ಸಮಾನತೆ ಸಾಧಿಸಿದರೆ ಸಂವಿಧಾನಕ್ಕೆ ಗೌರವ

blank

ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯ

ಹುಣಸೂರು : ಸಮಾಜದಲ್ಲಿ ಸಮಾನತೆ ಸಾಧಿಸಿದಲ್ಲಿ ಮಾತ್ರ ಸಂವಿಧಾನಕ್ಕೆ ಗೌರವ ಸಿಗಲು ಸಾಧ್ಯ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.
ಸಮಾಜ ಕಲ್ಯಾಣ ಇಲಾಖೆ ಮತ್ತು ಜ್ಞಾನಜ್ಯೋತಿ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅಸ್ಪಶ್ಯತಾ ನಿವಾರಣಾ ಸಪ್ತಾಹ ತಾಲೂಕು ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಸ್ಪಶ್ಯತೆ ಈ ಸಮಾಜಕ್ಕೆ ಅಂಟಿರುವ ರೋಗವಾಗಿದೆ. ಎಲ್ಲರಿಗೂ ಸಮಾನ ಬದುಕು, ಹಕ್ಕುಗಳನ್ನು ಪ್ರತಿಪಾದಿಸುವ ಮಹತ್ತರ ಸಂವಿಧಾನವನ್ನು ಅಂಬೇಡ್ಕರ್ ನಮಗೆ ನೀಡಿದ್ದಾರೆ. ಅದರ ಪರಿಪಾಲನೆ ನಾವೆಲ್ಲರೂ ಮಾಡುತ್ತಿದ್ದೇವೆ. ಇಷ್ಟಾಗಿಯೂ ನಮ್ಮಲ್ಲಿ ಪರಿಪೂರ್ಣ ಸಮಾನತೆ ಸಾಧಿಸಲು ಆಗುತ್ತಿಲ್ಲ. ಇದಕ್ಕಾಗಿ ಕಾನೂನು ಕಟ್ಟಳೆಗಳು ಸಾಕಷ್ಟಿದ್ದರೂ ಪ್ರತಿ ವ್ಯಕ್ತಿಯ ಮನಸ್ಸು ಪರಿವರ್ತನೆಯಾಗದ ಹೊರತು ಸಮಾನತೆ ಸಾಧಿಸಲು ಸಾಧ್ಯವಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣಬೇಕೆನ್ನುವುದು ಸಂವಿಧಾನದ ಮೂಲ ಆಶಯವಾಗಿರುವಾಗ ಸಮಾನತೆ ಸಾಧಿಸದೇ ಸಂವಿಧಾನಕ್ಕೆ ಗೌರವ ಸಿಗಲು ಸಾಧ್ಯವಿಲ್ಲ. ಹಾಗಾಗಿ ಮನಸ್ಸುಗಳು ಮಾಗಬೇಕಿದೆ. ನಾವು ಮನಸು ಮಾಡಬೇಕಿದೆ ಎಂದರು.
ಹುಣಸೂರಿನಲ್ಲಿ ಪ್ರಜ್ಞಾವಂತಿಕೆ ಇದೆ: ಹುಣಸೂರಿನ ಜನರು ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಆಗಬಹುದಾದ ಸಣ್ಣಪುಟ್ಟ ತಪ್ಪುಒಪ್ಪುಗಳನ್ನು ಎಲ್ಲರೂ ಕುಳಿತು ಚರ್ಚಿಸಿ ಸರಿಪಡಿಸಿಕೊಳ್ಳುತ್ತಾರೆ. ಇಂತಹ ವಾತಾವರಣ ನಿರ್ಮಾಣವಾಗಲು ನಿಮ್ಮಂತಹ ಹೋರಾಟಗಾರ ಸಂಘಟನೆಗಳು ಮತ್ತು ಅದರ ಮುಖಂಡರೇ ಕಾರಣ. ನಿಮ್ಮಲ್ಲಿ ಕಾನೂನಿನ ಅರಿವು ಇದೆ. ಹಾಗಾಗಿ ಸಮಸ್ಯೆಗೆ ಪರಿಹಾರ ಸಿಗುತ್ತಿದೆ. ನೂರಾರು ಕಾನೂನು ಕಟ್ಟಳೆಗಳು ಇರಬಹುದು, ಸಾವಿರಾರು ಅರಿವು ಕಾರ್ಯಕ್ರಮ ಮಾಡಿದರೂ ಮನಪರಿವರ್ತನೆಯಾಗದ ಹೊರತು ಸಮಾನತೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಸೌಹಾರ್ದತೆಯ ಮೂಲಕ ಸಮಾನತ ಸಾಧಿಸಿ ಬಾಳೋಣ ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮಾತನಾಡಿ, ದಲಿತರನ್ನು ಮನುಷ್ಯರೆಂದು ಪರಿಗಣಿಸದ ಹೊರತು ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯವಿಲ್ಲ. ಬರೀ ಕಾನೂನಿನಿಂದ ಸಮಾನತೆ ತರಲು ಅಸ್ಪಶ್ಯತೆ ಹೋಗಲಾಡಿಸಲು ಸಾಧ್ಯವಿಲ್ಲ. ತಾರತಮ್ಯ ಮಾಡುವ ಮನಸ್ಸುಗಳನ್ನು ಪರಿವರ್ತಿಸದ ಹೊರತು ಸಮಸ್ಯೆ ಬದಲಾಗುವುದಿಲ್ಲ. ಇಂತಹ ವೇದಿಕೆಗಳು ಎರಡೂ ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡಬೇಕು. ಜ್ಞಾನವನ್ನು ಹಂಚಿಕೊಳ್ಳಬೇಕು. ತಪ್ಪುಒಪ್ಪುಗಳನ್ನು ಒಪ್ಪಿಕೊಂಡು ಮುಂದುವರೆಯಬೇಕಿದೆ. ಅಸ್ಪಶ್ಯತೆ ಎನ್ನುವ ಕೊಳಕು ಸಮಾಜದಿಂದ ತೊಲಗಿಸಬೇಕಿದೆ. ಹುಣಸೂರಿನಲ್ಲಿ ದಶಕಗಳಿಂದ ಈ ನಿಟ್ಟಿನಲ್ಲಿ ದಲಿತ ಸಂಘಟನೆಗಳು ಸಹಪಂಕ್ತಿಭೋಜನ, ದಲಿತರ ಮನೆಯಲ್ಲಿ ಬಸವಜಯಂತಿ ಮುಂತಾದ ಪ್ರಗತಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಾಜ್ಯಕ್ಕೆ ಮಾದರಿಯಾಗಿವೆ. ನಾವು ಮನುಷ್ಯರೇ, ನಮ್ಮನ್ನು ದ್ವೇಷದಿಂದ ನೋಡುವುದನ್ನು ಬಿಡಬೇಕು. ನಮ್ಮವರೂ ಇತರರನ್ನು ದ್ವೇಷದಿಂದ ಕಾಣುವುದನ್ನು ತ್ಯಜಿಸಬೇಕು. ನಮಗೆ ಸರ್ಕಾರ ಸವಲತ್ತುಗಳನ್ನು ನೀಡದಿದ್ದರೂ ಪರವಾಗಿಲ್ಲ, ಮನುಷ್ಯರಂತೆ ಕಾಣುವಂತಾಗಬೇಕೆಂದು ಆಗ್ರಹಿಸಿದರು.
ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಮುಖ್ಯಸ್ಥ ಹರಿಹರ ಆನಂದಸ್ವಾಮಿ ಮಾತನಾಡಿ, ಅಸ್ಪಶ್ಯತೆ ಎನ್ನುವ ಶತಮಾನದ ಕೊಳೆ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಅದಿನ್ನೂ ಕೊಳೆತ ಸ್ಥಿತಿಯಲ್ಲಿ ನಮ್ಮ ಸಮಾಜದಲ್ಲಿ ಕಾಣಿಸುತ್ತಿದ್ದು, ಅದನ್ನು ಯಾವುದೇ ಗಂಧದ್ರವ್ಯದಿಂದ ತೊಳೆಯಲು ಸಾಧ್ಯವಿಲ್ಲ. ಪರಿಹಾರವೆಂದರೆ ಬುದ್ಧನ ಮಧ್ಯಮ ಮಾರ್ಗ ಅನುಸರಣೆ ಒಂದೇ ಆಗಿದೆ ಎಂದರು.
ಸಭೆಯಲ್ಲಿ ವಕೀಲೆ ಪವಿತ್ರಾ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ 1989 ಕಾಯ್ದೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ನಗರಸಭಾಧ್ಯಕ್ಷ ಎಸ್.ಶರವಣ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ವುುಖಂಡರಾದ ನಾಗರಾಜ ಮಲ್ಲಾಡಿ, ಡಿ.ಕುಮಾರ್, ಮೋದೂರು ಮಹೇಶಾರಾಧ್ಯ, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಪಂಗಡಗಳ ಉಸ್ತುವಾರಿ ಮತ್ತು ಜಾಗೃತಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ಬಲ್ಲೇನಹಳ್ಳಿ ಕೆಂಪರಾಜು, ಅತ್ತಿಕುಪ್ಪೆ ರಾಮಕೃಷ್ಣ, ಪುಟ್ಟರಾಜು, ಗ್ಯಾರಂಟಿ ಯೋಜನೆ ತಾಲೂಕು ಉಸ್ತುವಾರಿ ರಾಘು, ತಹಸೀಲ್ದಾರ್ ಜೆ,ಮಂಜುನಾಥ್, ಇಒ ಕೆ.ಹೊಂಗಯ್ಯ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಅಶೋಕ್‌ಕುಮಾರ್ ಇತರರು ಹಾಜರಿದ್ದರು.

