ಶಿರೂರಿನಲ್ಲಿ ಮೂರನೇ ಹಂತದ ಕಾರ್ಯಾಚರಣೆಗೆ ಚಾಲನೆ

ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದವರ ಹುಡುಕಾಟಕ್ಕೆ ಗೋವಾದಿಂದ ಆಗಮಿಸಿದ ಬಾರ್ಜ್ ಹಾಗೂ ಹೂಳೆತ್ತುವ ಯಂತ್ರಗಳು ಶುಕ್ರವಾರ ಸಾಯಂಕಾಲದಿಂದ ಮೂರನೇ ಹಂತದ  ಕಾರ್ಯಾಚರಣೆ ಪ್ರಾರಂಭಿಸಿವೆ.
ಶಾಸಕ ಸತೀಶ ಸೈಲ್, ಕೇರಳ ಮಂಜೇಶ್ವರ ಶಾಸಕ ಎಂ.ಕೆ.ಅಶ್ರಫ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹಾಗೂ ಎಸ್‌ಪಿ ಎಂ.ನಾರಾಯಣ ಪೂಜೆ ಸಲ್ಲಿಸಿ ಕಾರ್ಯಾಚರಣೆಗೆ ಚಾಲನೆ ನೀಡಿದರು. ಹೆದ್ದಾರಿ ಸಮೀಪ ಸ್ವಲ್ಪ ಮಣ್ಣು ತೆರವು ಮಾಡುವ ಹೊತ್ತಿಗೆ ಕತ್ತಲೆಯಾಗಿದ್ದರಿಂದ ಮೊದಲ ದಿನದ ಕಾರ್ಯಾಚರಣೆಯನ್ನು ಸ್ಥಗಿತ ಮಾಡಲಾಯಿತು.
ಮೊದಲ ಹಂತದ ಕಾರ್ಯಾಚರಣೆಯ ವೇಳೆ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಅವರ ನೇತೃತ್ವದ ತಂಡವು ಸುಧಾರಿತ ಸೋನಾರ್, ಲ್ಯಾಂಡ್ ಪೆನೆಟ್ರೇಟಿಂಗ್ ರೇಡಾರ್ ಮುಂತಾದ ಸಾಧನಗಳನ್ನು ಬಳಸಿ ಲಾರಿ ಇರಬಹುದಾದ ನಾಲ್ಕು ಸ್ಥಳಗಳನ್ನು ಗುರುತು ಮಾಡಿದೆ. ಮುಳುಗು ತಜ್ಞ ಈಶ್ವರ ಮಲ್ಪೆ ಸಹ ಅಲ್ಲಿಯೇ ಮುಳುಗಿ ಲಾರಿಯ ಅವಶೇಷಗಳನ್ನು ತೆಗೆದಿದ್ದಾರೆ. ಅದೇ ಸ್ಥಳಗಳನ್ನು ಕೇಂದ್ರೀಕರಿಸಿ ಶನಿವಾರ ಮಣ್ಣು ತೆರವು ಮಾಡಿ, ಲಾರಿ ಹಾಗೂ ನಾಪತ್ತೆಯಾದವರನ್ನು ಹುಡುಕುವ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ.
ನದಿಗೆ ಬರಲೂ ಸಾಹಸ:
ಗಂಗಾವಳಿ ನದಿಯಲ್ಲಿ ನೀರು ವೇಗವಾಗಿ ಹರಿಯುತ್ತಿರುವುದು ಹಾಗೂ ಮಳೆಯ ಕಾರಣ ನದಿಯ ನೀರು ಕೆಂಪು ರಾಡಿಯಾಗಿರುವುದು ಇದುವರೆಗಿನ ಕಾರ್ಯಾಚರಣೆಗೆ ತೊಡಕಾಗಿತ್ತು. ಈಗ ನೀರಿನ ಹರಿವಿನ ವೇಗ ಕಡಿಮೆಯಾಗಿದೆ. ಮಾತ್ರವಲ್ಲ ನೀರು ತಿಳಿಯಾಗಿದೆ. ಆದರೆ, ಹೂಳೆತ್ತುವ ಯಂತ್ರವನ್ನು ನದಿಗೆ ತರಲು ಸಾಕಷ್ಟು ಸಾಹಸ ಪಡಬೇಕಾಯಿತು. ಎರಡು ದಿನಗಳ ಹಿಂದೇ ಸಮುದ್ರದಲ್ಲಿ ಬಾರ್ಜ್ ಹಾಗೂ ಯಂತ್ರಗಳು ಬಂದಿದ್ದವು. ಆದರೆ, ಅದನ್ನು ನದಿಗೆ ಕೊಂಡೊಯ್ಯಲು ಸಾಕಷ್ಟು ಹೊತ್ತು ಕಾಯಬೇಕಾಯಿತು. ಸಮುದ್ರ, ನದಿ ಸೇರುವ ಜಾಗದಲ್ಲಿ ಹೂಳು ತುಂಬಿಕೊಂಡಿದ್ದು, ಉಬ್ಬರದ ಸಮಯ ನೋಡಿ ಬಾರ್ಜ್ನ್ನು ದಾಟಿಸಲಾಯಿತು. ನಂತರ ಎರಡು ಸೇತುವೆಗಳನ್ನು ದಾಟುವಾಗ ಎತ್ತರದ ಯಂತ್ರಗಳು ಸೇತುವೆಗೆ ತಾಗಿ ಹಾನಿಯಾಗುವ ಅಪಾಯ ಇರುವುದರಿಂದ ಸಮುದ್ರದಲ್ಲಿ ಇಳಿತ ಬರುವವರೆಗೂ ಕಾಯಲಾಯಿತು. ಶುಕ್ರವಾರ ಬೆಳಗ್ಗೆ ಬಾರ್ಜ್ ಕಾರ್ಯಾಚರಣೆಯ ಸ್ಥಳ ಸೇರಿತ್ತು.

