ಬೆಳಗಾವಿ: ಲಿಂಗಾಯತರಿಗೆ ಮೀಸಲಾತಿ ನೀಡಿ

ಬೆಳಗಾವಿ: ಮಹಾರಾಷ್ಟ್ರದಲ್ಲಿ ಅಲ್ಲಿನ ರಾಜ್ಯ ಸರ್ಕಾರವು ಮರಾಠಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.16ರಷ್ಟು ಮೀಸಲಾತಿ ನೀಡಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಲಿಂಗಾಯತರಿಗೆ ರಾಜ್ಯ ಸರ್ಕಾರ ಮೀಸಲಾತಿ ನೀಡಬೇಕು ಎಂದು ಸಮಸ್ತ ಲಿಂಗಾಯತ ಮೀಸಲಾತಿ ಹೋರಾಟ ಸಮಿತಿ ಮುಖ್ಯ ಸಂಚಾಲಕ ಬಸವರಾಜ ಚಿಕ್ಕನಗೌಡರ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಯಾರ ಹಕ್ಕನ್ನೂ ಕಸಿದುಕೊಳ್ಳುತ್ತಿಲ್ಲ. ನಮಗೆ ಅಗತ್ಯವಿರುವ ಬೇಡಿಕೆ ಈಡೇರಿಕೆಗೆ ಒತ್ತಾಯಿಸುತ್ತಿದ್ದೇವೆ. ಮಹಾರಾಷ್ಟ್ರದ ಮರಾಠಿಗರಿಗೂ, ಕರ್ನಾಟಕದಲ್ಲಿರುವ ಲಿಂಗಾಯತರಿಗೂ ಬಹಳಷ್ಟು ವಿಷಯಗಳಲ್ಲಿ ಸಾಮ್ಯತೆ ಇದೆ. ಹಾಗಾಗಿ ಲಿಂಗಾಯತರಿಗೂ ಶೇ.16ರಷ್ಟು ಮೀಸಲಾತಿ ನೀಡಬೇಕು.

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವ ಕುರಿತಂತೆ ಈ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಬೇಡಿಕೆಗೆ ಸ್ಪಂದನೆ ನೀಡಲಿಲ್ಲ. ಅಲ್ಲದೆ ತಮ್ಮ ಸಚಿವ ಸಂಪುಟದಲ್ಲಿದ್ದ ಜಿ.ಎಂ.ಸಿದ್ದೇಶ್ವರ ಅವರನ್ನು ತೆಗೆದುಹಾಕಿತು. ಬಳಿಕ ಲಿಂಗಾಯತ ಸಮುದಾಯದ ಬೇರೊಬ್ಬರಿಗೆ ಅವಕಾಶ ನೀಡಲಿಲ್ಲ ಎಂದು ಟೀಕಿಸಿದರು.

ಲೋಕಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಲಿಂಗಾಯತರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.16ರಷ್ಟು ಮೀಸಲಾತಿ ವಿಷಯ ಉಲ್ಲೇಖಿಸಬೇಕು ಎಂದು ಚಿಕ್ಕನಗೌಡರ ಒತ್ತಾಯಿಸಿದರು. ಎಫ್.ಎಸ್.ಸಿದ್ದನಗೌಡರ, ಈಶ್ವರ ಕತ್ತಿ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.