ಊರ್ಜಿತ್​ ಪಟೇಲ್​ ಕೊಂಡಾಡಿದ ಪ್ರಧಾನಿ; ಪದತ್ಯಾಗ ಅಪಾಯಕಾರಿ ಎಂದು ರಾಗಾ

ನವದೆಹಲಿ: ಆರ್​ಬಿಐ ಗವರ್ನರ್​ ಊರ್ಜಿತ್​ ಪಟೇಲ್​ ಅವರ ರಾಜೀನಾಮೆ ನಿರ್ಧಾರ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಸೇರಿದಂತೆ ಹಲವು ನಾಯಕರು ವಿಷಾದ ವ್ಯಕ್ತಪಡಿಸಿದ್ದಾರೆ.

ಕಳಂಕರಹಿತ, ಪ್ರಾಮಾಣಿಕತೆಯ ವೃತ್ತಿಪರರಾಗಿದ್ದರು
ಊರ್ಜಿತ್ ಪಟೇಲ್ ಅವರು ಯಾವುದೇ ಕಳಂಕವಿಲ್ಲದ, ಪ್ರಾಮಾಣಿಕತೆಯ ವೃತ್ತಿಪರರಾಗಿದ್ದರು. ಆರ್​ಬಿಐನ ಗವರ್ನರ್​ ಹಾಗೂ ಡೆಪ್ಯೂಟಿ ಗವರ್ನರ್ ಆಗಿ 6 ವರ್ಷ ಸೇವೆ ಸಲ್ಲಿಸಿರುವ ಅವರು ದೊಡ್ಡ ಪರಂಪರೆಯನ್ನು ಬಿಟ್ಟು ಹೊರನಡೆದಿದ್ದಾರೆ. ನಾವು ಅವರ ಸೇವೆಯಿಂದ ವಂಚಿತರಾಗಿದ್ದೇವೆ ಎಂದು ಪ್ರಧಾನಿ ಟ್ವೀಟ್​ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.

ಪಟೇಲ್​ ಅವರು ಸೂಕ್ಷ್ಮ ಆರ್ಥಿಕ ಸಮಸ್ಯೆಗಳ ಬಗ್ಗೆ ಆಳವಾದ ಮತ್ತು ಒಳನೋಟವುಳ್ಳ, ಸಮರ್ಥ ಅರ್ಥಶಾಸ್ತ್ರಜ್ಞರಾಗಿದ್ದರು. ಶಿಸ್ತುಬದ್ಧ ಆದೇಶದಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿದ್ದ ಅವ್ಯವಸ್ಥೆಯನ್ನು ಸರಿದಾರಿಗೆ ತರುತ್ತಿದ್ದರು. ತಮ್ಮ ನಾಯಕತ್ವದಲ್ಲಿ​ ಆರ್​ಬಿಐ ಆರ್ಥಿಕ ಸ್ಥಿರತೆಯನ್ನು ಕಂಡುಕೊಂಡಿತ್ತು ಎಂದು ಪ್ರಧಾನಿ ಊರ್ಜಿತ್​ ಕಾರ್ಯಕ್ಷಮತೆಯನ್ನು ಹೊಗಳಿದ್ದಾರೆ.

ಬಿಜೆಪಿ ನಡೆಸುತ್ತಿರುವ ಹಲ್ಲೆಯನ್ನು ತಡೆಯಬೇಕಿದೆ
ಕೇಂದ್ರ ಸರ್ಕಾರದೊಂದಿಗೆ ದೀರ್ಘಕಾಲ ಕೆಲಸ ಮಾಡಲು ಸಾಧ್ಯವಾಗದೇ ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ಅವರು ರಾಜೀನಾಮೆ ನೀಡಿದ್ದಾರೆ. ಈ ಮೂಲಕ ನಮ್ಮ ಸಂಸ್ಥೆಗಳಾದ ಸಿಬಿಐ, ಆರ್​ಬಿಐ, ಇ.ಡಿ. ಮತ್ತು ಸಂವಿಧಾನದ ಮೇಲೆ ಬಿಜೆಪಿ ನಡೆಸುತ್ತಿರುವ ಹಲ್ಲೆಯನ್ನು ನಾವು ತಡೆಯಬೇಕೆಂಬ ಒಮ್ಮತಕ್ಕೆ ಬರಬೇಕಿದೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ತಿಳಿಸಿದರು.

