ಶಿಗ್ಗಾಂವಿ: ಹಿಂದುಳಿದ, ದಲಿತರ, ಬಡವರ ಪರ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪ್ರೀಂ ಕೋರ್ಟ್ ಆದೇಶದಂತೆ ಮೀಸಲಾತಿ ನೀಡಲು ನಿರ್ಣಯಿಸಿ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಪರವಾಗಿ ಮತ ಕೇಳಲು ಮುಂದಾಗಬೇಕು ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.
ಶಿಗ್ಗಾಂವಿ ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡುವುದಾಗಿ ಹೇಳಿದ್ದರೂ ಮೀಸಲಾತಿ ನೀಡುತ್ತಿಲ್ಲ. ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಕೇಳಲು ಅವರಿಗೆ ನೈತಿಕ ಹಕ್ಕಿಲ್ಲ, ಸಿದ್ದರಾಮಯ್ಯ ನಿರಂತರವಾಗಿ ದಲಿತರಿಗೆ ಮೋಸ ಮಾಡುತ್ತ ಬಂದಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡುವುದಾಗಿ ಹೇಳಿದ್ದ ಸಿದ್ದರಾಮಯ್ಯ ಕೇವಲ ಹಿಂದುಳಿದವರನ್ನು ವೋಟು ಬ್ಯಾಂಕ್ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡ ವೇಳೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ಜಗದ್ಗುರುಗಳ ಮಾತು ಕೇಳಬೇಡಿ ಎಂದು ಕ್ಷೇತ್ರದ ಕುರುಬ ಸಮಾಜದ ಜನರಿಗೆ ಹೇಳುವ ಮೂಲಕ ಶ್ರೀಗಳನ್ನು ನಿಂದಿಸಿದ್ದು, ಖಂಡನೀಯವಾಗಿದೆ. ತಕ್ಷಣ ಸಿದ್ದರಾಮಯ್ಯ ಕಾಗಿನೆಲೆ ಶ್ರೀಗಳ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.