ಖಾಸಗಿಯಲ್ಲೂ ಮೀಸಲು

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾನೂನು ಪ್ರಸ್ತಾಪ ಅಂತಿಮ

ಬೆಂಗಳೂರು: ರಾಜ್ಯದಲ್ಲಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಕಲ್ಪಿಸುವ ಕಾನೂನು ತರಬೇಕೆಂಬ ಬಹುದಿನಗಳ ಬೇಡಿಕೆ ಈಡೇರುವ ಹಂತ ತಲುಪಿದೆ. ನಿರೀಕ್ಷೆಯಂತೆ ನಡೆದರೆ ಮುಂಬರುವ ಬೆಳಗಾವಿ ಅಧಿವೇಶನದಲ್ಲೇ ಹೊಸ ಮಸೂದೆ ಮಂಡನೆಯಾಗಲಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವ ದಲ್ಲಿ ನಡೆಯುತ್ತಿರುವ ಈ ಪ್ರಯತ್ನದ ಭಾಗವಾಗಿ ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆದಿದ್ದು, ಕಾನೂನು ರಚನೆ ಬಗ್ಗೆ ಚರ್ಚೆ ನಡೆಯಿತು.

ಡಾ. ಸರೋಜಿನಿ ಮಹಿಷಿ ವರದಿಗೆ ಸಂಬಂಧಿಸಿ ಎ ವೃಂದದ ನೌಕರಿಯಲ್ಲಿ ಶೇ.65, ಬಿ ವೃಂದದ ನೌಕರಿಯಲ್ಲಿ ಶೇ.80 ಹಾಗೂ ಸಿ ವೃಂದದ ನೇಮಕಗಳಲ್ಲಿ ಶೇ.100ರಷ್ಟು ಕನ್ನಡಿಗರನ್ನೇ ನೇಮಿಸಬೇಕಿದ್ದು ಇದನ್ನು ಕಡ್ಡಾಯವಾಗಿ ಪಾಲಿಸಲು ಕ್ರಮಕೈಗೊಳ್ಳಬೇಕೆಂದು ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಧಿಕಾರಿಗಳಿಗೆ ತಿಳಿಸಿದ್ದರು.

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಸಂಬಂಧ ಸಚಿವ ಸಂಪುಟದ ಅನುಮೋದನೆ ಪಡೆದು ನವೆಂಬರ್ ಒಳಗೆ ಕಾಯ್ದೆ ರೂಪಿಸಿ ಸೂಕ್ತ ಕ್ರಮಕೈಗೊಳ್ಳಲು ಕಾರ್ವಿುಕ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಧಿಕಾರಿಗಳು ಸಹ ಇದಕ್ಕೊಪ್ಪಿ, ಕಾನೂನು ರಚನೆಗೆ ಇರುವ ಸವಾಲುಗಳ ಬಗ್ಗೆ ಅಭಿಪ್ರಾಯ ನೀಡಿದ್ದಾರೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಾಧಿಕಾರ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ, ವಿಧೇಯಕಗಳಿಗಿದ್ದ ಕಾನೂನು ತೊಡಕುಗಳೆಲ್ಲವೂ ನಿವಾರಣೆಯಾಗಿವೆ. ಹೀಗಾಗಿ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಧೇಯಕಕ್ಕೆ ಒಪ್ಪಿಗೆ ಸಿಗಬಹುದು. ಬಳಿಕ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆಯಾಗುವ ಸಾಧ್ಯತೆ ಇದೆ ಎಂದರು.

ಶಿಕ್ಷಣ ಅಧಿಕಾರಿಗಳಿಗೆ ‘ಕನ್ನಡ’ ಪಾಠ

ಬೆಂಗಳೂರು: ರಾಜ್ಯದ ಹಲವಾರು ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಬೋಧಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಶಿಕ್ಷಣ ಇಲಾಖೆಗೆ ‘ಕನ್ನಡ ಪಾಠ’ ಮಾಡಿದೆ. ಜತೆಗೆ ಕೆಳ ಹಂತದ ಅಧಿಕಾರಿಗಳಿಗೂ ನೇರವಾಗಿ ತಿಳಿ ಹೇಳಲು ನಿರ್ಧರಿಸಿದೆ.

ವಿಧಾನಸೌಧದಲ್ಲಿ ಶನಿವಾರ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಕನ್ನಡದ ಬಗ್ಗೆ ಶಾಲೆಗಳ ತಾತ್ಸಾರ ಭಾವನೆಯನ್ನು ಉದಾಹರಣೆ ಸಹಿತ ವಿವರಿಸಿದರು.