ಒಂದು ಕಳಂಕವಾಗಿ ಉಳಿಯಲಿದೆ
ಆರ್​ಬಿಐ ಗವರ್ನರ್ ಬಲವಂತವಾಗಿ ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಲಾದ ವಿಧಾನವು ಭಾರತದ ಹಣಕಾಸು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಒಂದು ಕಳಂಕವಾಗಿ ಉಳಿಯಲಿದೆ. ಬಿಜೆಪಿ ಸರಕಾರವು ತನ್ನ ದುರ್ಬಲ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಪ್ರಕಟಿಸಿದ್ದು, ಈ ಮೂಲಕ ದೇಶದ ಗೌರವ ಹಾಗೂ ವಿಶ್ವಾಸಾರ್ಹತೆಯನ್ನು ಪಣ ಒಡ್ಡಿದೆ ಎಂದು ಕಾಂಗ್ರೆಸ್​ ಮುಖಂಡ ಅಹಮದ್​ ಪಟೇಲ್​ ಆರೋಪಿಸಿದ್ದಾರೆ.

ಸರ್ಕಾರ ಮೆಚ್ಚುಗೆಯನ್ನು ಹೊಂದಿದೆ
ಆರ್​ಬಿಐನ ಗವರ್ನರ್​ ಹಾಗೂ ಡೆಪ್ಯೂಟಿ ಗವರ್ನರ್​ ಆಗಿ ಡಾ.ಉರ್ಜಿತ್ ಪಟೇಲ್ ಅವರು ದೇಶಕ್ಕೆ ಸಲ್ಲಿಸಿದ ಸೇವೆಗಳ ಬಗ್ಗೆ ಸರ್ಕಾರ ಮೆಚ್ಚುಗೆಯನ್ನು ಹೊಂದಿದೆ. ಪಟೇಲ್​ ಅವರ ಹಲವು ವರ್ಷಗಳ ಸಾರ್ವಜನಿಕ ಸೇವೆಗಾಗಿ ಶುಭ ಕೋರುತ್ತೇನೆ ಎಂದು ಕೇಂದ್ರ ವಿತ್ತ ಸಚಿವ ಅರುಣ್​ ಜೇಟ್ಲಿ ಅವರು ತಿಳಿಸಿದರು.

ಕೆಟ್ಟ ಪರಿಣಾಮ ಬೀರಲಿದೆ
ಊರ್ಜಿತ್​ ಪಟೇಲ್​ ಅವರ ರಾಜೀನಾಮೆಯಿಂದ ದೇಶದ ಆರ್ಥಿಕತೆ, ಆರ್​ಬಿಐ ಹಾಗೂ ಸರ್ಕಾರದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಜುಲೈವರೆಗೆ ಅಥವಾ ಹೊಸ ಸರ್ಕಾರ ಆಡಳಿತಕ್ಕೆ ಬರೋವರೆಗಾದರೂ ಊರ್ಜಿತ್​ ಅವರು ಅಧಿಕಾರದಲ್ಲಿರಬೇಕಾಗಿತ್ತು. ಪ್ರಧಾನಿ ಮೋದಿ, ಊರ್ಜಿತ್​ರನ್ನು ಕರೆದು ರಾಜೀನಾಮೆಗೆ ಕಾರಣ ತಿಳಿದು, ಸಾರ್ವಜನಿಕ ಹಿತಾಸಕ್ತಿಯಿಂದ ಹೊರಗುಳಿಯುವುದನ್ನು ತಪ್ಪಿಸಬೇಕು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್​ ಸ್ವಾಮಿ ತಿಳಿಸಿದರು.

ಎಲ್ಲ ಭಾರತೀಯರು ಈ ಬಗ್ಗೆ ಕಾಳಜಿವಹಿಸಬೇಕು ಎಂದು ಪಟೇಲ್​ ರಾಜೀನಾಮೆ ಕುರಿತು ಆರ್​ಬಿಐನ ಮಾಜಿ ಗವರ್ನರ್ ರಘುರಾಮ್​ ರಾಜನ್​ ಅವರು ಮಾರ್ಮಿಕವಾಗಿ ಹೇಳಿದ್ದಾರೆ. (ಏಜೆನ್ಸೀಸ್​)

ಆರ್​ಬಿಐ ಗವರ್ನರ್​ ಊರ್ಜಿತ್​ ಪಟೇಲ್ ರಾಜೀನಾಮೆ