More

  ಸಂಬಂಧಗಳಿಗೆ ಬೆಲೆ ಇರಲಿ ವ್ಯರ್ಥ ಖರ್ಚಿಗೆ ಮಿತಿಯಿರಲಿ 

  ಬಟ್ಟೆಗಳು ಎಷ್ಟೇ ಇರಲಿ. ಅಲ್ಮೇರದಲ್ಲಿ ಸ್ಥಳ ಇಲ್ಲದೆ ಸೂಟ್​ಕೇಸ್ ತುಂಬಿರಲಿ ‘ನನ್ ಹತ್ರ ಬಟ್ಟೆಗಳೇ ಇಲ್ಲ’ ಎನ್ನುವುದು ನಮ್ ಹೆಣ್ಮಕ್ಕಳಿಗೆ ರೂಢಿ ಆಗ್ಬಿಟ್ಟಿದೆ. ಆಗೊಂದು ಕಾಲವಿತ್ತು, ಯಾವುದೋ ಸಂದರ್ಭದಲ್ಲಿ ವರ್ಷಕ್ಕೆರಡು ಅಂಗಿ ಕೊಂಡರೆ ಮತ್ತೊಂದು ವರುಷ ಕಳೆದು ಮರಳಿ ಕೊಳ್ಳುವವರೆಗೂ ಅದಕ್ಕೆ ‘ಹೊಸ ಬಟ್ಟೆ’ ಎಂದೇ ಹೆಸರು.

  ಊರಲ್ಲಿ ಯಾವುದಾದ್ರೂ ಮದುವೆ , ಹಬ್ಬ ಹರಿದಿನ, ಪೂಜೆ, ನಾಮಕರಣ ಯಾವುದೇ ಬರಲಿ ಅದನ್ನೇ ಹಾಕೊಂಡು ತಲೆ ತುಂಬಾ ಹೂವು ಮುಡಿದು, ಕೈ ತುಂಬಾ ಗಾಜಿನ ಬಳೆ ತೊಟ್ಟು ನಗು ನಗುತ್ತಾ ಓಡಾಡುತ್ತಿದ್ದರು ಹೆಂಗಳೆಯರು. ಮಕ್ಕಳಿಗೂ ಅಷ್ಟೆ. ಅಕ್ಕನಿಗೆ ಅಂಗಿ ತಗೊಂಡರೆ ಅದು ಸಣ್ಣದಾದ್ರೆ ತಂಗಿಗೆ ಎಂದು ಇಡುತ್ತಿದ್ರು, ಇಲ್ಲವೆ ಅಕ್ಕನ ಬಟ್ಟೆ ತಂಗಿಯೂ ಹಾಕ್ತಾ ಇದ್ಳು.

  ಆದ್ರೆ ಹೊಸ ಶೈಲಿಯ ಉಡುಪು ಕೊಡ್ಸಿಲ್ಲ ಅಂದ್ರೆ ಕಾರ್ಯಕ್ರಮಕ್ಕೆ ಬರಲ್ಲ ಅಂತಾರೆ ಈಗಿನವರು. ‘ಕಾಲ ಬದಲಾಗಿದೆ ರೀ…‘ ಅಂತೀರಾ? ಅದು ನಿಜವೇ.

  ಅದಿರ್ಲಿ . ಮೊನ್ನೆಯಷ್ಟೇ ನನ್ ಸಹದ್ಯೋಗಿ ಒಬ್ಳು ಹೇಳ್ತಾ ಇದ್ಲು ‘ನೆಕ್ಲೆಸ್ ಮಾಡ್ಲಿಕೆ ಹಾಕಿದ್ದೀನಿ, ಊರ್ ಕಡೆ ಮದುವೆ ಕಾರ್ಯಕ್ರಮ ಇದೆ ಹೋಗ್ಬೇಕು’ ಅಂತ… ‘ಅಷ್ಟೊಂದು ಒಡವೆ ಇದೆ ಮತ್ತೇಕೆ?’ ಅಂದ್ರೆ ‘ನಮ್ ಊರು ಕಡೆ ಒಮ್ಮೆ ನೋಡಿದ್ದನ್ನ ಮತ್ತೊಮ್ಮೆ ನೋಡಿದರೆ ಏನೋ ಒಂಥರಾ ಮಾತಾಡ್ತಾರೆ ಕೆಲವರು, ಏನೇ ಹೊಸದೇನು ಮಾಡ್ಸಿಕೊಂಡಿಲ್ವಾ ಅಂತಾ ನೇರವಾಗಿ ಕೇಳಿದರೆ, ಮತ್ತೆ ಕೆಲವರು ಓರೆ ಕಣ್ಣಲ್ಲಿ ನೋಡಿ ವ್ಯಂಗ್ಯವಾಗಿ ನಗುತ್ತಾರೆ’ ಅಂದಳು. ನನಗೋ ಆಶ್ಚರ್ಯ ಅಬ್ಬಾ!

