ಬೀದಿ ಗೋವುಗಳ ಗೋಮಾಳಕ್ಕೆ ಸ್ಥಳಾಂತರಿಸಲು ಮನವಿ

>>>

ವಿಜಯವಾಣಿ ಸುದ್ದಿಜಾಲ ಮಂಗಳೂರು
ನವಮಂಗಳೂರು ಬಂದರು, ಎಂಸಿಎಫ್, ಕೆಐಒಸಿಎಲ್ ಆಸುಪಾಸಿನಲ್ಲಿ ತಿರುಗಾಡುತ್ತಿರುವ ಬೀಡಾಡಿ ದನಗಳನ್ನು ಯಾವುದಾದರೂ ಗೋಮಾಳಕ್ಕೆ ಸ್ಥಳಾಂತರಿಸುವಂತೆ ಪ್ರಾಣಿಪ್ರಿಯರು ಇದೀಗ ಬೇಡಿಕೆ ಮುಂದಿರಿಸಿದ್ದಾರೆ.

ಈ ಭಾಗದಲ್ಲಿ ಹಿಂದೆ ಜನವಸತಿ ಇತ್ತು, ಆ ಬಳಿಕ ಬಂದರು ಅಭಿವೃದ್ಧಿಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಯಿತು. ಆಗ ಅಲ್ಲಿ ವಸತಿ ಇದ್ದಂತಹವರು ಕೆಲವು ಜಾನುವಾರುಗಳನ್ನು ಅಲ್ಲೇ ಬಿಟ್ಟು ಹೋಗಿದ್ದರು. ಹಾಗೆ ಬಿಟ್ಟ ದನಗಳು ಅಲ್ಲೇ ಮೇಯುತ್ತಾ, ವಂಶಾಭಿವೃದ್ಧಿ ಮಾಡುತ್ತಾ ಹೋದವು. ಈಗ ಮುನ್ನೂರಕ್ಕೂ ಹೆಚ್ಚು ದನಕರುಗಳು ಇಲ್ಲಿ ಅಲೆದಾಡುತ್ತವೆ. ಸಾಮಾನ್ಯವಾಗಿ ಪಣಂಬೂರು ಎನ್‌ಎಂಪಿಟಿ, ಎಂಸಿಎಫ್, ಕೆಐಒಸಿಎಲ್ ಕಂಪನಿಗಳ ಆಸುಪಾಸಿನ ಖಾಲಿ ಜಾಗದಲ್ಲಿರುವ ಹುಲ್ಲು ಗಿಡ ತಿನ್ನುತ್ತಾ ಇರುತ್ತವೆ. ಹುಲ್ಲು ಸಿಗದೆ ಹೋದರೆ ಪ್ಲಾಸ್ಟಿಕ್ ತಿನ್ನುವುದೂ ಇದೆ. ಕೆಲ ತಿಂಗಳ ಹಿಂದೆ ಕೊಂಬಿನಲ್ಲಿ ಕ್ಯಾನ್ಸರ್‌ಗಡ್ಡೆ ಆದ ಎತ್ತು ಅಪಾರ ವೇದನೆ ಅನುಭವಿಸಿ ಮೃತಪಟ್ಟಿತ್ತು. ಅದರ ಮರಣೋತ್ತರ ಪರೀಕ್ಷೆ ಮಾಡಿದಾಗ ಹೊಟ್ಟೆಯಲ್ಲಿ ರಾಶಿ ಪ್ಲಾಸ್ಟಿಕ್ ಸಿಕ್ಕಿತ್ತು. ಇಷ್ಟೇ ಅಲ್ಲದೆ ಈ ಬೀಡಾಡಿ ದನಕರುಗಳು ಗುಂಪು ಗುಂಪಾಗಿ ತಿರುಗಾಡುತ್ತಿದ್ದು, ಹೈವೇಯಲ್ಲಿ ಅತಿವೇಗದಲ್ಲಿ ಸಂಚರಿಸುವ ವಾಹನಗಳಿಗೆ ಡಿಕ್ಕಿಯಾದ ನಿದರ್ಶನವೂ ಇದೆ.

