ಜಮೀನು ಸಮಸ್ಯೆ ಬಗೆಹರಿಸಿಕೊಡಿ, ಕೆರೆಗಳಿಗೆ ನೀರು ತುಂಬಿಸಿ

ಚಾಮರಾಜನಗರ: ಶಿಕ್ಷಕರಿಗೆ ಸಂಬಳ ಬಂದಿಲ್ಲ, ಜಮೀನಿನ ಸಮಸ್ಯೆ ಬಗೆಹರಿಸಿಕೊಡಿ, ಕೆರೆಗಳಿಗೆ ನೀರು ತುಂಬಿಸಿ, ಪಾರ್ಕಿಂಗ್ ಸಮಸ್ಯೆ ಪರಿಹರಿಸಿ, ಬ್ಯಾಂಕ್‌ನಲ್ಲಿ ಸಾಲ ಕೊಡಿಸಿ, ಮನೆ ಕಟ್ಟಲು ಲೈಸೆನ್ಸ್ ಕೊಡಿಸಿ, ಬಸ್ ನಿಲ್ದಾಣದಲ್ಲಿ ಶೌಚಗೃಹ ಹಾಗೂ ವಿದ್ಯುತ್ ಸಮಸ್ಯೆ ಬಗೆಹರಿಸಿ..!

ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕೇಳಿಬಂದ ದೂರುಗಳಿವು. ಫೋನ್ ಇನ್‌ಗೆ 30 ಜನರು ಕರೆ ಮಾಡಿದರು. ಇದರಲ್ಲಿ 29 ದೂರುಗಳು ದಾಖಲಾದವು.

ಚಾಮರಾಜನಗರ ತಾಲೂಕಿನ ಬಸವಾಪುರ ಗ್ರಾಮದ ಸುಬ್ರಹ್ಮಣ್ಯ ಹಾಗೂ ಹರದನಹಳ್ಳಿ ಗ್ರಾಮದಿಂದ ವ್ಯಕ್ತಿಯೊಬ್ಬರು ಕರೆ ಮಾಡಿ, ಚಿಕ್ಕಹೊಳೆ ಜಲಾಶಯದಿಂದ ಕೆರೆ, ಕಟ್ಟೆಗಳನ್ನು ತುಂಬಿಸಲು ನೀರು ಬಿಡಲಾಗಿದೆ. ಈಗಾಗಲೇ 15 ದಿನ ಮಾತ್ರ ನೀರು ಬಿಡಲಾಗಿದೆ. ಇನ್ನೂ ಕೆಲ ದಿನಗಳು ನೀರು ಬಿಟ್ಟರೆ ಅನುಕೂಲವಾಗುತ್ತದೆ. ಜತೆಗೆ ಕೆಲವರು ಕಾಲುವೆ ಒಡೆದು ಪೈಪ್ ಅಳವಡಿಸಿಕೊಂಡು ತಮ್ಮ ಜಮೀನಿಗೆ ಬಿಟ್ಟುಕೊಂಡಿದ್ದಾರೆ. ಈ ಕುರಿತು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಇದು ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ನಂಜೇದೇವನಪುರ ಗ್ರಾಮದಿಂದ ನಂಜುಂಡಸ್ವಾಮಿ ಕರೆ ಮಾಡಿ, ನಮ್ಮ ಜಮೀನನ್ನು ತಮ್ಮದೆಂದು ಹೇಳಿಕೊಂಡು ಗ್ರಾಮದ ಮರಿಸ್ವಾಮಿ ಎಂಬುವರು ತೊಂದರೆ ಕೊಡುತ್ತಿದ್ದಾರೆ. ಈ ಕುರಿತು ಹಲವು ಬಾರಿ ತಹಸೀಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು. ಈ ಕುರಿತು ತಹಸೀಲ್ದಾರ್ ಅವರಿಂದ ಮಾಹಿತಿ ಪಡೆದು ಸೂಕ್ತ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಯಳಂದೂರಿನಿಂದ ದೊರೆಸ್ವಾಮಿ ಕರೆ ಮಾಡಿ, ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಶೌಚಗೃಹಕ್ಕೆ ಕೆಲ ದಿನಗಳಿಂದ ಬೀಗ ಹಾಕಲಾಗಿದ್ದು , ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಜತೆಗೆ ಬಸ್ ನಿಲ್ದಾಣದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದೇ ರಾತ್ರಿ ವೇಳೆ ಕೂರಲು ತೊಂದರೆಯಾಗುತ್ತದೆ. ಅಲ್ಲದೇ ಕುರ್ಚಿಗಳು ಇಲ್ಲ ಎಂದು ದೂರಿದರು. ಈ ಕುರಿತು ಅಲ್ಲಿನ ಪಪಂ ಮುಖ್ಯಾಧಿಕಾರಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಚಾಮರಾಜನಗರದಿಂದ ಬಸವರಾಜು ಕರೆ ಮಾಡಿ, ಹಳೇ ಎಸ್ಪಿ ಕಚೇರಿಯಿಂದ ನ್ಯಾಯಾಲಯ ರಸ್ತೆಯ ಅಕ್ಕಪಕ್ಕದಲ್ಲಿರುವ ಸರ್ಕಾರಿ ಜಾಗಗಳನ್ನು ಕೆಲವರು ಇ-ಸ್ವತ್ತು ಮಾಡಿ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಹಲವು ಬಾರಿ ದೂರು ನೀಡಲಾಗಿದೆ. ಕೂಡಲೇ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು. ಈ ಕುರಿತು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಸಂತೇಮರಹಳ್ಳಿಯಿಂದ ಶಿವಶಂಕರ್ ಕರೆ ಮಾಡಿ, ನನ್ನ ಜಮೀನಿನಲ್ಲಿ ಬೆಳೆದಿರುವ ಬಾಳೆಗೆ ಕಳೆದ 4 ವರ್ಷಗಳ ಹಿಂದೆ ಹನಿ ನೀರಾವರಿಯನ್ನು ಅಳವಡಿಸಿಕೊಂಡಿದ್ದು, ಇಲ್ಲಿಯ ತನಕ ಕೃಷಿ ಇಲಾಖೆಯಿಂದ ನನಗೆ ಹಣ ಸಂದಾಯವಾಗಿಲ್ಲ ಎಂದು ಅಳಲು ತೋಡಿಕೊಂಡರು.

