ಕೃತಿಚೌರ್ಯಕ್ಕೆ ಇನ್ನು ಕೊಕ್

ಅಲ್ಲಿಂದೊಂದಿಷ್ಟು, ಇಲ್ಲಿಂದೊಂದಿಷ್ಟು ಕದ್ದು ಅದಕ್ಕೆ ಹೊಸ ರೂಪ ನೀಡಿ ತಮ್ಮದೇ ಆದ ಸಂಶೋಧನಾ ವರದಿ ಮಂಡಿಸಿ ಡಾಕ್ಟರೇಟ್ ಗಿಟ್ಟಿಸಿಕೊಳ್ಳಲು ಹವಣಿಸುತ್ತಿರುವ ನಿಮ್ಮ ವಿದ್ಯಾರ್ಥಿಗಳಿಗೆ ನೆರವಾಗುವ ಯೋಚನೆಯಲ್ಲಿದ್ದರೆ ಅದನ್ನು ಬಿಟ್ಟುಬಿಡಿ. ಏಕೆಂದರೆ ವಿದ್ಯಾರ್ಥಿಗಳು ಕೃತಿಚೌರ್ಯ ಮಾಡಿದರೆ ಗೈಡ್​ಗಳಿಗೆ ಕಠಿಣ ಶಿಕ್ಷೆಯಾಗುವ ಹೊಸ ಯೋಜನೆ ಜಾರಿಗೆ ಬಂದಿದೆ.

|ದೇವರಾಜ್ ಎಲ್.

ಉನ್ನತ ಶಿಕ್ಷಣ ಇಲಾಖೆ ಸಮೀಕ್ಷಾ ವರದಿ ಪ್ರಕಾರ ಪ್ರತಿ ವರ್ಷ ದೇಶದಲ್ಲಿ ಸುಮಾರು 1.61 ಲಕ್ಷ ವಿದ್ಯಾರ್ಥಿಗಳು ಪಿಎಚ್.ಡಿಗೆ ನೋಂದಾಯಿಸಿಕೊಳ್ಳುತ್ತಾರೆ. ಈ ಪೈಕಿ, ಸ್ವಂತ ಬಲದ ಮೇಲೆ ಸಂಶೋಧನೆ ಕೈಗೊಂಡು ಪ್ರಬಂಧ ಮಂಡಿಸಲು ಹಲವರು ಕಾಯುತ್ತಿದ್ದರೆ, ಷಾರ್ಟ್​ಕಟ್ ಮಾರ್ಗ ಅನುಸರಿಸಿ ಹೇಗಾದರೂ ಸೈ, ತಮ್ಮ ಹೆಸರಿನ ಹಿಂದೆ ಡಾಕ್ಟರೇಟ್ ಸೇರಿಸಿಕೊಳ್ಳುವ ಜತೆಗೆ, ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಳ್ಳುವ ತವಕದಲ್ಲಿ ಕೆಲವರಿರುತ್ತಾರೆ. ಈ ಕಳ್ಳ ಮಾರ್ಗ ಹಿಡಿಯಲು ಮಾರ್ಗದರ್ಶಕರು ನೆರವಾಗುತ್ತಾರೆ.

ಆದರೆ ಇನ್ನು ಮುಂದೆ ಈ ‘ನಕಲಿ’ನ ಆಟ ನಡೆಯುವುದಿಲ್ಲ. ಆ ಪ್ರಬಂಧ, ಈ ಪ್ರಬಂಧ ಎಂದೆಲ್ಲಾ ಕದ್ದು, ಹೊಸ ಪ್ರಬಂಧ ಮಂಡನೆ ಮಾಡಲು ತಮ್ಮ ಶಿಷ್ಯ-ಶಿಷ್ಯೆಯರಿಗೆ ಮಾರ್ಗದರ್ಶಕರು ನೆರವಾದರೆ, ಅವರೇ ನೇರವಾಗಿ ಶಿಕ್ಷೆ ಅನುಭವಿಸುವ ಹೊಸ ಹಾಗೂ ಕಠಿಣ ನಿಯಮ ರೂಪುಗೊಂಡಿದೆ.

