ಆರ್​ಬಿಐಗೆ ಉರ್ಜಿತ್ ರಾಜೀನಾಮೆ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಗವರ್ನರ್ ಉರ್ಜಿತ್ ಪಟೇಲ್ ಸೋಮವಾರ ರಾಜೀನಾಮೆ ನೀಡಿದ್ದಾರೆ. ತಕ್ಷಣದಿಂದ ಅನ್ವಯವಾಗುವಂತೆ ಇದನ್ನು ಮಾನ್ಯ ಮಾಡಲು ಅವರು ಸರ್ಕಾರವನ್ನು ಕೋರಿದ್ದಾರೆ.

ಪದತ್ಯಾಗಕ್ಕೆ ವೈಯಕ್ತಿಕ ಕಾರಣ ನೀಡಿರುವ ಪಟೇಲ್, ಒಂದೂವರೆ ತಿಂಗಳಿಂದ ಸರ್ಕಾರ ಮತ್ತು ಆರ್​ಬಿಐ ಮಧ್ಯೆ ನಡೆಯುತ್ತಿದ್ದ ತಿಕ್ಕಾಟದ ಬಗ್ಗೆ ಉಲ್ಲೇಖಿಸಿಲ್ಲ. ರಾಜೀನಾಮೆ ಪತ್ರದಲ್ಲಿ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಿರುವ ಪಟೇಲ್, ಸರ್ಕಾರದ ಮತ್ತು ಹಣಕಾಸು ಸಚಿವಾಲಯದ ಇತ್ತೀಚಿನ ನಡೆಗಳ ಬಗ್ಗೆ ಪ್ರತಿಕ್ರಿಯೆ ನೀಡದಿರುವುದು ಹಲವು ಪ್ರಶ್ನೆಗಳನ್ನು ಉಳಿಸಿದೆ. ಗವರ್ನರ್ ಆಗಿ 3 ವರ್ಷದ ಅವಧಿ ಪೂರ್ಣ ಗೊಳ್ಳಲು ಎಂಟು ತಿಂಗಳು ಬಾಕಿ ಇರುವಾಗಲೇ ಪಟೇಲ್ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ನೀಡಿದ 3ನೇ ಪ್ರಮುಖ : ಈ ಹಿಂದೆ ಆರ್​ಬಿಐ ಗವರ್ನರ್ ಆಗಿದ್ದ ರಘುರಾಂ ರಾಜನ್ ಎರಡನೇ ಅವಧಿಗೆ ಮುಂದುವರಿಯಲು ಆಸಕ್ತಿಯಿಲ್ಲ ಎಂದು ಅಧಿಕಾರ ಅವಧಿ ಮುಕ್ತಾಯಕ್ಕೆ ಮುನ್ನವೇ ಹೇಳಿದ್ದರು. ನೀತಿ ಆಯೋಗದ ಉಪಾಧ್ಯಾಕ್ಷರಾಗಿದ್ದ ಭಾರತ ಮೂಲದ ಆರ್ಥಿಕ ತಜ್ಞ ಪ್ರೊ.ಅರವಿಂದ ಪನಾಗರಿಯಾ 2017ರ ಆಗಸ್ಟ್​ನಲ್ಲಿ ಪದತ್ಯಾಗ ಮಾಡಿದ್ದರು. ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣಿಯನ್ ಕಳೆದ ಜೂನ್​ನಲ್ಲಿ ರಾಜೀನಾಮೆ ನೀಡಿದ್ದರು. ನೋಟು ಅಮಾನ್ಯೀಕರಣದ ಬಗ್ಗೆ ಅಸಮಾಧಾನ ಹೊಂದಿದ್ದರು.

ರಾಷ್ಟ್ರಪತಿಗೆ ವಿಪಕ್ಷಗಳ ದೂರು

ಉರ್ಜಿತ್ ಪಟೇಲ್ ರಾಜೀನಾಮೆ ವಿಷಯವಾಗಿ ರಾಷ್ಟ್ರಪತಿಯವರನ್ನು ಭೇಟಿಯಾಗಲು ವಿರೋಧ ಪಕ್ಷಗಳು ಮತ್ತೆ ಮಂಗಳವಾರ ಸಭೆ ಸೇರಲಿವೆ. ಈ ಕುರಿತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದು, ಬಿಜೆಪಿಯನ್ನು ಲೋಕಸಭಾ ಚುನಾವಣೆಯಲ್ಲಿ ಎದುರಿಸುವ ರಣತಂತ್ರ ಹೆಣೆಯಲು ವಿಪಕ್ಷಗಳು ಸಭೆ ಸೇರಿದ್ದವು. ಆದರೆ ಪಟೇಲ್ ಅವರ ಹಠಾತ್ ರಾಜೀನಾಮೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಹಾಗಾಗಿ ಕೇಂದ್ರದ ನಡೆ ವಿರುದ್ಧ ರಾಷ್ಟ್ರಪತಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ತಿಕ್ಕಾಟ ಏಕೆ?

ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ (ಎಸ್​ಎಂಇಎಸ್) ಉತ್ತೇಜನ ನೀಡಲು ಸಾಲ ವಿತರಣೆ ನಿಯಮಗಳನ್ನು ಸಡಿಲ ಮಾಡಬೇಕು. ಜತೆಗೆ ಆರ್​ಬಿಐ ಮೀಸಲು ನಿಧಿಯಲ್ಲಿ ಹೆಚ್ಚುವರಿಯಾಗಿರುವ -ಠಿ; 3.60 ಲಕ್ಷ ಕೋಟಿಯನ್ನು ವರ್ಗಾಯಿಸುವಂತೆ ಸರ್ಕಾರ ಒತ್ತಡ ಹೇರಿತ್ತು ಎನ್ನಲಾಗಿದೆ. ಮತ್ತೊಂದೆಡೆ, ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ (ಸಿವಿಸಿ) ಆರ್​ಬಿಐ ಗವರ್ನರ್​ಗೆ ನೋಟಿಸ್ ನೀಡಿದ್ದರಿಂದ ಆರ್​ಬಿಐ ಮತ್ತು ಸರ್ಕಾರದ ಮಧ್ಯೆ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಹಾಗಾಗಿ, ಉರ್ಜಿತ್ ಪಟೇಲ್ ನವೆಂಬರ್​ನಲ್ಲಿ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿತ್ತು.

ರಾಜೀನಾಮೆ ಇದೇ ಮೊದಲಲ್ಲ

  • ಜಾನ್ ಸ್ಮಿತ್ – 1937
  • ಬೆನಗಲ್ ರಾಮರಾವ್ – 1957
  • ಎಸ್.ಜಗನ್ನಾಥನ್ – 1975