  ಬಟ್ಟೆ ಹೋಗ್ಲಿ ಚಿನ್ನದಲ್ಲೂ ಅಷ್ಟೊಂದು ಫ್ಯಾಷನ್ ವ್ಯಾಮೋಹ ಅಂದ್ರೆ ಏನ್ ಕಾಲಾವಸ್ಥೆ ಅನಿಸಿತ್ತು. ಆರ್ಥಿಕವಾಗಿ ಸ್ಥಿತಿವಂತರೇನೋ ಮಾಡಿಸ್ಕೋತಾರೆ, ಪಾಪ ಇಲ್ಲದವರ ಪಾಡೇನು? ಯಾರು ಹೇಗೆ ನಕ್ಕರೂ ಅವರು ಮಾಡುವುದಾದರೂ ಏನು? ಮನೆ ಅಡವಿಟ್ಟು ಬಂಗಾರ ತೊಟ್ಟು ಅನ್ಯರ ವ್ಯಂಗ್ಯ ನಗೆ ಕಡಿಮೆ ಮಾಡಲಾದೀತೆ? ಎಂದೆನಿಸಿದರೂ ಅವಳಿಗೆ ಉತ್ತರಿಸದೇ ಮೌನವಹಿಸಿದೆ.

  ಹಾಂ. ಈಗ ವಿಷಯಕ್ಕೆ ಬರ್ತೀನಿ. ದುಡಿಯೋದು ಏನಕ್ಕೆ, ಹೊಟ್ಟೆ ಬಟ್ಟೆಗೆ ತಾನೆ? ಎನ್ನುತ್ತಾರೆ ಹೆಚ್ಚಿನವರು. ಇದು ನಿಜ ಕೂಡ. ಆದರೂ ದುಡಿದದ್ದೆಲ್ಲ ಬರೀ ತಿನ್ನೋದಕ್ಕೆ, ತೊಡೋದಕ್ಕೆ ಎಂದು ಅಗತ್ಯಕ್ಕಿಂತ ಹೆಚ್ಚು ಮೋಜು, ಮಸ್ತಿ ಮಾಡಿ ವ್ಯರ್ಥ ಮಾಡುವುದು ಸರಿಯೆ? ಖಂಡಿತ ಇಲ್ಲ. ಉಳಿತಾಯವೂ ಇರಬೇಕು. ದುಡಿದಿದ್ದರಲ್ಲಿ ಸ್ವಲ್ಪವಾದರೂ ಉಳಿಸಿದರೆ ಮುಂದೊಮ್ಮೆ ಕಷ್ಟ ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ.

  ನಾ ಯಾಕೆ ಈ ವಿಷಯ ಪ್ರಸ್ತಾಪಿಸಿದೆ ಹೇಳ್ತೀನಿ ಕೇಳಿ. ಮೊನ್ನೆಯಷ್ಟೇ ತರಕಾರಿ ಅಂಗಡಿಗೆ ಹೋಗಿದ್ದೆ. ಗುಂಪು ಜಾಸ್ತಿ ಇದ್ದಿದ್ರಿಂದ ಸ್ವಲ್ಪ ಹೊತ್ತು ನಿಂತಿದ್ದೆ . ಯಾರೋ ಮಾತಾಡ್ತಾ ಇದ್ರು, ‘ಅವರ ಮಗಳು ಇದ್ದಾಳಲ್ಲಾ ಯಾವುದೋ ಕಂಪೆನೀಲಿ ಕೆಲ್ಸ ಮಾಡ್ತಿದ್ದಾಳೆ. 50 ಸಾವಿರ ಸಂಬಳ ಅಂತೆ. ಪಾಪ ಈ ಯಮ್ಮ ಮುಸುರೆ- ಗಿಸ್ರೆ ತೊಳೆದು ಹೊಟ್ಟೆ ಕಟ್ಟಿ ಮಗಳಿಗೇ ಖರ್ಚು ಮಾಡ್ತಿದ್ರು. ಈಗ ನೋಡ್ರಿ ಒಂದು ರೂಪಾಯಿ ಕೂಡ ಮನೆಗೆ ಕೊಡಲ್ವಂತೆ.