ಹೌದು. ವಿದ್ಯಾರ್ಥಿಗಳು ಪಿಎಚ್.ಡಿ ಕೃತಿಚೌರ್ಯ ಮಾಡಿದರೆ ಮಾರ್ಗದರ್ಶಕರು ಶಿಕ್ಷೆ ಅನುಭವಿಸಬೇಕು. ಕೃತಿಚೌರ್ಯದ ಬಗ್ಗೆ ವಿಶ್ವವಿದ್ಯಾಲಯದ ಧನ ಸಹಾಯ ಆಯೋಗ(ಯುಜಿಸಿ) ಕಠಿಣ ನಿಯಮ ರೂಪಿಸಿದೆ. ಕೃತಿಚೌರ್ಯ ಕಂಡು ಬಂದಲ್ಲಿ ಮಾರ್ಗದರ್ಶಕರ ಬಡ್ತಿ ತಡೆಹಿಡಿದು ಮುಂದೆ ಕೆಲವು ವರ್ಷಗಳ ಕಾಲ ಪಿಎಚ್.ಡಿಗೆ ಮಾರ್ಗದರ್ಶನ ಮಾಡುವುದಕ್ಕೆ ನಿರ್ಬಂಧ ಹೇರುವ ಕುರಿತು ಇದರಲ್ಲಿ ಉಲ್ಲೇಖಿಸಲಾಗಿದೆ.

ಏನಿದು ನಿಯಮ?: ಈ ನಿಯಮದ ಹೆಸರು ‘ಯುಜಿಸಿ(ಶೈಕ್ಷಣಿಕ ಸಮಗ್ರತೆ ಪ್ರೋತ್ಸಾಹ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಕೃತಿಚೌರ್ಯದ ತಡೆ) ನಿಯಂತ್ರಣ 2018’.

ಕೃತಿಚೌರ್ಯ ಕಂಡುಹಿಡಿಯುವುದಕ್ಕೆ ಯುಜಿಸಿಯೇ ತಂತ್ರಾಂಶ ರೂಪಿಸಿದೆ. ಈಗಾಗಲೇ ನಮ್ಮ ದೇಶದಲ್ಲಿರುವ ಬಹುತೇಕ ವಿಶ್ವವಿದ್ಯಾಲಯಗಳು ಪಿಎಚ್.ಡಿ ನಕಲಿನ ಪ್ರಮಾಣ ಕಂಡುಹಿಡಿಯಲು ಕೆಲವು ಸಾಫ್ಟ್​ವೇರ್​ಗಳನ್ನು ಬಳಕೆ ಮಾಡುತ್ತಿವೆ. ಆದರೆ ತಂತ್ರಜ್ಞಾನ ಬಳಕೆ ಮಾಡದ ಕೆಲವು ವಿ.ವಿಗಳಲ್ಲಿನ ಸಂಶೋಧನಾ ವಿದ್ಯಾರ್ಥಿಗಳು ಹಳೇ ಪ್ರಬಂಧಗಳಿಗೆ ಹೊಸ ರೂಪ ನೀಡಿ ಪಿಎಚ್.ಡಿ ಪದವಿ ಪಡೆಯುತ್ತಿದ್ದಾರೆ. ಇದು ಯುಜಿಸಿ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಅನ್ವಯ ಆಗುವಂತೆ ಕಠಿಣ ನಿಯಮಗಳನ್ನು ರೂಪಿಸಿದೆ. ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ತಂತ್ರಜ್ಞಾನ: ಇದರ ಹೊರತಾಗಿ, ಕೃತಿಚೌರ್ಯ ಪತ್ತೆಗೆ ಯುಜಿಸಿಯಲ್ಲಿ ಪ್ರತ್ಯೇಕ ತಂತ್ರಾಂಶ ರೂಪಿಸಲಾಗುತ್ತಿದೆ. ಪಿಎಚ್.ಡಿ ಪ್ರಬಂಧವನ್ನು ಈ ತಂತ್ರಜ್ಞಾನದ ಮೂಲಕ ಪರಿಶೀಲನೆ ನಡೆಸಲಾಗುತ್ತದೆ. ಇದು ಕಾಪಿ ಮಾಡಿರುವುದನ್ನು ತೋರಿಸುತ್ತದೆ. ಶೇ.10ಕ್ಕಿಂತ ಹೆಚ್ಚು ಕೃತಿಚೌರ್ಯ ಕಂಡು ಬಂದರೆ ವಿವಿಧ ಹಂತಗಳಲ್ಲಿ ಕ್ರಮ ಜರುಗಿಸಲಾಗುವುದು.

