ಅನಿಶ್ಚಿತತೆಯ 2ನೇ ಅಧ್ಯಾಯ!

ಬೆಂಗಳೂರು: ‘ನೀವು ನಿಶ್ಚಿಂತೆಯಿಂದಿರಿ ನಾವು ಸರ್ಕಾರ ಅಸ್ಥಿರಗೊಳಿಸಲ್ಲ’ ಎಂಬ ಬಿಜೆಪಿ ಹೇಳಿಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಲ್ಲಿ ಮತ್ತೊಂದಿಷ್ಟು ಗೊಂದಲ ಹುಟ್ಟುಹಾಕಿದೆ. ಈ ಮೂಲಕ ಸರ್ಕಾರದ ಅನಿಶ್ಚಿತತೆಯ ಎರಡನೇ ಅಧ್ಯಾಯ ತೆರೆದುಕೊಂಡಿದೆ.

ತಮ್ಮೊಳಗಿನ ‘ಅಭ್ರಕಗಳು’ ಯಾರೆಂಬುದನ್ನು ಕಂಡುಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್ ನಾಯಕರಿಗೆ ರೆಸಾರ್ಟ್ ತಂತ್ರ ಮುಂದುವರಿಸುವ ಇಚ್ಚೆ ಇತ್ತಾದರೂ, ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗಬಹುದೆಂಬ ಕಾರಣಕ್ಕೆ ಭಾನುವಾರವೇ ಎಲ್ಲ ಶಾಸಕರನ್ನು ಮುಕ್ತಗೊಳಿಸಲು ನಿರ್ಧರಿಸಿದ್ದಾರೆ.

ಆದರೆ, ಅಸಮಾಧಾನಿತ ಶಾಸಕರೊಂದಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇರಾನೇರ ಚರ್ಚೆ ನಡೆಸಿ ಕೌನ್ಸೆಲಿಂಗ್ ನಡೆಸಿದ ಬಳಿಕವಷ್ಟೇ ಅವರನ್ನು ರೆಸಾರ್ಟ್​ನಿಂದ ಮುಕ್ತಗೊಳಿಸಲಾಗುತ್ತದೆ.

ಲೋಕಸಭಾ ಚುನಾವಣೆ ವಿಚಾರವಾಗಿ ಈ ಮುಖಾಮುಖಿ ಸಭೆ ನಡೆಸಿದರೂ, ಶಾಸಕರ ಅಹವಾಲನ್ನು ಆಲಿಸಲಾಗುತ್ತದೆ. ಸರ್ಕಾರದ ಮೇಲೆ ಬೇಸರವೇಕೆ ಎಂಬುದನ್ನು ಕಂಡುಕೊಂಡು ನೇರ ಬಗೆಹರಿಸಲು ವೇಣು ಪ್ರಯತ್ನಿಸಲಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿ ಹಂತದಲ್ಲಿ ಬಗೆಹರಿಯುವ ವಿಚಾರವಾದರೆ ತಾವೇ ಖುದ್ದು ಮಾತನಾಡಲಿದ್ದಾರೆ. ಪ್ರಮುಖವಾಗಿ ವರ್ಗಾವಣೆ ಹಾಗೂ ಅನುದಾನ ವಿಚಾರದಲ್ಲಿ ಶಾಸಕರು ಆಕ್ಷೇಪ ಎತ್ತಿದರೆ ಆ ಸಮಸ್ಯೆ ಬಗೆಹರಿಸುವ ಮೂಲಕ ಶಾಸಕರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸರ್ಕಾರಕ್ಕೆ ಹೊಸ ತಲೆಶೂಲೆ?