ಎರಡು ತಿಂಗಳ ನಂತರ
ಜುಲೈ 16 ರಂದು ಗುಡ್ಡ ಕುಸಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣಿನ ರಾಶಿ ಬಿದ್ದಿತ್ತು. ಅಲ್ಲದೇ ಹೆದ್ದಾರಿ ಪಕ್ಕದ ಗಂಗಾವಳಿ ನದಿಯಲ್ಲೂ ದೊಡ್ಡ ಮಣ್ಣಿನ ರಾಶಿ ತುಂಬಿಕೊಂಡಿತ್ತು. ದುರ್ಘಟನೆಯಲ್ಲಿ 11 ಜನ ನಾಪತ್ತೆಯಾಗಿದ್ದರು. ಅದರಲ್ಲಿ 8 ಜನರ ಶವಗಳು ಇದುವರೆಗೆ ಸಿಕ್ಕಿವೆ. ಭಾರತೀಯ ನೌಕಾಸೇನೆ, ಭೂ ಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ನಿರಂತರ ಕಾರ್ಯಾಚರಣೆ ನಡೆಸಿದ ಬಳಿಕವೂ ಕೇರಳದ ಅರ್ಜುನ್, ಸ್ಥಳೀಯ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ನಾಪತ್ತೆಯಾಗಿದ್ದಾರೆ. ಎರಡು ಲಾರಿಗಳು ಕಾಣೆಯಾಗಿದ್ದವು. ಅವುಗಳನ್ನು ಹುಡುಕಾಟ ಮಾಡಬೇಕು ಎಂದು ತೀವ್ರ ಒತ್ತಡ ಕೇಳಿ ಬಂದಿತ್ತು. ಕೇರಳ ಸಂಸದ, ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರ ಪ್ರದೇಶಾಭಿವೃದ್ಧಿ ನಿಽ ಹಾಗೂ ಖಾಸಗಿ ಐಆರ್‌ಬಿ ಕಂಪನಿಯಿAದ ಸುಮಾರು 91 ಲಕ್ಷ ರೂ. ಅನುದಾನ ಹೊಂದಿಸಿ, ಗೋವಾದಿಂದ ನದಿಯಲ್ಲಿ ಹೂಳೆತ್ತುವ ಯಂತ್ರ ತರಿಸಿ ಕಾರ್ಯಾಚರಣೆ ಶುರು ಮಾಡಲಾಗಿದೆ.