ಡಿಸಿಗೆ ಮನವಿ: ಈ ಮೂಕ ಪ್ರಾಣಿಗಳಿಗೆ ಸೂಕ್ತ ಜಾಗವೊಂದನ್ನು ಗುರುತಿಸಿ ಗೋಮಾಳ ಸಿದ್ಧಗೊಳಿಸಬೇಕು ಎಂದು ದ.ಕ ಜಿಲ್ಲೆಯ ಸೊಸೈಟಿ ಫಾರ್ ಪ್ರಿವೆನ್ಶನ್ ಆಫ್ ಕ್ರುವೆಲ್ಟಿ ಟು ಅನಿಮಲ್ಸ್ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ. ಇದು ಆಗುವ ತನಕ ಈಗ ಇರುವ ಪ್ರದೇಶದಲ್ಲಿ ಸೂಕ್ತ ಬ್ಯಾರಿಕೇಡ್ ಹಾಕಿ ರಕ್ಷಣೆ ಒದಗಿಸಬೇಕು, ಕನಿಷ್ಠ ಆಹಾರ, ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಇಲ್ಲಿ ಕಾರ್ಯಾಚರಿಸುತ್ತಿರುವ ಕಾರ್ಖಾನೆಗಳು ತಮ್ಮ ಸಮುದಾಯ ನಿಧಿಯನ್ನು ಬಳಕೆ ಮಾಡುವಂತೆ ಉತ್ತೇಜಿಸಬೇಕು ಎಂದು ಒತ್ತಾಯಿಸಲಾಗಿದೆ.

ಜೀವನೋಪಾಯದ ಹುಲ್ಲು ತೆರವು: ನಗರದ ಹೊರವಲಯದ ಎಂಸಿಎಫ್ ಬಳಿ ಇರುವ ಚರಂಡಿ ಇಕ್ಕೆಲಗಳಲ್ಲಿ ಬೆಳೆದಿರುವ ಹುಲುಸಾದ ಹುಲ್ಲನ್ನು ಚರಂಡಿ ಕ್ಲೀನ್ ಹೆಸರಲ್ಲಿ ತೆರವುಗೊಳಿಸಲಾಗಿದೆ. ಇದರಿಂದಾಗಿ ನವಮಂಗಳೂರು ಬಂದರು, ಪಣಂಬೂರು ಆಸುಪಾಸಿನಲ್ಲಿ ಬೀಡಾಡಿಯಾಗಿ ಬದುಕುತ್ತಿರುವ ನೂರಾರು ಹಸುಗಳಿಗೆ ಮೇವಿನ ಕೊರತೆಯಾಗಿದೆ ಎಂದು ಪ್ರಾಣಿಪ್ರಿಯರು ಅಳಲು ತೋಡಿಕೊಂಡಿದ್ದಾರೆ. ಎಂಸಿಎಫ್ ಮುಂಭಾಗದಲ್ಲಿರುವ ತೋಡಿನಲ್ಲಿ ಹೆಚ್ಚಾಗಿ ನೀರಿನ ತೇವಾಂಶ ಸಾಕಷ್ಟಿರುವುದರಿಂದ ಅಲ್ಲಿ ಹಸಿರಾದ ಪರಿಸರವಿತ್ತು. ಹುಲ್ಲು ಕೂಡ ಬೆಳೆದಿತ್ತು. ಹಿಂದಿನಿಂದಲೇ ನವಮಂಗಳೂರು ಕಂಪನಿ ಆವರಣದಲ್ಲಿ ನೂರಾರು ದನಗಳು ಇವೆ. ಅವುಗಳು ಬೇಕಾದಾಗ ಬಂದು ಹುಲ್ಲು ತಿನ್ನುತ್ತಿದ್ದವು. ಆದರೀಗ ಅದನ್ನು ತೆರವುಗೊಳಿಸಲಾಗಿದ್ದರಿಂದ ದನಗಳು ಮೇವಿಗೆ ಪರದಾಡಬೇಕಿದೆ.