Share This Article

ನಿಮ್ಮ ಕನಸಿನಲ್ಲಿ ಗಿಳಿ, ಗೂಬೆ, ನವಿಲು ಕಾಣಿಸಿಕೊಂಡಿದ್ಯಾ? ಈ ಪಕ್ಷಿಗಳಿಂದ ಬರಲಿದ್ಯಾ ಅದೃಷ್ಟ.. dreams

dreams: ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಕನಸುಗಳು ಬಹಳ ಮುಖ್ಯ. ಕನಸಿನಲ್ಲಿ ಗಿಳಿ, ಗೂಬೆ, ನವಿಲು ಮುಂತಾದ…

ಪ್ರತಿದಿನ ಊಟಕ್ಕೆ ಗರಿಗರಿ ಹಪ್ಪಳ ಬೇಕಾ? ಹಾಗಿದ್ರೆ ಆರೋಗ್ಯ ಬಗ್ಗೆ ಇರಲಿ ಎಚ್ಚರ..papad

papad: ಹಪ್ಪಳಗಳನ್ನು ಊಟದಲ್ಲಿ ರುಚಿ ಇರಲಿ ಎಂಬ ಕಾರಣಕ್ಕೆ ಬಳಸುತ್ತಾರೆ. ಹಾಗಾಗಿ ಊಟಕ್ಕೆ ರುಚಿ ಇದೆ…

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…