ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ: ನ್ಯಾಯಾಧೀಶರ ರಾಜೀನಾಮೆ ತಿರಸ್ಕಾರ

ನವದೆಹಲಿ: 11 ವರ್ಷದ ಹಿಂದಿನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಸಲ್ಲಿಸಿದ್ದ ರಾಜೀನಾಮೆಯನ್ನು ನಿರಾಕರಿಸಲಾಗಿದೆ.

ನ್ಯಾಯಾಧೀಶ ರವೀಂದ್ರ ರೆಡ್ಡಿ ಅವರು ಸೋಮವಾರ ತೀರ್ಪು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ಸಲ್ಲಿಸಿ ಎಲ್ಲರನ್ನು ದಿಗ್ಭ್ರಮೆ ಮೂಡಿಸಿದ್ದರು. ಆದರೆ, ಇದೀಗ ರಾಜೀನಾಮೆಯನ್ನು ತಿರಸ್ಕರಿಸಲಾಗಿದ್ದು, ರಜೆಯನ್ನು ಅಂತ್ಯಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಹೇಳಲಾಗಿದೆ.

ನ್ಯಾಯಾಧೀಶರು ರಾಜೀನಾಮೆ ಸಲ್ಲಿಸಿದ್ದ ಬಳಿಕ 15 ದಿನಗಳ ರಜೆಯನ್ನು ಕೇಳಿದ್ದರು. ಆದರೆ, ಅದನ್ನು ನಿರಾಕರಿಸಲಾಗಿತ್ತು.

ಪ್ರಕರಣದಲ್ಲಿ ಸನ್ಯಾಸಿ ಮತ್ತು ಆರ್‌ಎಸ್‌ಎಸ್‌ನ ಮಾಜಿ ಸದಸ್ಯ ಆಸೀಮಾನಂದ ಸೇರಿದಂತೆ ಇತರೆ 9 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಆದರೆ, ರಾಷ್ಟ್ರೀಯ ತನಿಖಾ ದಳವು ಪ್ರಕರಣದಲ್ಲಿ ಸಾಕ್ಷ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದು, ಪ್ರಕರಣದಲ್ಲಿ ಆರೋಪಿಗಳಾಗಿದ್ದ ಐವರನ್ನು ಕೋರ್ಟ್‌ ಖುಲಾಸೆಗೊಳಿಸಿ ತೀರ್ಪು ನೀಡಿತ್ತು.

ಎನ್ಐಎಗೆ ಕುರುಡು, ಕಿವುಡು: ಓವೈಸಿ

ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ತನಿಖೆಯನ್ನು ಎನ್ಐಎ ದಾರಿ ತಪ್ಪಿಸಿದೆ. ಎನ್ಐಎಗೆ ಕುರುಡು, ಕಿವುಡು ಎಂದು ಎಂದು ಎಂಐಎಂ ಶಾಸಕ ಅಸಾವುದ್ದೀನ್ ಓವೈಸಿ ಲೇವಡಿ ಮಾಡಿದ್ದಾರೆ. 2007 ರ ಸ್ಫೋಟ ಪ್ರಕರಣದ ಸಂತ್ರಸ್ತರ ಕುಟುಂಬದವರು ಸೋಮವಾರ ಬಂದ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾದರೆ ನಾನು ನೆರವು ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *