ಲಕ್ಷ್ಮೇಶ್ವರ: ತಾಲೂಕಿನ ಪಂಚ ಗ್ಯಾರಂಟಿ ಸಮಿತಿಗೆ ನಾಮನಿರ್ದೇಶನಗೊಂಡ 7 ಸದಸ್ಯರು ಏಕಾಏಕಿ ರಾಜೀನಾಮೆ ಸಲ್ಲಿಸಿರುವುದು ತಾಲೂಕಿನ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ, ಆಂತರಿಕ ಗುದ್ದಾಟ ಬಹಿರಂಗವಾದಂತಾಗಿದೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ.
ಆಗಿದ್ದೇನು?:
ತಾಲೂಕಿನ ಪಂಚ ಗ್ಯಾರಂಟಿ ಸಮಿತಿಗೆ ಅಧ್ಯಕ್ಷರಾದವರು ಜಿಲ್ಲಾ ಮಟ್ಟದ ಗ್ಯಾರಂಟಿ ಸಮಿತಿ ಸದಸ್ಯರಾಗಿರಬೇಕು. ಆದರೆ, ತಾಲೂಕಿನ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಜಿಲ್ಲಾ ಸಮಿತಿ ಸದ್ಯಸರಾಗಿರಲಿಲ್ಲ. ಈ ನಿಯಮದಿಂದ ತಮ್ಮ ಅಧ್ಯಕ್ಷ ಸ್ಥಾನಕ್ಕೆ ತೊಂದರೆಯಾಗಬಹುದು ಎಂದರಿತು ಇತ್ತೀಚೆಗೆ ಬೇರೆ ತಾಲೂಕಿನಿಂದ ಜಿಲ್ಲಾ ಸಮಿತಿಯ ಸದಸ್ಯತ್ವ ಪಡೆದುಕೊಂಡಿದ್ದರು ಎನ್ನಲಾಗಿದೆ. ಇದಕ್ಕೆ ಪಕ್ಷದ ಕೆಲ ಮುಖಂಡರ ಕೃಪಾಕಟಾಕ್ಷ ಕಾರಣವಾಗಿರುವುದು ಸಮಿತಿ ಸದಸ್ಯರಲ್ಲಿ ಅಸಮಾಧಾನ ಉಂಟು ಮಾಡಿದ್ದು ರಾಜೀನಾಮೆಗೆ ಕಾರಣವಾಗಿದೆ.
ತಾಲೂಕು ಪಂಚಗ್ಯಾರಂಟಿ ಸಮಿತಿಯಲ್ಲಿ ಒಟ್ಟು 15 ಸದಸ್ಯರಿದ್ದು ಅದರಲ್ಲಿ ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಆರ್. ಕೊಪ್ಪದ, ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಜಯಕ್ಕ ಕಳ್ಳಿ, ಸರ್ಪರಾಜ ಸೂರಣಗಿ, ಕಲ್ಲಪ್ಪ ಗಂಗಣ್ಣವರ, ಸಿದ್ದಲಿಂಗೇಶ ಎಂ ರಗಟಿ, ಎಂ.ಎಸ್. ಪ್ರಭಯ್ಯನಮಠ, ರಾಜು ಕೆರೆಕೊಪ್ಪದ ಜೂ. 9ರಂದು ಗದಗ ಜಿಪಂ ಸಿಇಒ ಭರತ್ ಸಿ.ಎಸ್. ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇವರು ರಾಜ್ಯ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣನವರಿಗೂ ರಾಜೀನಾಮೆ ಪತ್ರ ರವಾನಿಸಿದ್ದಾರೆ.