ನಗರಸಭೆ ಚುನಾವಣೆ ಮುಂದಕ್ಕೆ?

ಚಿಕ್ಕಮಗಳೂರು: ನಗರಸಭೆ ವಾರ್ಡ್ ಮೀಸಲಾತಿ ಪರಿಷ್ಕರಣೆ ಆದೇಶ ಮರು ಪರಿಶೀಲನೆಗೆ ಚುನಾವಣಾ ಆಯೋಗ ಹೈಕೋರ್ಟ್ ಮೊರೆಹೋಗಲು ಸಿದ್ಧತೆ ನಡೆಸಿದ್ದು, ನಗರಸಭೆ ಚುನಾವಣೆ ಮುಂದೆ ಹೋಗುವ ಸಂಭವವಿದೆ.

ರಾಜ್ಯ ಸರ್ಕಾರ ಹೊರಡಿಸಿದ ವಾರ್ಡ್ ಮೀಸಲಾತಿ ಪಟ್ಟಿಯಲ್ಲಿ ಹಲವು ಲೋಪಗಳಿವೆ ಎಂದು ಆಕ್ಷೇಪಿಸಿ ಜಿಲ್ಲೆಯ ಮೂವರು ಸೇರಿ ರಾಜ್ಯದ 9 ಜಿಲ್ಲೆಗಳ ಮುಖಂಡರು ಹೈಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು, ಮೀಸಲಾತಿ ಪಟ್ಟಿ ಲೋಪದ ಬಗ್ಗೆ ಸಲ್ಲಿಸಿದ್ದ ಆಕ್ಷೇಪ ಪರಿಗಣಿಸಿ ಜ.28ರೊಳಗೆ ಈಗಿನ ಮೀಸಲಾತಿ ಪಟ್ಟಿ ಪರಿಷ್ಕರಿಸಿ ಪುನಃ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಈಗ ನಿಗದಿಪಡಿಸಿರುವ ಮೀಸಲಾತಿ ಸಮರ್ಪಕವಾಗಿದೆ. ಯಾವುದೇ ಲೋಪಗಳಿಲ್ಲ. ಪರಿಷ್ಕರಣೆಗೆ ನ್ಯಾಯಾಲಯ ನೀಡಿರುವ ಆದೇಶವನ್ನು ಮರು ಪರಿಶೀಲಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಒಂದು ವೇಳೆ ಮನವಿ ಸಲ್ಲಿಸಿದರೆ ಮತ್ತೆ ವಿಚಾರಣೆ ಆರಂಭಗೊಳ್ಳುವುದರಿಂದ ಚುನಾವಣೆ ಮುಂದಕ್ಕೆ ಹೋಗುವ ಸಂಭವವಿದೆ.