ಕಾಂಗ್ರೆಸ್ ಹಿರಿಯ ನಾಯಕರ ಪ್ರಕಾರ ಸರ್ಕಾರ ಇನ್ನೂ ಸೇಫ್ ಆಗಿಲ್ಲ. ಗೊಂದಲ ಪೂರ್ಣ ಪ್ರಮಾಣದಲ್ಲಿ ಬಗೆಹರಿದಂತೆ ಕಾಣುತ್ತಿಲ್ಲ. ಪರಿಸ್ಥಿತಿ ತಿಳಿಯಾಗಲು ಇನ್ನಷ್ಟು ಸಮಯ ಬೇಕಾಗಬಹುದು ಎಂದು ಹಿರಿಯ ಮುಖಂಡರೊಬ್ಬರು ವಿಜಯವಾಣಿಗೆ ತಿಳಿಸಿದರು. ಅವರೇ ಹೇಳುವ ಲೆಕ್ಕಾಚಾರದಂತೆ, ಈಗಾಗಲೇ ನಾಲ್ಕು ಶಾಸಕರು ಬಿಜೆಪಿ ಸಂಪರ್ಕಕ್ಕೆ ಸಿಕ್ಕಿರುವುದರಿಂದ, ಸರ್ಕಾರ ಅಲ್ಪಮತಕ್ಕೆ ಕುಸಿಯುವಂತೆ ಮಾಡಲು ಬಿಜೆಪಿಗೆ ಇನ್ನು ಮೂರು ಅಥವಾ ನಾಲ್ಕು ಶಾಸಕರನ್ನು ಸೆಳೆದರೆ ಸಾಕು. ಅದು ಕಷ್ಟವಾಗಲಿಕ್ಕಿಲ್ಲ. 7-8 ಶಾಸಕರು ರಾಜೀನಾಮೆ ನೀಡಿದರೆ ರಾಜ್ಯಪಾಲರ ಮುಂದೆ ಸರ್ಕಾರದ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸುವ ಅವಕಾಶವಿದೆ. ಇವರ ಹೇಳಿಕೆ ಆಧಾರದಲ್ಲಿ ಬಹುಮತ ಸಾಬೀತಿಗೆ ರಾಜ್ಯಪಾಲರು ಸೂಚನೆ ಕೊಡಬಹುದು. ಹೀಗಾದರೆ ಮತ್ತೆ ಗೊಂದಲ ಮುಂದುವರಿಯಲಿದೆ. ಸೆಕ್ಷನ್ 10ರ ಪ್ರಕಾರ ದೂರುಕೊಟ್ಟು ಶಾಸಕತ್ವ ರದ್ದು ಮಾಡಿದರೆ ಅದು ಈ ಅವಧಿಗೆ ಮಾತ್ರ ಸೀಮಿತವಾಗಲಿದೆ. ಅಲ್ಲದೆ, ತಮ್ಮ ಕ್ಷೇತ್ರದಲ್ಲಿ ಪಕ್ಷದಿಂದ ಇನ್ನೊಬ್ಬರಿಗೆ ಟಿಕೆಟ್ ಸಿಕ್ಕರೆ ಎಂಬ ಭಯವೂ ಅತೃಪ್ತ ಶಾಸಕರನ್ನು ಕಾಡುತ್ತಿದೆ.

ಅಧಿವೇಶನ ನಿಗದಿ ಅನಿಶ್ಚಿತತೆ

ಜನವರಿ 10ರಂದು ನಡೆದ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ವನದಂತೆ ವಿಧಾನ ಮಂಡಲದ ಜಂಟಿ ಅಧಿವೇಶನದ ದಿನಾಂಕ ನಿಗದಿ ಜವಾಬ್ದಾರಿಯನ್ನು ಮುಖ್ಯಮಂತ್ರಿಗೆ ವಹಿಸಲಾಗಿತ್ತು. ಬದಲಾದ ರಾಜಕೀಯ ಬೆಳವಣಿಗೆ ಕಾರಣಕ್ಕೆ ಈವರೆಗೆ ಅಧಿವೇಶನ ದಿನಾಂಕ ನಿಗದಿ ಮಾಡಲು ಸಾಧ್ಯವಾಗಿಲ್ಲ. ಒಂದು ವೇಳೆ ಅಧಿವೇಶನ ಕರೆದ ಸಂದರ್ಭದಲ್ಲಿಯೇ ಹೈಡ್ರಾಮಗಳು ನಡೆದರೆ ಕಷ್ಟವಾಗಬಹುದೆಂಬ ಕಾರಣಕ್ಕೆ ದಿನಾಂಕ ನಿಶ್ಚಯದಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ.