ಏನು ಕೆಲಸವಾಗಲಿದೆ..?

ಗೋವಾದಿಂದ ತರಿಸಲಾದ ಯಂತ್ರಗಳಲ್ಲಿ ವಿವಿಧ ಸೌಲಭ್ಯಗಳಿವೆ. ಅದರಲ್ಲಿ ಒಂದು ಬಾರ್ಜ್ ಮೇಲೆ ಕ್ರೇನ್ ಇದ್ದು, ನದಿಯ ನೀರಿನ ಮೇಲೆ ತೇಲುವ ಬಾರ್ಜ್ ಮೇಲಿನಿಂದಲೇ ಕ್ರೇನ್ ದೊಡ್ಡ ಕಲ್ಲು, ಮರದ ದಿಮ್ಮಿಗಳನ್ನು ಎತ್ತಲಿದೆ. ಇನ್ನೊಂದು ಪೋಕ್ಲೈನ್ ಇದ್ದು, ಅದು ಮಣ್ಣನ್ನು ತೆಗೆದು ಎರಡನೇ ಬಾರ್ಜ್ ಗೆ ಹಾಕಲಿದೆ. ಎರಡನೇ ಬಾರ್ಜ್ ಮಣ್ಣನ್ನು ನದಿಯ ಇನ್ನೊಂದು ಭಾಗಕ್ಕೆ ಸಾಗಿಸಲಿದೆ. ಬಾರ್ಜ್ಗಳ ಓಡಾಟ ನಿಯಂತ್ರಿಸಲು ಟಗ್ ಇದೆ. ಇದೆಲ್ಲವನ್ನೂ 8 ಜನ ಸಿಬ್ಬಂದಿ ನಿರ್ವಹಿಸಲಿದ್ದಾರೆ.
ಗುಡ್ಡ ಕುಸಿತದಿಂದ ನದಿಯ ನಡುವೆ ಸುಮಾರು 100 ಲೋಡ್‌ಗೂ ಅಧಿಕ ಮಣ್ಣು, ಬೃಹತ್ ಕಲ್ಲುಗಳು, ಎರಡು ದೊಡ್ಡ ಮರಗಳು, ಬೃಹತ್ ವಿದ್ಯುತ್ ಕಂಬದ ಒಂದು ತುಂಡು, ನಾಟಾ ತುಂಬಿದ ಒಂದು ಬೆಂಜ್ ಲಾರಿ, ಟ್ಯಾಂಕರ್ ಒಂದರ ಇಂಜಿನ್ ಭಾಗ, ಚಹಾ ಅಂಗಡಿಯ ಸಾಮಗ್ರಿಗಳು ಹಾಗೂ ಅವಶೇಷಗಳು ಇರುವ ಸಾಧ್ಯತೆ ಎಂದು ಅಂದಾಜಿಸಲಾಗಿದೆ. ಈ ಹಿಂದೆ ನದಿ ದಡದ ಮೇಲೆ ನಿಂತು ಲಾಂಗ್ ಆರ್ಮ್ ಭೂಮರ್ ಮೂಲಕ ಮಣ್ಣು ತೆರವು ಮಾಡುವ ಯತ್ನ ವಿಫಲವಾಗಿತ್ತು. ಮುಳುಗು ತಜ್ಞರೂ ಲಾರಿಯನ್ನು ಹುಡುಕಲಾರದೇ ಸೋತಿದ್ದರು. ಇದರಿಂದ ಈಗ ಸಮುದ್ರದಲ್ಲಿ ಹೂಳೆತ್ತುವ ಯಂತ್ರಗಳು ಕಾರ್ಯಾಚರಣೆ ಪ್ರಾರಂಭಿಸಿವೆ. 


Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…