ಯುಕೆಯಲ್ಲಿ 40 ವರ್ಷಗಳಿಂದ ಆಧುನಿಕ ಗುಲಾಮಗಿರಿಗೆ ಒಳಪಟ್ಟಿದ್ದ ವ್ಯಕ್ತಿ ರಕ್ಷಣೆ

ಕುಂಬ್ರಿಯಾ: ಯುನೈಟೆಡ್​ ಕಿಂಗ್​ಡಮ್​ (ಯುಕೆ)ನಲ್ಲಿ ಸುಮಾರು 40 ವರ್ಷಗಳಿಂದಲೂ ಆರು ಅಡಿಗಳಷ್ಟಿರುವ ಶೆಡ್‌ನಲ್ಲಿ ವಾಸಿಸುತ್ತಾ ಆಧುನಿಕ ಗುಲಾಮಗಿರಿಗೆ ಸಿಲುಕಿದ್ದಾನೆನ್ನಲಾದ ವ್ಯಕ್ತಿಯನ್ನು ವಿಶೇಷ ಅಧಿಕಾರಿಗಳು ರಕ್ಷಿಸಿದ್ದಾರೆ.

ಕುಂಬ್ರಿಯಾದ ಕಾರ್ಲಿಸ್ಲೆ ವಸತಿ ಪ್ರದೇಶದಲ್ಲಿದ್ದ ಮರದ ಶೆಡ್‌ನಲ್ಲಿ ಕೇವಲ ಕುರ್ಚಿ ಮತ್ತು ಮಣ್ಣಾದ ಹಾಸಿಗೆಯಿತ್ತು. ಅಲ್ಲಿ ವಾಸವಿದ್ದ 58 ವರ್ಷದ ಬ್ರಿಟಿಷ್‌ ವ್ಯಕ್ತಿಯನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.

ಕಾರ್ಮಿಕರ ದುರ್ಬಳಕೆ ತಡೆ ಮತ್ತು ಕಾರ್ಮಿಕರ ರಕ್ಷಣೆಗಾಗಿ ಕೆಲಸ ಮಾಡುವ ಗ್ಯಾಂಗ್ ಮಾಸ್ಟರ್ಸ್ ಮತ್ತು ಲೇಬರ್ ಅಬ್ಯೂಸ್ ಅಥಾರಿಟಿ (GLAA) ಅಧಿಕಾರಿಗಳು ಗೌಪ್ಯ ಸಹಾಯವಾಣಿಗೆ ಬಂದ ಕರೆಯನ್ನಾಧರಿಸಿ ದಾಳಿ ನಡೆಸಿದ್ದು, ಆಧುನಿಕ ಗುಲಾಮಗಿರಿ ಅಪರಾಧ ಶಂಕೆ ಮೇರೆಗೆ 79 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಸಂತ್ರಸ್ತನನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ.

ಆ ಶೆಡ್‌ನಲ್ಲಿ ವ್ಯಕ್ತಿಯು ಕಳೆದ 40 ವರ್ಷಗಳಿಂದಲೂ ವಾಸಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿತ್ತು. ಆತ ನಮಗೆ ಸಿಕ್ಕಾಗ ಮೊಲದ ಮರಿಯ ಹಾಗೆ ಕುಳಿತಿದ್ದ ಮತ್ತು ಗೊಂದಲಕ್ಕೀಡಾಗಿದ್ದ. ಮಲಗಿದ್ದಲ್ಲಿಂದ ಎದ್ದು ನಿಂತಿದ್ದ. ಆ ಶೆಡ್‌ ಸಂಪೂರ್ಣ ಕೊಳೆಯಾಗಿತ್ತು ಮತ್ತು ಧೂಳು ತುಂಬಿಕೊಂಡಿತ್ತು. ಅಲ್ಲಿ ಅತ್ಯಂತ ಚಳಿ ಇತ್ತು. ಅಲ್ಲಿದ್ದ ಪರಿಸ್ಥಿತಿಯಲ್ಲಿ ಯಾವುದೇ ಮನುಷ್ಯನು ಜೀವಿಸುವಂತಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆ ವ್ಯಕ್ತಿಯು 16, 17 ನೇ ವಯಸ್ಸಿನಲ್ಲಿದ್ದಾಗಿನಿಂದಲೂ ಸಂಬಳ ಕೊಡದೆ ಕೆಲಸ ಮಾಡುವಂತೆ ಒತ್ತಾಯಿಸಲಾಗಿತ್ತು. ಹಾಗೂ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆಂಬುದು ಕೂಡ ಅಸ್ಪಷ್ಟವಾಗಿತ್ತು. ದೀರ್ಘಾವಧಿಯಿಂದಲೂ ಅಲ್ಲಿರುವುದರಿಂದ ಆಘಾತಕ್ಕೆ ಒಳಗಾಗಿರುವ ವ್ಯಕ್ತಿಯು ಸಹಜ ಸ್ಥಿತಿಯತ್ತ ತೆರಳಲು ಸಮಯ ಬೇಕಾಗುತ್ತದೆ. ನನ್ನ 40 ವರ್ಷಗಳ ವೃತ್ತಿ ಜೀವನದಲ್ಲಿ ಅತಿ ದೀರ್ಘಕಾಲ ಗುಲಾಮಗಿರಿಗೆ ಒಳಪಟ್ಟಿರುವ ಪ್ರಕರಣ ಕಂಡುಬಂದಿರುವುದು ಇದೇ ಮೊದಲು ಎಂದು ಹೇಳಿದ್ದಾರೆ. (ಏಜೆನ್ಸೀಸ್)