ಶಿವಮೊಗ್ಗ: ಕ್ಯಾನ್ಸರ್ ಪೀಡಿತ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ಜುಲೈ ಅಂತ್ಯದೊಳಗೆ ಬೆಂಗಳೂರಿನಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳ ವಸತಿ ಶಾಲೆ ತೆರೆಯಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದಡಿ ವಸತಿ ಶಾಲೆ ತೆರೆಯಲು ಯೋಜನೆ ರೂಪಿಸಲಾಗಿದೆ. ಕಿದ್ವಾಯಿ ಆಸ್ಪತ್ರೆ ಸುತ್ತಮುತ್ತ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಜತೆಗೆ ಮಕ್ಕಳು ಉಳಿದುಕೊಂಡು ಚಿಕಿತ್ಸೆ ಜತೆಗೆ ಶಿಕ್ಷಣಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಎನ್‌ಜಿಒ ಒಂದರ ಮೂಲಕ ಸರ್ವೆ ನಡೆಸಲಾಗಿದ್ದು, 3,500ಕ್ಕೂ ಅಧಿಕ ವಿದ್ಯಾರ್ಥಿಗಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅದರಲ್ಲಿ ಆರ್ಥಿಕವಾಗಿ ಸದೃಢವಾಗಿರುವ ಪಾಲಕರ ಮಕ್ಕಳು ಹೊರತುಪಡಿಸಿ ಬಡ ಮತ್ತು ಮಧ್ಯಮ ವರ್ಗದ 1,500 ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ಮತ್ತು ಶಿಕ್ಷಣ ನೀಡುವ ಯೋಜನೆ ಇದಾಗಿದೆ ಎಂದರು.
ಕ್ಯಾನ್ಸರ್ ಪೀಡಿತರಾದ ಬಹಳಷ್ಟು ಮಕ್ಕಳು ಚಿಕಿತ್ಸೆಗಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕ್ಯಾನ್ಸರ್ ಇಂದು ಗುಣಪಡಿಸುವ ಕಾಯಿಲೆ. ಹಾಗಾಗಿ ಮಕ್ಕಳು ಶಿಕ್ಷಣದಿಂದ ವಂಚಿರಾಗಬಾರದೆಂಬ ಕಾರಣಕ್ಕೆ ಈ ಯೋಜನೆ ರೂಪಿಸಲಾಗುತ್ತಿದೆ. ಕ್ಯಾನ್ಸರ್ ಪೀಡಿತ ವಸತಿ ಶಾಲೆಯನ್ನು ಆರಂಭಿಸುವುದಕ್ಕೆ ಹಣಕಾಸಿನ ತೊಂದರೆ ಇಲ್ಲ. ಹಾಗಾಗಿ ವಸತಿ ಶಾಲೆ ತೆರೆಯುವ ವಿಚಾರದಲ್ಲಿ ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಪುನಃ ತಮ್ಮೂರಿನ ಶಾಲೆಗಳಲ್ಲಿ ಆ ಮಕ್ಕಳು ಶಿಕ್ಷಣ ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಸಮೀಪ ಮೂರು ಎಕರೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಕ್ಕಳನ್ನು ಕರೆದೊಯ್ಯಲು ಮಿನಿ ಬಸ್ ವ್ಯವಸ್ಥೆ ಮಾಡಲಾಗುವುದು. ಮೊದಲ ಹಂತದಲ್ಲಿ ಎಸ್‌ಎಸ್‌ಎಲ್‌ಸಿವರೆಗಿನ ಮಕ್ಕಳಿಗೆ ಚಿಕಿತ್ಸೆ ಮತ್ತು ಶಿಕ್ಷಣ ನೀಡಲಾಗುವುದು. ಆನಂತರ ವ್ಯವಸ್ಥೆ ನೋಡಿಕೊಂಡು ಪಿಯುಸಿ ಅಥವಾ ಅದಕ್ಕೂ ಮೇಲ್ಪಟ್ಟವರನ್ನು ಪರಿಗಣಿಸಲಾಗುವುದು ಎಂದು ಹೇಳಿದರು.