ಇದಕ್ಕಾಗಿ ವಿಭಾಗವಾರು ಶೈಕ್ಷಣಿಕ ಸಮಗ್ರತೆ ಪ್ಯಾನಲ್(ಡಿಎಐಪಿ) ರಚಿಸಲಾಗಿದೆ. ಕೃತಿಚೌರ್ಯ ಕಂಡು ಬಂದ ತಕ್ಷಣ ಡಿಎಐಪಿಗೆ ಮಾಹಿತಿ ನೀಡಬೇಕು. ಪ್ರಕರಣವನ್ನು ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಮಗ್ರತೆ ಪ್ಯಾನಲ್(ಐಎಐಪಿ) ತನಿಖೆ ಮಾಡಲಿದೆ. ಪ್ರಕರಣದ ಬಗ್ಗೆ 45 ದಿನದೊಳಗೆ ವರದಿ ಸಲ್ಲಿಸಬೇಕು. ಕೃತಿಚೌರ್ಯಕ್ಕೆ ದಂಡ ವಿಧಿಸುವ ಮತ್ತು ಶಿಕ್ಷೆ ನೀಡುವ ಅಧಿಕಾರ ಐಎಐಪಿಗೆ ಇರಲಿದೆ. ವಿದ್ಯಾರ್ಥಿ ಪಿಎಚ್.ಡಿ ಪಡೆದ ನಂತರ ಕೃತಿಚೌರ್ಯ ಕಂಡುಬಂದಲ್ಲಿ ಹಸ್ತಪ್ರತಿ ಮುಟ್ಟುಗೊಲು ಹಾಕಿಕೊಂಡು ಡಾಕ್ಟರೇಟ್​ರದ್ದುಗೊಳಿಸುತ್ತದೆ.

ವಿಟಿಯು ತಂತ್ರಜ್ಞಾನ…

ಕೃತಿಚೌರ್ಯ ಪತ್ತೆಗಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಹಲವು ವರ್ಷಗಳ ಹಿಂದೆಯೇ ಪ್ರತ್ಯೇಕ ಸಾಫ್ಟ್​ವೇರ್ ರೂಪಿಸಿ ಪರಿಶೀಲನೆ ನಡೆಸುತ್ತಿದೆ. ಆದರೆ, ಡಾಕ್ಟರೇಟ್ ಅನ್ನೇ ಮುಟ್ಟುಗೋಲು ಹಾಕಿಕೊಳ್ಳುವ ಮಟ್ಟಿಗೆ ಯಾವುದೇ ಪ್ರಕರಣವನ್ನು ಪತ್ತೆ ಹಚ್ಚಿಲ್ಲ. ಬೆಂಗಳೂರು ವಿ.ವಿಯಲ್ಲಿ ಈ ಸಂಬಂಧ ಯಾವುದೇ ತಂತ್ರಾಂಶ ಇದುವರೆಗೆ ರೂಪುಗೊಂಡಿಲ್ಲ.