  ಅದೇನೊ ವೀಕೆಂಡ್ ಪಾರ್ಟಿ, ವಾರಕ್ಕೆರಡು ಬಟ್ಟೆ, ಮೇಕಪ್ ಅದೂ- ಇದೂಂತ ಸಿಕ್ಕಾಪಟ್ಟೆ ಖರ್ಚು ಮಾಡ್ತಾಳಂತೆ. ಜತೆಗೆ ಯಾವುದೋ ಹುಡುಗನ ಜತೆ ಓಡಾಟ ಬೇರೆ ಅಂತೆ. ಏನಾದ್ರೂ ಕೇಳಿದ್ರೆ ಸಾಕು ಅಷ್ಟು ದೊಡ್ಡ ಸಿಟೀಲಿ ಆ ಹಣ ಎಲ್ಲಿಗೆ ಸಾಕಾಗುತ್ತೆ? ನನ್ ಖರ್ಚಿಗೇ ಸಾಕಾಗಲ್ಲ, ನಿನಗೆಲ್ಲಿಂದ ಕೊಡ್ಲಿ ಸುಮ್ನಿರು ಅಂತಾಳಂತೆ. ಕರೆ ಮಾಡಿದ್ರೆ ಬಿಜಿ ಇದ್ದೀನಿ, ಎಷ್ಟು ಸಲ ಹೇಳ್ಬೇಕು ಗೊತ್ತಾಗಲ್ವಾ? ಅಂತ ಇಟ್ ಬಿಡ್ತಾಳಂತೆ ಪಾಪ. ಆ ಯಮ್ಮ ಈ ವಯಸ್ಸಲ್ಲೂ ಮನೆ ಕೆಲಸಕ್ಕೆ ಹೋಗ್ತಾರೆ, ಬಾಡಿಗೆ ಕಟ್ಲಿಕ್ಕೂ ಕಷ್ಟ ಅಂತಿದ್ರು. ಆರೋಗ್ಯ ಬೇರೆ ಸರಿ ಇಲ್ಲ ಗೊಳೋ ಅಂತಾರೆ. ಹೆತ್ತು ಹೊತ್ತು ಕಷ್ಟಪಟ್ಟು ಬೆಳೆಸಿದ್ ಮಕ್ಳು ಹೀಗೆ ಮಾಡಿದ್ರೆ ಯೋಚನೆ ಮಾಡ್ರಿ ಸಂಬಂಧಗಳಿಗೆ ಬೆಲೆ ಎಲ್ಲಿದೆ’ಅಂತಾ ಇದ್ರು, ಇದನ್ನು ಕೇಳಿ ಮನಸ್ಸಿಗೆ ಒಂಥರಾ ಅನಿಸಿತ್ತು. ಗಂಡು ಮಕ್ಕಳು ಮಾತ್ರ ಹೀಗಿರ್ತಾರೆ ಅಂದ್ಕೊಂಡಿದ್ದೆ. ಹೆಣ್ಮಕ್ಕಳೂ ಅಂತ ಅರಗಿಸಿಕೊಳ್ಳೋದು ಕಷ್ಟವಾಯ್ತು.

