ಜೆಡಿಎಸ್​ಗೆ ರೆಸಾರ್ಟ್ ರಾಜಕೀಯ ಅನಿವಾರ್ಯವಲ್ಲ: ಎಚ್‌.ಡಿ. ಕುಮಾರಸ್ವಾಮಿ

ಮೈಸೂರು: ರೆಸಾರ್ಟ್‌ಗೆ ಶಾಸಕರನ್ನು ಕರೆದುಕೊಂಡು ಹೋಗುವ ಪರಿಸ್ಥಿತಿ ಜೆಡಿಎಸ್‌ಗೆ ಇಲ್ಲ. ಬಿಜೆಪಿಯವರು‌ ಮಾಡಿದ ಗೊಂದಲಕ್ಕಾಗಿ ಕಾಂಗ್ರೆಸ್‌ನವರು ತಮ್ಮ ಶಾಸಕರ ಜತೆ ಮಾತುಕತೆ‌ ನಡೆಸಲು‌ ರೆಸಾರ್ಟ್‌ಗೆ ತೆರಳಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ರೆಸಾರ್ಟ್ ರಾಜಕೀಯ ತಪ್ಪು. ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗಂತ ನಮ್ಮ ಜೆಡಿಎಸ್‌ ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಇಲ್ಲ ಎಂದರು.

ಆಪರೇಷನ್‌ ಮಾಡಬೇಕು‌ ಎಂದು ಬಿಜೆಪಿ ನಿರೀಕ್ಷಿಸುತ್ತಿದೆ. ನಿರೀಕ್ಷೆ ಇದ್ದರೆ ನಮಗೆ ಹೇಳಲಿ. ಆಗ ಮುಂದೆ ನೋಡುತ್ತೇವೆ. ಯಡಿಯೂರಪ್ಪ ತಮ್ಮ ಸರ್ಕಾರ ರಚನೆ‌ ಮಾಡಿದ ಮೇಲೂ ಅಪರೇಷನ್ ಕಮಲ ನಡೆಸಿದರು. ನಾವು ಅಂತಹ ಕೆಲಸಕ್ಕೆ‌ ಮುಂದಾಗುವುದಿಲ್ಲ. ಆ ಅನಿವಾರ್ಯತೆ ನಮಗೆ ಇಲ್ಲ. ಬಿಜೆಪಿ ಸದಾ ಸರ್ಕಾರವನ್ನು ಬೀಳಿಸುವ ಕನಸಿನಲ್ಲೇ ಇದೆ. ಆದರೆ, ಅದ್ಯಾವುದು‌ ಫಲ ಕೊಡುವುದಿಲ್ಲ. ನನ್ನನ್ನು ಮತ್ತು ಸರ್ಕಾರವನ್ನು ಚಾಮುಂಡಿ ತಾಯಿ ರಕ್ಷಿಸುತ್ತಿದ್ದಾಳೆ. ಆ ತಾಯಿಯೇ ಬಿಜೆಪಿಯವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದು ಹೇಳಿದರು.

ಇಂದು ಪಶ್ಚಿಮ ಬಂಗಾಳದಲ್ಲಿ ನಡೆದ ಸಮಾವೇಶ ಐತಿಹಾಸಿಕ ಸಮಾವೇಶ. ಕೇಂದ್ರ ಬಿಜೆಪಿ ಸರ್ಕಾರಕ್ಕೆ ಪರ್ಯಾಯ ಇಲ್ಲ ಅಂದುಕೊಂಡಿದ್ದರು. ಆದರೆ, ಇಂದು‌ ನಡೆದ ಸಮಾವೇಶವನ್ನು ಗಮನಿಸಿದರೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ಇದೆ ಎಂದು ಗೊತ್ತಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ಮೈತ್ರಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಷ್ಟ್ರ‌ ಮಟ್ಟದ ಎಲ್ಲ ನಾಯಕರು‌ ಸೇರಿದ್ದರು. ಆದರೆ, ಆ ನಂತರ ಎಲ್ಲ ನಾಯಕರು ಸಮಾವೇಶಗೊಂಡ ಎರಡನೇ ಕಾರ್ಯಕ್ರಮವಾಗಿತ್ತು. ಒಂದೊಂದು ರಾಜ್ಯದಲ್ಲಿ ಒಂದೊಂದು ರಾಜಕೀಯ ಪರಿಸ್ಥಿತಿ ಇದೆ. ಅದಾಗ್ಯೂ ಈ ಬಾರಿ‌ ಲೋಕಸಭೆಯಲ್ಲಿ ಗೆಲುವು ಸಾಧಿಸುವುದು ಬಿಜೆಪಿಗೆ ಸುಲಭವಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)