ಮೇಘಾಲಯದ ಕಲ್ಲಿದ್ದಲ್ಲು ಗಣಿಯಲ್ಲಿ ಪತ್ತೆಯಾಗಿದ್ದ ಕಾರ್ಮಿಕನ ಮೃತದೇಹ ಮೇಲೆತ್ತುವ ಕಾರ್ಯ ಕೈಬಿಟ್ಟ ರಕ್ಷಣಾ ಪಡೆ

ಶಿಲ್ಲಾಂಗ್​: ಮೇಘಾಲಯದ ಪೂರ್ವ ಜೈಂತಿಯಾ ಹಿಲ್ಸ್​ನ ಕಲ್ಲಿದ್ದಲು ಗಣಿಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಪತ್ತೆಯಾಗಿದ್ದ ಕಾರ್ಮಿಕನೊಬ್ಬನ ಮೃತದೇಹವನ್ನು ಮೇಲೆತ್ತುವ ಕಾರ್ಯವನ್ನು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ನೌಕಾ ಪಡೆ ಕೈಬಿಟ್ಟಿದೆ.

ಕಲ್ಲಿದ್ದಲು ಗಣಿಯಲ್ಲಿ ಕಳೆದ ಡಿಸೆಂಬರ್​ 13ರಂದು ಸಂಭವಿಸಿದ್ದ ಅವಘಡದಲ್ಲಿ 15 ಕಾರ್ಮಿಕರು ಸಿಲುಕಿಕೊಂಡಿದ್ದರು. ಅವರನ್ನು ರಕ್ಷಿಸುವ ಕಾರ್ಯ ಕುಂಟುತ್ತಾ ಸಾಗಿತ್ತು. ಹೀಗಿರುವಾಗಲೇ ಜ.18ರಂದು ನೀರು ತುಂಬಿರುವ ಗಣಿಯ ಆಳದಲ್ಲಿ ಕಾರ್ಮಿಕನೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಕಳೆದ ಮೂರು ದಿನಗಳಿಂದಲೂ ದೇಹಯವನ್ನು ಮೇಲೆತ್ತುವ ಕಾರ್ಯವನ್ನು ರಕ್ಷಣಾ ಪಡೆಗಳು ಆರ್​ಒವಿ ಯಂತ್ರಗಳ ಮೂಲಕ ನಡೆಸುತ್ತಿವೆ. ಆದರೆ, ಯಂತ್ರಗಳು ಪ್ರಯತ್ನ ನಡೆಸಿದಾಗೆಲ್ಲ ದೇಹ ಛಿದ್ರವಾಗುತ್ತಿದೆ. ಹೀಗಾಗಿ ದೇಹವನ್ನು ಮೇಲೆತ್ತುವ ಕಾರ್ಯವನ್ನು ನಿಲ್ಲಿಸಲಾಗಿದೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡ ತಿಳಿಸಿದೆ.

ದೇಹವನ್ನು ಮೇಲೆತ್ತುವಂತೆ 15 ಕಾರ್ಮಿಕರ ಕುಟುಂಬಗಳ ಪೈಕಿ ನಾಲ್ಕು ಕುಟುಂಬಗಳು ಶನಿವಾರ ರಕ್ಷಣಾ ತಂಡವನ್ನು ಒತ್ತಾಯಿಸಿದ್ದವು. ಆದರೆ, ಆ ಪ್ರಯತ್ನ ವಿಫಲವಾಗಿದೆ.

ಏನಿದು ಆರ್​ಒವಿ?

ನೀರಿನ ಅಡಿಯಲ್ಲಿ ಸಿಲುಕಿರುವ ವಸ್ತುಗಳನ್ನು ಹೊರತೆಗೆಯಲು ವಿಶೇಷವಾಗಿ ವಿನ್ಯಾಸ ಮಾಡಲಾದ ಯಂತ್ರ ರಿಮೋಟ್ಲಿ ಆಪರೇಟೆಡ್​ ವೆಹಿಕಲ್​. (ಆರ್​ಒವಿ) ಈ ಯಂತ್ರ ನೀರಿನ ಆಳದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ. ರೊಬೋಟಿಕ್​ ವ್ಯವಸ್ಥೆ ಹೊಂದಿದ್ದು ನೀರಿನ ಆಳದಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲು ಬಳಸಲಾಗುತ್ತದೆ. ಇದನ್ನು ರಕ್ಷಣಾ ಸಿಬ್ಬಂದಿ ಚಾಲನೆ ಮಾಡುತ್ತಾರೆ.

Leave a Reply

Your email address will not be published. Required fields are marked *