ವಸತಿ ಶಾಲೆಯ 34 ವಿದ್ಯಾರ್ಥಿನಿಯರ ಮೇಲೆ ಸ್ಥಳೀಯರಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

ಪಟನಾ: ಕಿರುಕುಳ ನೀಡುತ್ತಿದ್ದ ಹುಡುಗರಿಂದ ರಕ್ಷಿಸಿಕೊಳ್ಳಲು ಯತ್ನಿಸಿದ ವಸತಿ ಶಾಲೆಯ 34 ಬಾಲಕಿಯರ ಮೇಲೆ ಸ್ಥಳೀಯರ ಗುಂಪು ಹಲ್ಲೆ ನಡೆಸಿದ್ದು, ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಸ್ತೂರ ಬಾ ವಸತಿ ಶಾಲೆಗೆ ನುಗ್ಗಿದ ಬಾಲಕರ ಗುಂಪನ್ನು ಅಲ್ಲಿನ ಕೆಲವು ವಿದ್ಯಾರ್ಥಿಗಳು ಹಿಡಿದು ಇಲ್ಲಿಂದ ಹೊರಹೋಗಲು ಹೇಳಿದರು. ಆದರೆ ಆ ಬಾಲಕರು ಅಲ್ಲಿನ ವಿದ್ಯಾರ್ಥಿನಿಯರ ಜತೆ ಕೆಟ್ಟದಾಗಿ ವರ್ತಿಸಿದರು. ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಆ ಬಾಲಕಿಯರು ಹುಡುಗರಿಗೆ ಹೊಡೆದರು.

ಅಲ್ಲಿಂದ ತೆರಳಿದ ಹುಡುಗರ ಗುಂಪು ಮತ್ತೆ ತಮ್ಮಪಾಲಕರು, ಸಂಬಂಧಿಕರ ಜತೆ ವಸತಿ ಶಾಲೆಗೆ ಆಗಮಿಸಿ ಕ್ಯಾಂಪಸ್​ ಸುತ್ತುವರಿದಿದ್ದಲ್ಲೆ ಅಲ್ಲಿನ ಶಿಕ್ಷಕರು, ಬಾಲಕಿಯರಿಗೆ ಹೊಡೆದಿದ್ದಾರೆ. ಮನವಿ ಮಾಡಿಕೊಂಡರೂ ಬಿಡಲಿಲ್ಲ. ಗಾಯಗೊಂಡ ಎಲ್ಲರನ್ನೂ ಸೌಪಾಲಾ ಜಿಲ್ಲೆಯ ತ್ರಿವೇಣಿಗಂಜ್​ ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.