ಸಿಂಧನೂರು: ತೆಲಂಗಾಣದಲ್ಲಿ ಮೀಸಲಾತಿ ವರ್ಗೀಕರಣ ಜಾರಿಗೊಳಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಮಂದಕೃಷ್ಣ ಮಾದಿಗ ಅವರ ಬಂಧನ ಖಂಡಿಸಿ ತಹಸಿಲ್ ಕಚೇರಿ ಉಪತಹಸೀಲ್ದಾರ್ ಚಂದ್ರಶೇಖರಗೆ ಒಳ ಮೀಸಲಾತಿ ಐಕ್ಯ ಹೋರಾಟ ಸಮಿತಿ ಗುರುವಾರ ಮನವಿ ಸಲ್ಲಿಸಿತು.
ದೇಶದಲ್ಲಿ ಶೋಷಣೆಯನ್ನು ಅನುಭವಿಸಿದ ಅಸ್ಪಶ್ಯ ಜನಾಂಗಕ್ಕೆ ಸಿಗಬೇಕಾದ ಹಕ್ಕು ಮತ್ತು ಸೌಲಭ್ಯಗಳು ದೊರೆತಿಲ್ಲ. ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಮಾದಿಗ ಸಮುದಾಯಕ್ಕೆ ಸಾಮಾಜಿಕ ಶೋಷಣೆ ತಪ್ಪಿಲ್ಲ. ಒಳಮೀಸಲಾತಿ ಜಾರಿ ಮಾಡದೆ ನೇಮಕ ಪ್ರಕ್ರಿಯೆ ನಡೆಸುವುದು ಸಂವಿಧಾನ ವಿರೋಧಿಯಾಗಿದೆ ಎಂದು ದೂರಿತು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲ ರಾಜ್ಯಗಳು ಸುಗ್ರೀವಾಜ್ಞೆ ಮುಖಾಂತರ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು. ಅಲ್ಲಿಯವರೆಗೆ ರಾಜ್ಯ ಸರ್ಕಾರಗಳು ಯಾವುದೇ ಉದ್ಯೋಗ ನೇಮಕ ಪ್ರಕ್ರಿಯೆ ನಡೆಸಬಾರದೆಂದು ಒತ್ತಾಯಿಸಿತು. ಪ್ರಮುಖರಾದ ನಾಗರಾಜ ಸಾಸಲಮರಿ, ಸಂಗಮೇಶ ಮುಳ್ಳೂರು, ಮಲ್ಲಪ್ಪ ಗೋನಾಳ, ಮೌಲಪ್ಪ ಹೈಹೊಳೆ, ಗುರುರಾಜ ಮುಕ್ಕುಂದ, ಶಿವರಾಜ ಉಪ್ಪಲದೊಡ್ಡಿ, ಪಂಪಾಪತಿ ಹಂಚಿನಾಳ, ಚನ್ನಬಸವ ಯಾಪಲಪರ್ವಿ, ಯಲ್ಲಪ್ಪ ಎದ್ದಲದೊಡ್ಡಿ, ಮುತ್ತು ಸಾಗರ, ಹನುಮೇಶ ಕರ್ನಿ, ಪ್ರಪೇಲ್ ಬೋನವೆಂಚರ್, ಚಿಕ್ಕುರಪ್ಪ ತುರ್ವಿಹಾಳ, ಹುಲುಗಪ್ಪ ಜಾಲಿಹಾಳ, ನರಸಪ್ಪ ಅಮರಾಪುರ, ಯಮನೂರ ಬಸಾಪುರ ಇದ್ದರು.