ಹನೂರು ತಾಲೂಕಿನ ಕೌದಳ್ಳಿಯಿಂದ ಮಹದೇವ ಎಂಬುವರು ಕರೆ ಮಾಡಿ, ವಿವಿಧ ನಿಗಮಗಳಡಿ ಸಾಲ ಸೌಲಭ್ಯಕ್ಕೆ ಆಯ್ಕೆಯಾ ಗಿರುವ ಫಲಾನುಭವಿಗಳಿಗೆ ಇಲ್ಲಿನ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ ಸಾಲ ನೀಡುತ್ತಿಲ್ಲ. ಜತೆಗೆ ಫಸಲ್ ಬಿಮಾ ಯೋಜನೆಯಡಿ ಹಣ ಕಟ್ಟಿಸಿಕೊಳ್ಳುತ್ತಿಲ್ಲ ಎಂದು ದೂರಿದರು. ಇದಕ್ಕೆ ಜಿಲ್ಲಾಧಿಕಾರಿ ಉತ್ತರಿಸಿ, ಈ ಕುರಿತು ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಜತೆ ಮಾತನಾಡಿ ಸಾಲ ಸೌಲಭ್ಯ ನೀಡಲು ಹಾಗೂ ಫಸಲ್ ಬಿಮಾ ವಿಮೆಯನ್ನು ಕಟ್ಟಿಸಿಕೊಳ್ಳಲು ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.

ಯಳಂದೂರಿನಿಂದ ರತ್ನಮ್ಮ ಎಂಬುವರು ಕರೆ ಮಾಡಿ, ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲು ಪಟ್ಟಣ ಪಂಚಾಯಿತಿ ಲೈಸೆನ್ಸ್ ಕೊಡುತ್ತಿಲ್ಲ. ಅಗತ್ಯ ದಾಖಲೆಗಳನ್ನು ಕೊಟ್ಟರೂ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ. ಕೂಡಲೇ ನನಗೆ ಕಟ್ಟಡ ನಿರ್ಮಿಸಲು ಲೈಸೆನ್ಸ್ ಕೊಡಿಸಿ ಎಂದು ಮನವಿ ಮಾಡಿದರು. ಈ ಕುರಿತು ಅಲ್ಲಿನ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಗುಂಡ್ಲುಪೇಟೆಯಿಂದ ಶಿಕ್ಷಕ ಕಿರಣ್ ಕರೆ ಮಾಡಿ, ತಾಲೂಕಿನ 19 ಪ್ರೌಢಶಾಲೆಗಳ 180 ಶಿಕ್ಷಕರಿಗೆ 3 ತಿಂಗಳಿಂದಲೂ ಸಂಬಳ ಆಗಿಲ್ಲ. ಇದರಿಂದ ನಮಗೆ ಸಮಸ್ಯೆ ಆಗುತ್ತಿದ್ದು, ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಇದು ರಾಜ್ಯದ ಸಮಸ್ಯೆಯಾಗಿದ್ದು , ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.

ಚಾಮರಾಜನಗರದಿಂದ ಬಾಲಸುಬ್ರಹ್ಮಣ್ಯ ಕರೆ ಮಾಡಿ, ನಗರದ ಭ್ರಮರಾಂಬ ಬಡಾವಣೆಯ ಕೆಲವು ಕಡೆಗಳಲ್ಲಿ ರಸ್ತೆ ಪಕ್ಕ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಬಡಾವಣೆಯಲ್ಲಿ ಹೊಸ ಬಾರ್ ತೆರೆಯುವ ಕುರಿತು ಮಾಹಿತಿ ಇದ್ದು, ಯಾವುದೇ ಕಾರಣಕ್ಕೂ ಹೊಸ ಬಾರ್ ಆರಂಭಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಉಪವಿಭಾಗಾಧಿಕಾರಿ ನಿಖಿತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.