  ಎಷ್ಟೋ ಸಲ ಇಂಥ ಪರಿಸ್ಥಿತಿ ನೋಡ್ತಾನೆ ಇರ್ತೀವಿ. ಆದ್ರೂ ಏನೂ ಮಾಡಲಾಗದು. ಈ ರೀತಿಯ ಸನ್ನಿವೇಶಗಳನ್ನು ನೋಡಿದಾಗ ಎಲ್ಲರ ಮನಸ್ಸಿಗೆ ಬರುವುದು ಅವರು ಬೆಳೆದು ಬಂದ ಪರಿಸರ ಹಾಗಿರಬಹುದು ಎಂದು. ಇದು ಖಂಡಿತ ತಪ್ಪು. ಸತ್ಯ ಅಂದರೆ ಅವರು ಹಾಲಿ ಇರುವ ಪರಿಸರವೂ ಕಾರಣ ಇರಬಹುದು ಅಲ್ವೇ? ಹಣದ ಕಷ್ಟದ ಅರಿವಿಲ್ಲದವರ ಗೆಳೆತನವೂ ಕಾರಣವಿರಬಹುದು. ಎಲ್ಲರೂ ಮಸ್ತಿ ಮಾಡುವಾಗ, ನಮ್ಮನ್ನೂ ಕರೆಯುವಾಗ ಹೋಗಿಲ್ಲವೆಂದ್ರೆ ಏನಂದುಕೊಂಡಾರು, ಕೀಳಾಗಿ ನೋಡಬಹುದು ಎಂಬ ಭಾವನೆ ಒಂದೆಡೆಯಾದರೆ, ನಾನು ಅವರಿಗಿಂತೇನು ಕಡಿಮೆಯಿಲ್ಲ, ನಾನೂ ದುಡಿತೀನಿ, ಖರ್ಚು ಮಾಡ್ತೀನಿ ಎಂಬ ಯೋಚನೆ ಇರಬಹುದು.

  ಇಲ್ಲವೇ ಮೊದಲೇ ಹೇಳಿದಂತೆ ದುಡಿಯೋ ದ್ಯಾಕೆ ಹೊಟ್ಟೆ- ಬಟ್ಟೆಗಾಗಿ ಎಂದು ತಮ್ಮ ನಂಬಿದವರ ಬಗ್ಗೆ ಯೋಚಿಸದೆ ತಮ್ಮ ಮೂಗಿನ ನೇರಕ್ಕಷ್ಟೇ ಚಿಂತಿಸುವುದೂ ಒಂದು ಕಾರಣವಿರಬಹುದು. ಆದರೆ ಒಂದು ಮಾತಂತೂ ಸತ್ಯ. ಇತರರನ್ನು ನೋಡಿ ಅವರಿವರು ಏನೋ ಹೇಳುತ್ತಾರೆಂಬ ಮನೋಭಾವ ಬೆಳೆಸಿಕೊಂಡು ನಮ್ಮ ಶಕ್ತಿ ಮೀರಿ ನಾವು ಅವರಂತೆ ಇರಬೇಕು ಅವರಿಗಿಂತ ಕಡಿಮೆಯೇನಿಲ್ಲ ಎಂದು ಮಿತಿ ಮೀರಿ ಪ್ರಯತ್ನಿಸಿದರೆ ತೊಂದರೆ ನಮಗಲ್ಲದೆ ಪರರಿಗಲ್ಲ.

  ಇದನ್ನು ನೆನಪಿಡೋಣ

  ನಮ್ಮ ಬದುಕು ನಮ್ಮದು. ಸಮಾಜ ಏನೋ ಹೇಳುತ್ತೆ, ಜನ ಏನೋ ಹೇಳ್ತಾರೆ ಎಂದು ತಪ್ಪು ನಿರ್ಧಾರ ತೆಗೆದುಕೊಳ್ಳಬಾರದು. ಮನೆಯವರನ್ನು ದೂರಮಾಡಿ ಮೋಜು ಮಸ್ತಿಯಲ್ಲಿ ತಲ್ಲೀನರಾಗಿ ಮುಂದೊಮ್ಮೆ ಕೊರಗಿ ಪಶ್ಚಾತ್ತಾಪ ಪಟ್ಟು ಮಿಂಚಿ ಹೋದ ಸಮಯಕ್ಕೆ ಚಿಂತಿಸುತ್ತಾ, ಮತ್ತೆ ಆ ಸಮಯ ಯಾವಾಗ ಬರುತ್ತದೆಂದು ಚಾತಕ ಪಕ್ಷಿಯಂತೆ ಕಾಯುತ್ತ ಕುಳಿತರೆ ಹೊತ್ತು, ಹೆತ್ತು, ತುತ್ತುಣಿಸಿ ಎತ್ತಿ ಆಡಿಸಿದ ಮಡಿಲ ನಿಸ್ವಾರ್ಥ ಪ್ರೀತಿ, ವಿಶ್ವಾಸ ಮರಳಿ ಸಿಗದು.

  | ಪ್ರೀತು ಗಣೇಶ್  

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts