ಬೆಂಗಳೂರು: ಪ್ರತಿ ಕಾಯಿಲೆಗೆ ನಿರ್ದಿಷ್ಟ ಆಂಟಿಬಯಾಟಿಕ್ಸ್ ಕಂಡುಹಿಡಿಯಲು ಅಧ್ಯಯನ ನಡೆಸುತ್ತಿರುವುದಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ. ಅಡಾ ಇ. ಯೋನತ್ ಮಾಹಿತಿ ನೀಡಿದರು.
ಬೆಂಗಳೂರಿನ ಕೃಷಿ ವಿವಿ ಆವರಣದಲ್ಲಿ ಆಯೋಜನೆಯಾಗಿರುವ 107ನೇ ಭಾರತೀಯ ವಿಜ್ಞಾನ ಸಮ್ಮೇಳನದ ಎರಡನೇ ದಿನದಲ್ಲಿ ಸಂವಾದ ಕಾರ್ಯಕ್ರಮ ಹಾಗೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ನಾಲ್ಕೈದು ಕಾಯಿಲೆಗಳಿಗೆ ಒಂದೇ ಆಂಟಿಬಯಾಟಿಕ್ಸ್ ನೀಡಲಾಗುತ್ತಿದೆ. ಇದರಿಂದಾಗಿ, ದೇಹದಲ್ಲಿರುವ ಬ್ಯಾಕ್ಟೀರಿಯಾಗಳು ಆ ಔಷಧಕ್ಕೆ ಪ್ರತಿರೋಧ ಬೆಳೆಸಿಕೊಳ್ಳುತ್ತಿವೆ. ಇದನ್ನು ತಪ್ಪಿಸಲು ಪರಿಸರ ಸ್ನೇಹಿ ಆಂಟಿಬಯಾಟಿಕ್ಸ್ ಸಿದ್ಧಪಡಿಸಲಾಗುತ್ತಿದೆ. ಇದು ನಿರ್ದಿಷ್ಟ ಕಾಯಿಲೆಗೆ ಮಾತ್ರ ಮದ್ದು ನೀಡುವುದರಿಂದ ಇಡೀ ದೇಹ ಪ್ರತಿರೋಧ ಶಕ್ತಿ ಬೆಳೆಸಿಕೊಳ್ಳುವುದಿಲ್ಲ. ಆದರೆ ಈ ಔಷಧ ತುಸು ದುಬಾರಿಯಾಗುವ ಸಾಧ್ಯತೆಯಿದ್ದು, ಔಷಧ ಕಂಪನಿಗಳು ಯಾವ ರೀತಿ ಸ್ವೀಕರಿಸುತ್ತವೆ ನೋಡಬೇಕಿದೆ ಎಂದು ಹೇಳಿದರು.
ತಗ್ಗುತ್ತಿರುವ ಹೃದ್ರೋಗ ವಯಸ್ಸು: ಹೃದ್ರೋಗ ಸಂಭವಿಸುವ ವಯಸ್ಸು ಇಳಿಕೆಯಾಗುತ್ತಿರುವ ಬಗ್ಗೆ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಕಳವಳ ವ್ಯಕ್ತಪಡಿಸಿದರು. ‘ಆಧುನಿಕ ಜೀವನಶೈಲಿ, ರೋಗಗಳು ಮತ್ತು ಹೃದಯ ವಿಜ್ಞಾನ’ ಕುರಿತು ಉಪನ್ಯಾಸದ ನೀಡಿದ ಅವರು, ದೇಶದಲ್ಲಿ ಪ್ರತಿ ನಿಮಿಷಕ್ಕೆ ನಾಲ್ವರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಹೃದ್ರೋಗ ಸಮಸ್ಯೆಗೆ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಪ್ರಮುಖ ಕಾರಣ. ಮಾದಕ ವಸ್ತು ಸೇವನೆ, ಧೂಮಪಾನ, ಅಧಿಕ ಮಾನಸಿಕ ಒತ್ತಡ, ಪೌಷ್ಟಿಕ ಆಹಾರ ಕೊರತೆಯೂ ಕಾರಣವಾಗುತ್ತವೆ. ದಿನಕ್ಕೆ 45 ನಿಮಿಷದಿಂದ ಒಂದು ಗಂಟೆ ವಾಯು ವಿಹಾರ ಮಾಡುವುದು ಹೃದಯಕ್ಕೆ ಅನುಕೂಲಕಾರಿ ಎಂದರು.
ಮಕ್ಕಳ ಕಾಳಜಿ ಅನಾವರಣ
ಸಮಾಜದಲ್ಲಿರುವ ವಿವಿಧ ಸಮಸ್ಯೆಗಳನ್ನು ಗುರುತಿಸುವುದಲ್ಲದೆ ಅವುಗಳಿಗೆ ತಮ್ಮದೇ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವತ್ತ ಮಕ್ಕಳ ಪ್ರಯತ್ನವನ್ನು ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿರುವ ಕಿಶೋರ ವೈಜ್ಞಾನಿಕ ಸಮ್ಮೇಳನ ತೆರೆದಿಟ್ಟಿದೆ. ಅಂಧರಿಗೆ ಸೆನ್ಸರ್ಗಳುಳ್ಳ ಊರುಗೋಲು, ಬಾವಿಯಿಂದ ನೀರು ಸೇದುವ ಮಹಿಳೆಯರಿಗೆ ಸೈಕಲ್ ಬಳಸಿ ನೀರೆತ್ತುವ ಯಂತ್ರ, ಅಲ್ಜೀಮರ್ಸ್ ಕಾಯಿಲೆ ಉಳ್ಳವರಿಗೆ ಆಹಾರ ಸೇವಿಸಲು ಸ್ಮಾರ್ಟ್ ಸ್ಪೂನ್, ರಾಸಾಯನಿಕ ರಹಿತ ಹಲ್ಲಿನ ಪುಡಿ ಸೇರಿದಂತೆ ಹತ್ತು ಹಲವು ಸಂಶೋಧನೆಗಳನ್ನು ನಡೆಸಿರುವ ವಿದ್ಯಾರ್ಥಿಗಳು ಅದನ್ನು ಆತ್ಮವಿಶ್ವಾಸದಿಂದ ವಿವರಿಸುತ್ತಿದ್ದಾರೆ.
ಜಗದೀಶಚಂದ್ರ ಬೋಸ್ಗೆ ನೊಬೆಲ್ ಸಿಗಬೇಕಿತ್ತು
ಭಾರತದ ವಿಜ್ಞಾನಿ ಜಗದೀಶಚಂದ್ರ ಬೋಸ್ಗೆ ನೊಬೆಲ್ ಬಹುಮಾನ ಸಿಗಬೇಕಿತ್ತು, ಆದರೆ ವಿವಿಧ ಕಾರಣಗಳಿಂದ ಅದು ಕೇವಲ ಮಾಕೋನಿ ಪಾಲಾಯಿತು ಎಂದು ಭಾರರತ್ನ ಪ್ರೊ. ಸಿ.ಎನ್. ಆರ್. ರಾವ್ ಬೇಸರ ವ್ಯಕ್ತಪಡಿಸಿದರು. ಭಾರತೀಯ ವಿಜ್ಞಾನ ಸಮ್ಮೇಳನದ ಎರಡನೇ ದಿನ ಭಾರತೀಯ ಕಿಶೋರ್ ವೈಜ್ಞಾನಿಕ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾಕೋನಿಗಿಂತಲೂ ಮೊದಲೆ ರೇಡಿಯೋ ತರಂಗಾಂತರಗಳನ್ನು ಬೋಸ್ ಸಂಶೋಧಿಸಿ ನಿರೂಪಿಸಿದ್ದರು. ವಾಸ್ತವವಾಗಿ ಮಾಕೋನಿ ಜತೆಗೆ ನೊಬೆಲ್ ಬಹುಮಾನ ಹಂಚಿಕೊಳ್ಳಬೇಕಿತ್ತು. ಆದರೆ ವಿವಿಧ ಕಾರಣಕ್ಕೆ ಅದು ಸಾಧ್ಯವಾಗಿಲ್ಲ. ಗ್ರಾಮೀಣ ಹಿನ್ನೆಲೆ, ಬಡತನ, ಜಾತಿ, ಧರ್ಮಗಳು ವಿಜ್ಞಾನದಲ್ಲಿ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಸಿ.ವಿ. ರಾಮನ್ ಸೇರಿದಂತೆ ಎಲ್ಲ ವಿಜ್ಞಾನಿಗಳೂ ನಿರೂಪಿಸಿದ್ದಾರೆ. ಹೊಸ ವಿಚಾರ ಕಲಿಯುವ ಕುತೂಹಲ ಇದ್ದರೆ ಅಷ್ಟೇ ಸಾಕು. ವಿಜ್ಞಾನಕ್ಕೆ ಪ್ರಾಮುಖ್ಯತೆ ನೀಡದಿದ್ದಲ್ಲಿ ಭಾರತ ಎರಡನೇ ದರ್ಜೆ ದೇಶವಾಗುತ್ತದೆ ಎಂದರು.