ಸಿನಿಮಾ ಟೀಸರ್ ಬಿಡುಗಡೆಯಲ್ಲಿ ಸಿಎಂ

ಸರ್ಕಾರದ ಅಸ್ಥಿರತೆ ಮುಂದುವರಿದಿರುವಾಗಲೇ ಮೈಸೂರಿನಲ್ಲಿ ಶನಿವಾರ ಪುತ್ರನ ಹೊಸ ಚಲನಚಿತ್ರದ ಬಗ್ಗೆ ಸಿಎಂ ಹೆಚ್ಚು ತಲೆಕೆಡಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ತಮಗೆ ಆತಂಕವಿಲ್ಲ ಎಂಬ ಸಂದೇಶವನ್ನು ಜನತೆಗೆ ಕಳಿಸುವ ಉದ್ದೇಶವೋ ಅಥವಾ ಈ ಜಂಜಡದಿಂದ ಕೊಂಚ ದೂರ ಇರುವ ಉದ್ದೇಶವೋ ಎಂಬುದು ತಿಳಿಯುತ್ತಿಲ್ಲ.

ಏಡಿಗಳನ್ನು ತಟ್ಟೆಯಲ್ಲಿ ಹಾಕಿದರೆ ಪರಸ್ಪರ ಕೈ-ಕಾಲು ಎಳೆಯುವ ರೀತಿ ಕಾಂಗ್ರೆಸ್ ಕಚ್ಚಾಟವಿದೆ. ಸಿಎಂ ಆಗಿ ಕುಮಾರಸ್ವಾಮಿಗೆ ಕೆಲಸ ಮಾಡಲಾಗುತ್ತಿ್ತ್ಲ ಸಿದ್ದರಾಮಯ್ಯ ಹಿಂಬಾಲಕರನ್ನು ಬಿಟ್ಟು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

| ಡಿ.ವಿ.ಸದಾನಂದ ಗೌಡ ಕೇಂದ್ರ ಸಚಿವ

ರಮೇಶ್ ಜಾರಕಿಹೊಳಿ ಆರಂಭದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು. ಬಿಜೆಪಿ ನಾಯಕರು ಬ್ರೖೆನ್ ವಾಶ್ ಮಾಡಿದ್ದಾರೆ. ಸಿಎಲ್​ಪಿಗೆ ಗೈರಾದವರು ನೋಟಿಸ್​ಗೆ ಉತ್ತರಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು.

| ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ

ನೀವೂ ಬರ ಪ್ರವಾಸ ಕೈಗೊಳ್ಳಿ

ಬೆಂಗಳೂರು/ರಾಮನಗರ: ಬಿಜೆಪಿಯವರು ರೆಸಾರ್ಟ್ ವಾಸ ಮರೆಮಾಚಲು ಬರ ಪ್ರವಾಸ ಹೊರಟಿದ್ದಾರೆ. ಅವರು ಕ್ಷೇತ್ರಕ್ಕೆ ಬರುವ ಮುನ್ನ ನಿಮ್ಮ ಕ್ಷೇತ್ರಗಳಲ್ಲಿ ಸುತ್ತಾಡಿ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶಾಸಕರಿಗೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳಿಗೆ ಸಂಬಂಧಿಸಿ ಹಲವು ವಿಚಾರಗಳು ಚರ್ಚೆಗೆ ಬಂದವು. ಪ್ರಸ್ತುತ ರಾಜಕೀಯ ಸನ್ನಿವೇಶ, ಮೈತ್ರಿ ಸರ್ಕಾರದ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಶಯ, ಬಿಜೆಪಿಯ ರಾಜಕೀಯ ಚಟುವಟಿಕೆ ಬಗ್ಗೆ ಮುಖಂಡರು ಮಾತನಾಡಿದರು. ಪಕ್ಷ ಅಶಿಸ್ತನ್ನು ಸಹಿಸಲ್ಲ. ಇತ್ತೀಚಿನ ಬೆಳವಣಿಗೆ ಪಕ್ಷಕ್ಕೆ ಮುಜುಗರ ತಂದಿದೆ. ಯಾರು ಮುಜುಗರ ಉಂಟುಮಾಡುತ್ತಾರೋ ಅವರ ಮೇಲೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುತ್ತದೆ. ನಿಮ್ಮ ಸಮಸ್ಯೆಗಳಿದ್ದರೆ ಮುಕ್ತವಾಗಿ ತಿಳಿಸಿ, ಬಿಜೆಪಿಗೆ ಹೋಗುವುದರಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ. ಸೂಕ್ತ ಸಂದರ್ಭದಲ್ಲಿ ಅವಕಾಶ ಸಿಗಲಿದೆ. ಒಂದು ವೇಳೆ ಅವಕಾಶಕ್ಕಾಗಿ ಬಿಜೆಪಿಗೆ ಜಿಗಿದರೆ ಅದು ಮೂರ್ಖತನವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಬೆಳಗ್ಗೆ 12.30ಕ್ಕೆ ಶಾಸಕಾಂಗ ಪಕ್ಷದ ಸಭೆ ನಡೆಸಲಾಗುತ್ತದೆ ಎಂದು ಹೇಳಲಾಗಿತ್ತು, ಬಳಿಕ 3.30ಕ್ಕೆ ಎಂಬ ಸಂದೇಶ ಬಂತು, 4.30 ಕಳೆದರೂ ನಾಯಕರ ಸುಳಿವು ಇರಲಿಲ್ಲ. ಇದರಿಂದ ರೆಸಾರ್ಟ್ ಒಳಗಿದ್ದ ಶಾಸಕರೆಲ್ಲ ರೋಸಿಹೋಗಿದ್ದರು. ಅಂತಿಮವಾಗಿ ಸಭೆ ಆರಂಭವಾದಾಗ ಸಂಜೆ 6 ಗಂಟೆ ದಾಟಿತ್ತು. ಸಂಸದರು, ವಿಧಾನಪರಿಷತ್ ಸದಸ್ಯರು ಸೇರಿ 50 ಮಂದಿ ಉಪಸ್ಥಿತರಿದ್ದರು.

ಕಾಂಗ್ರೆಸ್​ನ ಎಲ್ಲ ಶಾಸಕರು ಒಟ್ಟಾಗಿ ಗೊಂದಲಗಳಿಗೆ ಪರಿಹಾರ ಹುಡುಕಲು ಪ್ರಯತ್ನಿಸಿದ್ದೇವೆಯೇ ಹೊರತು ರೆಸಾರ್ಟ್ ರಾಜಕಾರಣ ಮಾಡಿಲ್ಲ. ಸಿಎಲ್​ಪಿಗೆ ಹಾಜರಾಗದ ನಾಗೇಂದ್ರ ಹಾಗೂ ಉಮೇಶ್ ಜಾಧವ್ ಮೇಲೆ ವರಿಷ್ಠರು ಕ್ರಮ ಜರುಗಿಸುತ್ತಾರೆ.

| ಯು.ಟಿ.ಖಾದರ್ ಸಚಿವ

ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಸಾವಿರಾರು ತಾಯಂದಿರು ಬೆಂಗಳೂರಿಗೆ ಕಾಲ್ನಡಿಗೆ ಹೊರಟಿದ್ದರೆ, ಆ ಪುಣ್ಯಾತ್ಮರೆಲ್ಲ ರೆಸಾರ್ಟ್​ನಲ್ಲಿದ್ದಾರೆ.

| ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