ರಾಜ್ಯದ ವಿವಿಧೆಡೆ ಕನ್ನಡ ಕಲಿಸದ ಶಾಲೆಗಳ ಮಾಹಿತಿ ಮುಂದಿಟ್ಟುಕೊಂಡಿದ್ದ ಅಧ್ಯಕ್ಷರು, 32 ಶಾಲೆಗಳ ಹೆಸರನ್ನು ಪ್ರಸ್ತಾಪಿಸಿ ದರು. ಹೀಗಾಗಿ ಅಧಿಕಾರಿಗಳು ಮರು ಮಾತನಾಡಲಿಲ್ಲ. ಜತೆಗೆ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂಬ ಸೂಚನೆ ಪಾಲಿಸಲು ಒಪ್ಪಿಕೊಂಡರು. ಅ.31ರಂದು ಪ್ರಾಧಿಕಾರದಿಂದ ಇಲಾಖೆಯ ಎಲ್ಲ ಜಿಲ್ಲಾ ಉಪ ನಿರ್ದೇಶಕರು, ತಾಲೂಕು ಶಿಕ್ಷಣಾಧಿಕಾರಿಗಳ ಜತೆ ವಿಡಿಯೋ ಕಾನ್ಪರೆನ್ಸ್ ನಡೆಸಲು ಅಗತ್ಯ ವ್ಯವಸ್ಥೆ ಮಾಡಲು ಶಿಕ್ಷಣ ಇಲಾಖೆ ಒಪ್ಪಿತು.

ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಅಧೀನ ಕಾರ್ಯದರ್ಶಿ ರಾಘವೇಂದ್ರ, ನಿರ್ದೇಶಕ ಬಸವರಾಜ್, ಪ್ರಾಧಿಕಾರದ ಕಾರ್ಯದರ್ಶಿ ಮುರಳೀಧರ್ ಇದ್ದರು.

ಯಾವೆಲ್ಲ ಕ್ಷೇತ್ರ ಅನ್ವಯ?

ಐಟಿ-ಬಿಟಿ, ಗಾರ್ವೆಂಟ್ಸ್, ಆಟೋಮೊಬೈಲ್, ಹೋಟೆಲ್ ಸೇರಿ ಖಾಸಗಿ ವಲಯಕ್ಕೆ ಸೇರಿದ ಎಲ್ಲ ಉದ್ದಿಮೆಗಳು.

ಖಾಸಗಿ ಕ್ಷೇತ್ರದಲ್ಲೂ ಕನ್ನಡಿಗರಿಗೆ ಮೀಸಲು ಕಾನೂನು ತರಲು ಪ್ರಾಧಿಕಾರ ನಿರಂತರ ಪ್ರಯತ್ನಿಸಿದೆ. ಈಗ ಒಂದು ಹಂತಕ್ಕೆ ತಲುಪಿದ್ದು, ಸರ್ಕಾರ ಅಧಿವೇಶನದಲ್ಲಿ ಚರ್ಚೆ ನಡೆಸಿ ಜಾರಿಗೆ ತರಬೇಕಾಗಿದೆ.

| ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

2 ವರ್ಷದಿಂದ ಪ್ರಯತ್ನ

2016ರ ಆಯವ್ಯಯ ಘೋಷಣೆ ಯಲ್ಲೇ ಸಿ ಮತ್ತು ಡಿ ವೃಂದದ ನೇಮಕಗಳಲ್ಲಿ ಶೇ.100 ಕನ್ನಡಿಗರಿಗೆ ಮೀಸಲಿಡಲು ಘೋಷಿಸಲಾಗಿತ್ತು. ಆದರೆ, ಖಾಸಗಿ ವಲಯಗಳಲ್ಲಿ ಇದು ಕೇವಲ ಶೇ.10ರಷ್ಟೂ ಆಗಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಳೆದ 2 ವರ್ಷ ಗಳಿಂದಲೂ ಸರ್ಕಾರದ ಮೇಲೆ ಕಾನೂನು ರಚನೆಗೆ ಒತ್ತಡ ತಂದಿತ್ತು. ಈ ಪ್ರಯತ್ನ ಈಗ ಕೊನೇ ಹಂತ ತಲುಪಿದ್ದು, ಸಂಪುಟ ಸಭೆಯ ನಡಾವಳಿ ಕೂಡ ಸಿದ್ಧವಾಗಿದೆ.