100 ಕಾಳಿಂಗಗಳಲ್ಲಿ ಮೂರೇ ಹೆಣ್ಣು!

ಅವಿನ್ ಶೆಟ್ಟಿ ಉಡುಪಿ
ಪಶ್ಚಿಮಘಟ್ಟ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಆಗುಂಬೆಗೂ ಮಹತ್ವದ ಸ್ಥಾನವಿದೆ. ಜಗತ್ತಿನಲ್ಲಿ ಇತರೆಡೆ ಕಾಣಸಿಗದ ಹಲವು ವಿಶೇಷ ಜೀವ ವೈವಿಧ್ಯತೆಯನ್ನೊಳಗೊಂಡ ದಟ್ಟ ಕಾಡು ಆಗುಂಬೆ. ಜಗತ್ತಿನ ಪ್ರಸಿದ್ಧ ಉರಗತಜ್ಞ ರೊಮ್ಯೂಲಸ್ ವಿಟೇಕರ್ ಆಗುಂಬೆಯನ್ನು ಕಾಳಿಂಗ ಸರ್ಪಗಳ ರಾಜಧಾನಿ ಎಂದು ಬಣ್ಣಿಸಿದ್ದಾರೆ. ಇಂಥ ಆಗುಂಬೆಯಲ್ಲಿರುವ ಮಳೆಕಾಡು ಸಂಶೋಧನಾ ಕೇಂದ್ರದ ಮೂಲಕ ನಡೆಯುತ್ತಿರುವ ಅಧ್ಯಯನ ಹೆಣ್ಣು ಕಾಳಿಂಗ ಸರ್ಪಗಳ ಸಂಖ್ಯೆ ಇಳಿಮುಖವಾಗಿರುವ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದೆ.
ಉರಗ ಪ್ರಿಯರು, ಜೀವವೈವಿಧ್ಯತೆ ಆಸಕ್ತ ವಿದ್ಯಾರ್ಥಿಗಳ ಸಹಿತ ಪರಿಸರ, ವನ್ಯಜೀವಿ ಆಸಕ್ತರು ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿದ್ದುಕೊಂಡು ವನ್ಯಜೀವಿಗಳ ಬಗ್ಗೆ ವಿಶೇಷ ಅಧ್ಯಯನ, ಸಂಶೋಧನೆ ನಡೆಸುತ್ತಾರೆ. ಇಲ್ಲಿ ಒಂದು ವರ್ಷದಿಂದ ವಿಶೇಷವಾಗಿ ಕಾಳಿಂಗ ಸರ್ಪಗಳ ಜೀವನ ಕ್ರಮ ಅಧ್ಯಯನ ನಡೆಸಲಾಗುತ್ತಿದೆ. ಕಾಳಿಂಗ ಸರ್ಪಗಳ ಜೀವನದ ಪ್ರತಿ ಹಂತವನ್ನು ದಾಖಲಿಸುವ ಮೂಲಕ ಅವುಗಳ ಜೀವನದ ರಹಸ್ಯ ಮಾಹಿತಿ ಸಂಗ್ರಹಕ್ಕೆ ಏಳು ಸಂಶೋಧಕರು ಮುಂದಾಗಿದ್ದಾರೆ. ಅರಣ್ಯ ಇಲಾಖೆ ಸಹಕಾರದಲ್ಲಿ, ಪರಿಸರ ಸಂರಕ್ಷಣೆ ಎನ್‌ಜಿಒ ಅನುದಾನದಲ್ಲಿ ಆಗುಂಬೆ ಮಳೆಕಾಡು ಅಧ್ಯಯನ ಕೇಂದ್ರ ಕಾರ್ಯಾಚರಿಸುತ್ತಿದೆ.

100ಕ್ಕೆ ಮೂರೇ ಹೆಣ್ಣು: ಸಂಶೋಧನೆಯಲ್ಲಿ ಹೆಣ್ಣು ಕಾಳಿಂಗ ಸರ್ಪಗಳ ಸಂಖ್ಯೆ ಕಡಿಮೆಯಾಗಿರುವುದು ಪತ್ತೆಯಾಗಿದೆ. ಸರಾಸರಿ 100 ಕಾಳಿಂಗದಲ್ಲಿ ಮೂರು ಹೆಣ್ಣು ಕಾಳಿಂಗ ಮಾತ್ರ ಇದ್ದು, ಲಿಂಗಾನುಪಾತದಲ್ಲಿ ವ್ಯತ್ಯಾಸ ಆಗಿದೆಯೇ ಎಂಬುದನ್ನು ಅಧ್ಯಯನ ನಡೆಸಲಾಗುತ್ತಿದೆ. ಕಾಳಿಂಗ ಸರ್ಪದ ಆಹಾರವೇ ಹಾವುಗಳು. ಸ್ವಜಾತಿ ಸರ್ಪಗಳನ್ನೂ ಇವು ತಿನ್ನುತ್ತವೆ. ಗಂಡು ಕಾಳಿಂಗ ಹೆಣ್ಣಿನೊಂದಿಗೆ ಲೈಂಗಿಕ ಕ್ರಿಯೆನಡೆಸಿ ಅದನ್ನು ಕೊಂದು ತಿನ್ನುವುದು, ಲೈಂಗಿಕ ಕ್ರಿಯೆಗೆ ಒಪ್ಪದಿದ್ದರೂ ಅದನ್ನು ಕೊಂದು ತಿನ್ನುವ ಸಂಗತಿಗಳು ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ನಿಖರ ಮಾಹಿತಿ ಕಲೆ ಹಾಕುತಿದ್ದೇವೆ, ನಂತರವಷ್ಟೇ ಲಿಂಗಾನುಪಾತ ಕುಸಿತ ಬಗ್ಗೆ ನಿಖರವಾಗಿ ಹೇಳಬಹುದು ಎನ್ನುತ್ತಾರೆ ಅಧ್ಯಯನಕಾರರು. ಸಾಮಾನ್ಯವಾಗಿ ಕಾಳಿಂಗ ಸರ್ಪ ಗಂಡು 12.5 ಅಡಿ ಉದ್ದ, ಹೆಣ್ಣು 8-9 ಅಡಿ ಉದ್ದ ಇರುತ್ತದೆ. 16 ಕೆ.ಜಿ. ಗರಿಷ್ಠ ತೂಕ ಹೊಂದಿರುತ್ತದೆ. 26 ಮೊಟ್ಟೆ ಕನಿಷ್ಠ, ಗರಿಷ್ಠ 32 ಮೊಟ್ಟೆಗಳನ್ನು ಇಡಬಲ್ಲದು. ಏಪ್ರಿಲ್ – ಮೇ ತಿಂಗಳಲ್ಲಿ ಮೊಟ್ಟೆ ಇಡುತ್ತದೆ. ಮೊಟ್ಟೆಯಿಂದ ಮರಿಯವರೆಗೆ 90 ದಿನಗಳ ಪ್ರಕ್ರಿಯೆ ನಡೆಯುತ್ತದೆ. ಇವುಗಳ ಸಾಮಾನ್ಯ ಜೀವಿತಾವಧಿ 20 ವರ್ಷ.

