ಮದ್ದೂರು: ವಿದ್ಯಾರ್ಥಿಗಳು ಶಿಕ್ಷಕರನ್ನು ಹಾಗೂ ಗುರು, ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದು ಕೊಪ್ಪದ ಸರ್ವೋದಯ ಪ್ರೌಢಶಾಲೆಯ ಅಧ್ಯಕ್ಷ ಬಿ.ವಿವೇಕಾನಂದ ತಿಳಿಸಿದರು.
ತಾಲೂಕಿನ ಕೊಪ್ಪ ಹೋಬಳಿಯ ಕೊಪ್ಪದ ಸರ್ವೋದಯ ಪ್ರೌಢಶಾಲೆಯಲ್ಲಿ 1999-2001 ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಂದ ಗುರುವಾರ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಕೊಪ್ಪ ಸರ್ವೋದಯ ಶಾಲೆಯಲ್ಲಿ ಗ್ರಾಮಾಂತರ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಉತ್ತಮ ಭವಿಷ್ಯ ರೂಢಿಸಿಕೊಂಡಿರುವುದು ಮೆಚ್ಚುಗೆಯ ವಿಷಯ ಎಂದರು. ಸಂಸ್ಥೆಯ ನಿರ್ದೇಶಕ ಡಿ.ಪಿ.ಸ್ವಾಮಿ ಮಾತನಾಡಿ, ಸರ್ವೋದಯ ವಿದ್ಯಾಸಂಸ್ಥೆಯ ಸಂಸ್ಥಾಪಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಎ.ಡಿ.ಬಿಳಿಗೌಡ ಅವರ 100ನೇ ವರ್ಷದ ಜಯಂತಿ ಅಂಗವಾಗಿ ಎ.ಡಿ.ಬಿಳಿಗೌಡ ಅವರ ಉತ್ಸವ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಇದಕ್ಕೆ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಅಗತ್ಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಗುರುವಂದನಾ ಸಮಾರಂಭದಲ್ಲಿ ಸುಮಾರು 24 ಶಿಕ್ಷಕರನ್ನು ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು ಹಾಗೂ ಇದೇ ವೇಳೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಎ.ಸಿ.ಉದಯ್ ಆಬಲವಾಡಿ, ಮಂಜು ಹರಳಕೆರೆ, ಪುನೀತ್ ಗುಳೂರು, ತಿಮ್ಮೇಶ್ ಮಾರಂಗೆರೆ, ಸಂದೇಶ್ ಗೌಡಗೆರೆ, ಶಿವಾನಂದ ಮಾಗೋಡ್ನಳ್ಳಿ ಅವರ ಮುಂದಾಳತ್ವದಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಪಾಲ್ಗೊಂಡು ಶಿಕ್ಷಕರನ್ನು ಅಭಿನಂದಿಸಿದರು.