಮಿಸುವ ಔದಾರ್ಯ ದೊಡ್ಡದು ಎಂದರು.
ಶ್ರೀದುರ್ಗಾ ಫೌಂಡೇಷನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಮಾತನಾಡಿ, ಒಬ್ಬ ನರ್ಸ್ ತಾನು ಆರೈಕೆ ಮಾಡೋ ರೋಗಿ ಯಾವ ಜಾತಿ, ಯಾವ ಧರ್ಮ, ಯಾವ ಪಕ್ಷ, ಯಾವ ಊರು ಎಂಬೆಲ್ಲಾ ವಿಚಾರದ ಬಗ್ಗೆ ನೋಡುವುದೇ ಇಲ್ಲ. ರೋಗಿ ಯಾರೇ ಇರಲಿ, ಅವರನ್ನು ಮಗುವಿನಂತೆ ಆರೈಕೆ ಮಾಡಿ ಹುಷಾರಾಗಿಸಿ, ಮನೆಗೆ ಕಳುಹಿಸೋದಷ್ಟೇ ಅವರ ಏಕೈಕ ಗುರಿ ಅಗಿರುತ್ತದೆ. ಅಂತಹ ಸೇವೆ ಸಲ್ಲಿಸುವ ಎಲ್ಲರಿಗೂ ಶುಭಾಶಯಗಳು ಎಂದು ಹೇಳಿದರು.
ಮುಖಂಡರಾದ ಮಹದೇವ್, ರಮೇಶ್ ರಾಮಪ್ಪ, ರವಿಚಂದ್ರ, ಸುಜಾತ ಇತರರಿದ್ದರು.