ಅತ್ಯಾಧುನಿಕ ಚಿಪ್ ಅಳವಡಿಕೆ: ಸಂಶೋಧಕರು ಎರಡು ಗಂಡು ಕಾಳಿಂಗ ಸರ್ಪಗಳಿಗೆ ಆರು ತಿಂಗಳ ಹಿಂದೆ ವಿಶೇಷ ತಂತ್ರಜ್ಞಾನ ಇರುವ 20 ಗ್ರಾಂನ ಚಿಪ್ ಅಳವಡಿಸಿದ್ದು, ಮಾನಿಟರಿಂಗ್ ಮಾಡಲಾಗುತ್ತಿದೆ. ಕೇಂದ್ರದಲ್ಲಿ 7 ಸಂಶೋಧಕರಿದ್ದು, ತಲಾ ಇಬ್ಬರಿಂದ ಬೆಳಗ್ಗೆ 7.30ರಿಂದ ಸಾಯಂಕಾಲ 6ರವರೆಗೆ ಹಾವಿನ ದಿನಚರಿ ವೀಕ್ಷಣೆ, ಅಧ್ಯಯನ ನಡೆಯುತ್ತಿದೆ. ಕಾಳಿಂಗ ಸರ್ಪವನ್ನು ಹಿಡಿದು ಅದರ ಪ್ರಜ್ಞೆ ತಪ್ಪಿಸಿ ತಲೆಯ ಬಳಿ ಜಿಪಿಎಸ್, ರೆಕಾರ್ಡಿಂಗ್ ವ್ಯವಸ್ಥೆ ಒಳಗೊಂಡ ಅತ್ಯಾಧುನಿಕ ಚಿಪ್ ಇಂಜೆಕ್ಟ್ ಮಾಡಲಾಗಿದೆ. ಇದು ಯಾವುದೇ ರೀತಿಯಿಂದಲೂ ಕಾಳಿಂಗ ಸರ್ಪದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲ. ಸಂಶೋಧನೆಗಳನ್ನು ನಡೆಸಿ ಈ ಚಿಪ್‌ನ್ನು ತಯಾರಿಸಲಾಗಿದೆ ಎನ್ನುತ್ತಾರೆ ಅಧ್ಯಯನಕಾರರು.

183 ಪಿಟ್‌ಟ್ಯಾಗ್: ಕಾಳಿಂಗ ಸರ್ಪಗಳಿಗೆ ಆಧಾರ್ ಮಾದರಿಯ ಪಿಟ್‌ಟ್ಯಾಗ್ ಅಳವಡಿಸಿ ಗಣತಿ ಮಾಡಲಾಗುತ್ತಿದ್ದು, ಈಗಾಗಲೇ 183 ಕಾಳಿಂಗ ಸರ್ಪಗಳಿಗೆ ಪಿಟ್‌ಟ್ಯಾಗ್ ಅಳವಡಿಸಲಾಗಿದೆ.

ಕೇಂದ್ರದಲ್ಲಿ ಒಂದು ವರ್ಷಗಳಿಂದ ಕಾಳಿಂಗ ಸರ್ಪಗಳ ಬಗ್ಗೆ ವಿಶೇಷ ಅಧ್ಯಯನ ಕೈಗೆತ್ತಿಕೊಳ್ಳಲಾಗಿದೆ. ಕಾಳಿಂಗ ಸರ್ಪಕ್ಕೆ ಪಿಟ್‌ಟ್ಯಾಗ್ ಅಳವಡಿಸುವ ಮೂಲಕ ಗಣತಿ ಕಾರ್ಯ ನಡೆಯುತ್ತಿದೆ. ಎರಡು ವಿಶೇಷ ತಂತ್ರಜ್ಞಾನ ಚಿಪ್ ಅಳವಡಿಸುವ ಮೂಲಕ ದಿನಚರಿಯನ್ನು ಅಧ್ಯಯನ ಮಾಡುತ್ತಿದ್ದೇವೆ. ಸದ್ಯಕ್ಕೆ ಮೂರು ವರ್ಷಗಳ ಅಧ್ಯಯನ ಯೋಜನೆ ಇದಾಗಿದೆ.
ಅಜಯ್‌ಗಿರಿ, ಕಾಳಿಂಗ ಸರ್ಪ ಜೀವನ ಕ್ರಮ ಅಧ್ಯಯನಕಾರ, ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ

Leave a Reply

Your email address will not be published. Required fields are marked *